Thursday, December 5, 2024
Google search engine
Homeಅಂಕಣಗಳುಬಣ್ಣವೇ ಬದುಕು - ಜಗದೀಶ್ ಮಲ್ನಾಡ್

ಬಣ್ಣವೇ ಬದುಕು – ಜಗದೀಶ್ ಮಲ್ನಾಡ್

ಲೇಖನ : ಸೌಮ್ಯ ಗಿರೀಶ್

ಬಣ್ಣವೇ ಬದುಕು – ಜಗದೀಶ್ ಮಲ್ನಾಡ್

ಕಲೆ ಎಲ್ಲರನ್ನೂ ಕೈಬೀಸಿ ಕರೆದರೂ ಅಪ್ಪಿಕೊಳ್ಳುವುದು ಕೆಲವರನ್ನೇ, ಹಾಗೆ ಕಲಾ ಸರಸ್ವತಿ ಒಪ್ಪಿ-ಅಪ್ಪಿಕೊಂಡ ಕಲಾವಿದರು ಜಗದೀಶ್ ಮಲ್ನಾಡ್. ನಾಟಕರಂಗದಿಂದ ಪ್ರಾರಂಭವಾದ ಇವರ ಪಯಣ ಹಿರಿತೆರೆಯಲ್ಲೂ ಪಸರಿಸಿ ಇಂದು ಕಿರುತೆರೆಯ ಮೂಲಕ ಮನೆಮಾತಾಗುವವರೆಗೂ ಇವರನ್ನು ಬೆಳೆಸಿದೆ. ನಮ್ಮೂರ ಹಿರಿಮೆಯಾದ ಇವರನ್ನು ಪರಿಚಯಿಸುವುದು ನಮ್ಮ ಹೆಮ್ಮೆಯೇ ಸರಿ.

ಮಲೆನಾಡ ಮಡಿಲಮಗ
ಹುಟ್ಟಿದ್ದು ಚಿಕ್ಕಮಗಳೂರಿನ ಬಸರಿಕಟ್ಟೆಯಲ್ಲಿ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಜಗದೀಶ್‌ರವರ ಪೋಷಕರಿಗೆ ಒಟ್ಟು 7 ಜನ ಮಕ್ಕಳು, ತಂದೆ ಕೃಷಿಕರು, ಅಮ್ಮನಿಗೆ ಕಿವಿ ಕೇಳಿಸುತ್ತಿರಲಿಲ್ಲ, ಮಾತೂ ಇಲ್ಲ, ಜೀವನದ ಹಲವಾರು ಕಷ್ಟಗಳನ್ನು ಅನುಭವಿಸುತ್ತಲೇ ಬೆಳೆದವರು ಇವರು. ಚಿಕ್ಕಮಗಳೂರಿನಲ್ಲಿ ಶಿಕ್ಷಣದ ವ್ಯವಸ್ಥೆ ಇರದಿದ್ದ ಕಾರಣ ಶಿವಮೊಗ್ಗದ ಅಜ್ಜನ ಮನೆಗೆ ಬಂದರು ಜಗದೀಶ್. ಕರ್ನಾಟಕ ಸಂಘದ ಪಕ್ಕದಲ್ಲಿರುವ ಮೇಯ್ನ್ ಮಿಡ್ಲ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಡಿವಿಎಸ್‌ನಲ್ಲಿ ಪ್ರೌಢ ಶಿಕ್ಷಣ, ಸಹ್ಯಾದ್ರಿ ಕಾಲೇಜ್‌ನಲ್ಲಿಪಿಯು ಹಾಗೂ ನ್ಯಾಷನಲ್ ಕಾಲೇಜಿನಲ್ಲಿ ಬಿ.ಕಾಂ ಮುಗಿಸುವ ವೇಳೆಗಾಗಲೇ ಇವರು ಶಿವಮೊಗ್ಗದವರೇ ಆಗಿಹೋಗಿದ್ದರು.

ಜೈಲಿನಲ್ಲಿದ್ದರೂ ಬಿಡಲಿಲ್ಲ ಬಣ್ಣದ ಗೀಳು
ಕಾಲೇಜು ದಿನಗಳಿಂದಲೇ ನಾಟಕಗಳ ಮೇಲೆ ಪ್ರೀತಿ ಹುಟ್ಟಿತ್ತು. ಇವರ ಗೆಳೆಯರಾದ ಎನ್.ಆರ್.ಪ್ರಕಾಶ್ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. ಇವರ ಸಾಂಗತ್ಯದಲ್ಲೇ ಜಗದೀಶ್‌ರವರು ಬಣ್ಣ ಹಚ್ಚಿದ್ದು ಕೂಡ. ನಾ.ರತ್ನ ಅವರ ’ಎಲ್ಲಿಗೆ’ ನಾಟಕದಲ್ಲಿ ಸ್ತ್ರೀ ಪಾತ್ರಕ್ಕಾಗಿ ಮೊದಲ ಬಾರಿ ಬಣ್ಣಹಚ್ಚಿ ನಮ್ಮ ಶಿವಮೊಗ್ಗದ ಆಂಜನೇಯನ ದೇವಸ್ಥಾನದಲ್ಲಿ ನಾಟಕ ಪ್ರದರ್ಶಿಸಿದ ಅನುಭವ ಇನ್ನೂ ಅವರ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ. ಇಷ್ಟು ಹೊತ್ತಿಗೆ ಕಾಲೇಜಿನ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯವಾಗಿದ್ದ ಜಗದೀಶ್‌ರವರು ತುರ್ತು ಪರಿಸ್ಥಿತಿ ಘೋಷಣೆಯಾದಾಗ ಪರಿಷತ್‌ನಿಂದಾಗಿ ಜೈಲು ಪಾಲಾದರೂ. ಆದರೇನಂತೆ ಒಮ್ಮೆ ಬಣ್ಣ ಹಚ್ಚಿದ ಗೀಳು ಬಿಡಲು ಸಾಧ್ಯವೆ? ಜೈಲಿನಲ್ಲಿ ಇವರ ಸಹಪಾಠಿಗಳಾಗಿದ್ದವರು ಪಿಜಿಆರ್ ಸಿಂಧ್ಯಾ, ವಿಎಸ್ ಆಚಾರ್ಯ, ಹಾಗೂ ಇಂದಿನ ಅನೇಕ ಖ್ಯಾತನಾಮರು. ಜೈಲಿನಲ್ಲಿಯೇ ಇವರು ಒಂದು ನಾಟಕ ನಿರ್ದೇಶಿಸಿ, ಪ್ರದರ್ಶಿಸಿದರೂ ಕೂಡ.

ಉದರ ನಿಮಿತ್ತ ಕಾಯಕ
ಜೈಲಿನಿಂದ ಹೊರಬಂದ ಮೇಲೆ ಹೊಟ್ಟೆಹೊರೆಯಲು ಒಂದು ಕಾಯಕ ಬೇಕಿತ್ತು ಮಣಿಪಾಲ್ ಇಂಡಸ್ಟ್ರೀಸ್ ಇವರಿಗೆ ಕೀಟನಾಶಕಗಳನ್ನು ಮಲೆನಾಡಿನ ಸುತ್ತಮುತ್ತ ಮಾರಾಟ ಮಾಡುವ ಜವಾಬ್ದಾರಿಯನ್ನು ಕೊಟ್ಟಿತು. ಕೆಲಸ ಮಾಡುತ್ತಿದ್ದರಾದರೂ ಅದೇಕೋ ಬಣ್ಣದ ಗೀಳು ಮಾತ್ರ ಬಿಡಲಾಗಲಿಲ್ಲ. ಸ್ನೇಹಿತ ಜ್ಞಾನದೇವ್ ಕಾಮತ್‌ರನ್ನು ಸಂಪರ್ಕಿಸಿ ಬೆಂಗಳೂರಿನಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಲು ಅನುಕೂಲವಾಗುವಂತೆ ಏನಾದರೂ ಆಗಬಹುದಾ? ಎಂದಾಗ ಅವರು ದಾರಿ ತೋರಿದ್ದು ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನೆಯಲ್ಲಿನ ನೌಕರಿ. ಟ್ರಾನ್ಸ್‌ಪೋರ್ಟ್ ಕಂಪನಿಗೂ ರಂಗಭೂಮಿಗೂ ಎತ್ತಣದೆತ್ತ ಸಂಬಂಧ ಎಂದು ಯೋಚಿಸಬೇಡಿ, ಈ ಕಂಪನಿ ಇದ್ದಿದ್ದು ಕಲಾವಿದರ ಸ್ವರ್ಗವಾದ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿ. ಹೀಗಾಗಿ ರಂಗಕ್ಕೆ ಹೆಚ್ಚು ಹತ್ತಿರವಾಗುತ್ತಾ ಹೋದರು ಜಗದೀಶ್.


ಟಿ.ಎನ್.ನರಸಿಂಹನ್‌ರಂತಹ ಗುರು ಸಾನಿಧ್ಯ

ಬೆಂಗಳೂರಿಗೆ ಬಂದು ರಂಗಕ್ಕೆ ಹತ್ತಿರವಾದ ಜಗದೀಶ್‌ರ ಜೊತೆ ನಿಂತವರು ಕಾಶಿನಾಥ್ (ಸಂಕೇತ್ ಕಾಶಿ), ಶಿವಮೊಗ್ಗದಿಂದಲೇ ಇಬ್ಬರೂ ಗೆಳೆಯರಾಗಿದ್ದ ಕಾರಣ ಹೆಚ್ಚು ಆಪ್ತತೆ ಇತ್ತು. ಇವರ ಮೂಲಕ ಮೈಸೂರಿನ ಖ್ಯಾತ ರಂಗಕರ್ಮಿ ನರಸಿಂಹನ್‌ರ ಸಾಂಗತ್ಯ ದೊರೆಯಿತು. ಅಷ್ಟು ಹೊತ್ತಿಗಾಗಲೇ ನರಸಿಂಹನ್ ಅವರ ನಿರ್ದೇಶನದ ತುಘಲಕ್, ಕತ್ತಲೆ ದಾರಿ ದೂರದಂತಹ ಹಲವಾರು ಪ್ರಯೋಗಾತ್ಮಕ ನಾಟಕಗಳಲ್ಲಿ ಕಾಶಿ ನಟಿಸಿದ್ದರು. ಅಂತಹ ರಂಗಕರ್ಮಿಯ ಸಾಂಗತ್ಯ ಎನ್ನುವುದಕ್ಕಿಂತ ’ಗುರು ಸಾಂಗತ್ಯ’ ಎಂದೇ ಹೇಳುವ ಜಗದೀಶ್‌ರವರು ನರಸಿಂಹನ್‌ರವರ ತಂಡ ಸೇರಲೇ ಬೇಕು ಎಂದು ಅವರ ಮನೆಯ ಪಕ್ಕದಲ್ಲೇ ಮನೆ ಮಾಡಿ, ನರಸಿಂಹನ್‌ರವ ಟೆಂಪೋ ಓಡಿಸುತ್ತಾ, ಗೌರಿಬಿದನೂರಿಗೆ ರೇಷ್ಮೆ ಹಾಕುತ್ತಾ, ಸಂಜೆ ನಾಟಕಗಳಲ್ಲಿ ಪಾಲ್ಗೊಳ್ಳುತ್ತಾ ಗುರುಸೇವೆ ಪ್ರಾರಂಭಿಸಿದರು. ಕೊನೆಗೆ ಪಕ್ಕದ ರೂಮ್‌ನಿಂದ ಗುರುವಿನ ರೂಮಿಗೇ ಬಿಡಾರ ಬದಲಾಯಿತು, ಜೊತೆಗೆ ರಂಗದ ಅವಕಾಶಗಳೂ ಕೂಡ. 27 ಮಾವಳ್ಳಿ ಸರ್ಕಲ್, ಮೀನಾಕ್ಷಿ ಮನೆ ಮೇಷ್ಟ್ರು, ಕತ್ತಲೆ ದಾರಿ ದೂರ, ಹೀಗೆ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿದರು. ಮೀನಾಕ್ಷಿ ಮನೆ ಮೇಷ್ಟು ಸಿನಿಮಾ ಕೂಡಾ ಆಗಿ ಅದರಲ್ಲಿ ಜಟ್ಟಿ ಪಾತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ನರಸಿಂಹನ್‌ರ ನಿರ್ದೇಶನದಲ್ಲಿ ’ತ್ರಿಶೂಲ’ ಸಿನಿಮಾದಲ್ಲಿ ಮೂಗನ ಪಾತ್ರ ಮಾಡಿದರು, ಆದರೆ ಚಿತ್ರಗಳು ತೆರೆಕಾಣಲಿಲ್ಲವಾದರೂ ಉದಯ ವಾಹಿನಿಯಲ್ಲಿ ಪ್ರಸಾರ ಕಂಡು ಜನರ ಮನ ಗೆದ್ದಿತ್ತು. ನಂತರ ಪದ್ಮಾ ಕುಮುಟ ಅವರ ಪತಿ ಸುರೇಶ್‌ರವರ ನಿರ್ದೇಶನದ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ’ಅರಿವು’ನಲ್ಲಿ ಇವರದ್ದು ವಿಲನ್ ಪಾತ್ರ.

ನರಸಿಂಹನ್‌ರ ಅಂಗಳದಿಂದ ಶಂಕರ್‌ನಾಗ್ ಗರಡಿವರೆಗೆ
ಆಗಷ್ಟೇ ಬಾಂಬೆಯಿಂದ ಬೆಂಗಳೂರಿಗೆ ಬಂದಿದ್ದ ಶಂಕರ್‌ನಾಗ್ ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ನಾನೊಂದು ನಾಟಕ ತಂಡ ಕಟ್ಬೇಕು ಅಂತ ಇದ್ದೀನಿ. ಆಸಕ್ತಿ ಇರೋರು ಜೊತೆ ಸೇರಬಹುದು ಅಂತ ಹೇಳಿದ ಕೂಡಲೇ ನರಸಿಂಹನ್‌ರವರು ಬಾಂಬೆಯಿಂದ ಬಂದಿದ್ದಾರೆ, ಏನೋ ಮಾಡಬೇಕು ಅನ್ನೋ ಕನಸು ಹೊತ್ತಿದ್ದಾರೆ, ಎಲ್ಲರೂ ಕೈಜೋಡಿಸೋಣ ಎಂದದ್ದೇ ಜಗದೀಶ್, ಕಾಶಿ, ಹೀಗೆ ಹಲವರು ಶಂಕರ್‌ನಾಗ್ ಗರಡಿ ಸೇರಿದರು. ಮುಂದೆ ನಡೆದದ್ದೆಲ್ಲಾ ಇತಿಹಾಸ. ’ಸಂಕೇತ್’ ಆ ಮಟ್ಟಕ್ಕೆ ಬೆಳೆಯಿತು. ಶಂಕರ್‌ನಾಗ್ ಜಗದೀಶ್‌ರಲ್ಲಿನ ನಿರ್ವಹಣಾ ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಗುರುತಿಸಿದ್ದರು. ಹಾಗಾಗಿ ಶಂಕರ್ ನಿರ್ದೇಶನ ಮತ್ತು ನಿರ್ಮಾಣದ ಎಲ್ಲಾ ಪ್ರಾಜೆಕ್ಟ್‌ಗಳಿಗೂ ನಿರ್ಮಾಣ ನಿರ್ವಹಣೆ ಜಗದೀಶ್‌ರದ್ದೇ ಆಗಿರುತ್ತಿದ್ದು. ಕೂಗು, ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಕ್ಕಳಿರಲವ್ವ ಮನೆ ತುಂಬಾ, ಆಕ್ಸಿಡೆಂಟ್, ಮಿಂಚಿನ ಓಟ, ನಾಗಮಂಡಲ ಹೀಗೆ ಶಂಕರ್ ಮಾಡಿದ ಎಲ್ಲಾ ಚಿತ್ರಗಳಿಗೂ ನಿರ್ಮಾಣ ನಿರ್ವಹಣೆ ಮಾಡಿದ ಹೆಗ್ಗಳಿಕೆ ಜಗದೀಶ್‌ರದ್ದು. ಈ ಕಿರೀಟದ ಮತ್ತೊಂದು ಗರಿಯೆಂದರೆ ಶಿವಮೊಗ್ಗದ ಆಗುಂಬೆಗೊಂದು ಹೆಮ್ಮೆ ತಂದುಕೊಟ್ಟ ’ಮಾಲ್ಗುಡಿ ಡೇಸ್’. ಕೇವಲ ನಿರ್ಮಾಣ ನಿರ್ವಹಣೆ ಮಾತ್ರವಲ್ಲದೆ ಅಲ್ಲೊಂದು ಇಲ್ಲೊಂದು ಪಾತ್ರಗಳಲ್ಲೂ ನಟಿಸುತ್ತಿದ್ದರು ಜಗದೀಶ್. ’ಸಿದ್ಧ’ ಚಿತ್ರದ ಮುಖ್ಯ ಭೂಮಿಕೆ, ’ಮಾಲ್ಗುಡಿ ಡೇಸ್’ನಲ್ಲಿ ನಟನೆ, ಹೀಗೆ ಸಾಗುತ್ತಲೇ ಇತ್ತು. ಆಕ್ಸಿಡೆಂಟ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗರಿ ದೊರೆತಾಗ ಅದನ್ನು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್‌ರಿಂದ ಚಿತ್ರತಂಡದ ಪರವಾಗಿ ಸ್ವೀಕರಿಸುವ ಒಂದು ಸುವರ್ಣಾವಕಾಶ ನನ್ನದಾಯಿತು ಎನ್ನುತ್ತಲೇ ನಾಗ್ ಗರಡಿಯ ಅನುಭವ ಹಂಚಿಕೊಂಡರು.

ಶಂಕರ್ ಇಲ್ಲದ ’ನಿಗೂಢ ರಹಸ್ಯ’
ಶಂಕರ್‌ನಾಗ್ ಅಭಿನಯಿಸಿದ, ಆಲೂರು ರಮೇಶ್‌ಭಟ್ ನಿರ್ದೇಶಿಸಿದ ಚಿತ್ರ ’ನಿಗೂಢ ರಹಸ್ಯ’ವನ್ನು ನಿರ್ಮಿಸಿದರು ಜಗದೀಶ್. ಇನ್ನೂ ಒಂದು ಹಾಡು ಬಾಕಿ ಇರುವಾಗಲೇ ಶಂಕರ್ ದುರಂತ ಅಂತ್ಯ ಕಂಡಿದ್ದರು. ಅನಂತ್‌ನಾಗ್‌ರಿಂದ ಡಬ್ ಮಾಡಿಸಿ ಬಿಡುಗಡೆ ಮಾಡಲಾಯಿತಾದರೂ ಶಂಕರ್ ಇನ್ನಿಲ್ಲದ ಕಾರಣ ವಿತರಕರು ಹಿಂಜರಿದು ಲಕ್ಷಾಂತರ ರೂ. ಕಳೆದುಕೊಂಡರು ಜಗದೀಶ್, ಕನಸಿನಗೂಡಿಗಾಗಿ ಖರೀದಿಸಿದ್ದ ಸೈಟನ್ನೂ ಮಾರಬೇಕಾದ ಪರಿಸ್ಥಿತಿಯೂ ಬಂತು.

ಸ್ವಂತ ಉದ್ಯಮದ ಹೊಸ ಮಜಲು
ಶಂಕರ್‌ನಾಗ್‌ರವರ ಜೊತೆ ಇದ್ದಾಗಲೇ ಇವರ ಹೊಟೇಲ್ ಉದ್ಯಮ ಪ್ರಾರಂಭವಾಗಿತ್ತು. ಕೆಫೆ ಮಲ್ನಾಡ್, ಹಳ್ಳಿ ಡಾಬಾ, ಕಡಾಯ್, ಬೈಸನ್ ರೆಸ್ಟೋರೆಂಟ್, ಹೀಗೆ ಸುಮಾರು 10 ವರ್ಷ ಹೊಟೇಲ್‌ಗಳನ್ನು ನಡೆಸಿದರು. ಒಂದು ಬದಲಿ ಆದಾಯದ ಆಸರೆಯನ್ನು ತುಂಬಿತ್ತು ಈ ಹೊಟೇಲ್. ಈ ನಡುವೆ ರಂಗಶಂಕರದಲ್ಲಿ 5 ವರ್ಷ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದರು. ಇವರು ಕಟ್ಟಿದ ಮತ್ತೊಂದು ಕನಸಿನ ಸಂಸ್ಥೆ ಯುನಿಟ್ 1 ಪ್ರೊಡಕ್ಷನ್ಸ್. ಇದರ ಅಡಿಯಲ್ಲಿ ಹಲವಾರು ನಿರ್ಮಾಣ, ನಿರ್ಮಾಣ ನಿರ್ವಹಣೆಯನ್ನು ಮಾಡುತ್ತಾ ಬಂದ ಜಗದೀಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ರೋಹಿತ್ ಮಾಂಜ್ರೇಕರ್‌ರವರ ಒಡನಾಟದಿಂದ ಅಮಿತಾಬ್ ಬಚ್ಚನ್‌ರ ಎಬಿಸಿಎಲ್ ನಡೆಸಿದ 1996ರ ವಿಶ್ವ ಸುಂದರಿ ಸ್ಪರ್ಧೆಯ ಸಂಪೂರ್ಣ ನಿರ್ವಹಣೆ, ಪ್ರಚಾರವನ್ನು ಜಗದೀಶ್ ನಿಭಾಯಿಸಿದರು. ಇಷ್ಟೇ ಅಲ್ಲದೆ ರಜನೀಕಾಂತ್ ಅಭಿನಯದ ಮೊದಲ ಆಂಗ್ಲ ಸಿನಿಮಾ ಬ್ಲಡ್ ಸ್ಟೋನ್, ಬಿಬಿಸಿ ಮತ್ತು ಡಿಸ್ಕವರಿ ಚಾನಲ್‌ಗಳಿಗಾಗಿ ಹಲವಾರು ವಿಶ್ವಮಟ್ಟದ ಡಾಕ್ಯುಮೆಂಟರಿಗಳನ್ನು ಮಾಡಿದ ಜಗದೀಶ್‌ರಿಗೆ ಡಿಸ್ಕವರಿ ’ಇಂಡಿಯನ್ ಮ್ಯಾರೇಜ್’ ಎಂಬ ಒಂದು ಸರಣಿಯ ಜವಾಬ್ದಾರಿಯನ್ನೂ ವಹಿಸಿ, ಅದನ್ನು ಇವರು ಅತ್ಯಂತ ಯಶಸ್ವಿಯಾಗಿ ಮಾಡಿದ್ದು ಭಾರತಕ್ಕೇ ಹೆಮ್ಮೆ ತಂದ ವಿಷಯ. ಇಷ್ಟೇ ಅಲ್ಲದೆ ಹಲವಾರು ಜಾಹಿರಾತುಗಳನ್ನೂ ಯೂನಿಟ್ 1 ಮಾಡಿತ್ತು. ಇದಾದ ನಂತರ ರಂಗ ಶಂಕರದಲ್ಲಿ 5 ವರ್ಷ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರು.

ಜಗದೀಶ್ ’ಮಲ್ನಾಡ್ ಜಗದೀಶ್’ ಆದದ್ದು
ಜಗ್ಗೇಶ್, ಜೈ ಜಗದೀಶ್ ಮತ್ತು ಇವರು, ಮೂವರೂ ಜಗದೀಶ್. ಜಗ್ಗ, ಎಂದರೆ ಮೂರು ಜನ ತಿರುಗಿ ನೋಡುವ ಪರಿಸ್ಥಿತಿ. ಇವರಿಗೆ ಹೋಗುವ ಕರೆ ಅವರಿಗೆ, ಅವರಿಗೆ ಬರುವ ಕರೆ ಇವರಿಗೆ, ಈ ಕನ್‌ಫ್ಯೂಷನ್‌ಗೆ ಕೊನೆ ಹಾಡಿದವರು ಜೈಜಗದೀಶ್, ಹೌದು ಇವರ ಹೆಸರಿಗೆ ಮಲ್ನಾಡ್ ಎಂದು ಅಂಕಿತ ಇತ್ತವರು ಜೈಜಗದೀಶ್.

ಕಿರುತೆರೆಯಿಂದ ಜನರಿಗೆ ಹತ್ತಿರವಾದರು
’ಮಿಲನ’ ಧಾರಾವಾಹಿಯಲ್ಲಿ ಸ್ಟ್ರಿಕ್ಟ್ ತಂದೆಯಾಗಿ, ನಂತರದಲ್ಲಿ ಮಗನ ಸ್ನೇಹಿತನಾಗಿ, ಒಂದಷ್ಟು ಹಾಸ್ಯ, ಹೀಗೆ ಹತ್ತು ಹಲವು ಶೇಡ್‌ಗಳ ಪಾತ್ರದ ಅವಕಾಶವಿತ್ತ ನಿರ್ದೇಶಕ ಮಧುಸೂದನ್‌ರಿಗೆ ತಮ್ಮ ಅಭಿನಂದನೆ ತಿಳಿಸುತ್ತಲೇ ಕಿರುತೆರೆಯ ಅನುಭವವನ್ನು ಹಂಚಿಕೊಂಡರು ಜಗದೀಶ್. ೯೫೦ ಕಂತುಗಳು ಪೂರೈಸುವ ಹೊತ್ತಿಗೆ ಇವರು ನೋಡುಗರ ಮನೆ-ಮನ ಮುಟ್ಟಿದ್ದರು. ’ರಾಗ-ಅನುರಾಗ’ದಲ್ಲಿ ಪದ್ಮಾ ಕುಮುಟಾ ಅವರ ತಮ್ಮನ ಪಾತ್ರದಲ್ಲೂ ಅಭಿನಯಿಸಿದರು. ಈಗ ಮನೆ ದೇವ್ರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಜಗದೀಶ್.

ಕಾರ್ಯಕಾರಿ ನಿರ್ಮಾಪಕಾರಾಗಿ ’ರಾಜು (ಎದೆಗೆ ಬಿದ್ದ ಅಕ್ಷರ)’
ಪ್ರಕಾಶ್ ರೈ, ಪ್ರಕಾಶ್ ಬೆಳವಾಡಿ, ಎಂ.ಡಿ.ಪಲ್ಲವಿಯವರ ನಟನೆ, ಶಿವಮೊಗ್ಗದ ನಂದಿತಾ ಯಾದವ್‌ರವರ ನಿರ್ದೇಶನದಲ್ಲಿ ಇವರು ಕಾರ್ಯಕಾರಿ ನಿರ್ಮಾಪಕರಾಗಿ ತಯಾರಾಗಿರುವ ಮಕ್ಕಳ ಚಿತ್ರ ’ರಾಜು (ಎದೆಗೆ ಬಿದ್ದ ಅಕ್ಷರ)’. ಈಗಾಗಲೇ ಸೆನ್ಸಾರ್ ಆಗಿದ್ದು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ ಹಲವಾರು ಚಿತ್ರೋತ್ಸವಗಳಿಗೂ ಪ್ರವೇಶ ನೀಡಿದೆ.

ಸಂದ ಪುರಸ್ಕಾರಗಳು
2011-12ರಲ್ಲಿ ನಟನೆ ಮತ್ತು ರಂಗಸಜ್ಜಿಕೆ ನಿರ್ವಹಣೆ ಮತ್ತು ನಿರ್ಮಾಣಕ್ಕಾಗಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, 2015ರಲ್ಲಿ ಸುವರ್ಣ ಪರಿವಾರ್ ಬೆಸ್ಟ್ ಪತಿ ಮತ್ತು 2016ರಲ್ಲಿ ಬೆಸ್ಟ್ ಅಪ್ಪ ಪ್ರಶಸ್ತಿಗಳು ಸಂದಿವೆ.

ಸುಂದರ ಸಂಸಾರ
ಜೀವನ ಕಟ್ಟಿಕೊಳ್ಳುವ ಹಪಾಹಪಿಕೆಯಲ್ಲಿ ವ್ಯಸ್ಥರಾದ ಜಗದೀಶ್‌ರ ಜೀವನದಲ್ಲಿ ಸಂಗಾತಿಯ ಆಗಮನ ಸ್ವಲ್ಪ ತಡವಾಗಿಯೇ ಆಯಿತು. ೪೦ರ ಆಸುಪಾಸಿನಲ್ಲಿ ಮಡಿಕೇರಿಯ ಭಾಗ್ಯಶ್ರೀ (ಇವರ ಪ್ರೀತಿಯ ಆಶಾ)ರನ್ನು ವರಿಸಿದರು. ೧೫ ವರ್ಷದ ಮಗ ಶಿಶು ಮಲ್ನಾಡ್ ಶರ್ಮರೊಂದಿಗೆ ಸುಖೀ ಸಂಸಾರ ಇವರದ್ದು.

ಜಗ್ಗು, ಜಗ್ಗ, ಜಗ್ಗಣ್ಣ ಎಂದೇ ಹಲವರಿಗೆ ಆಪ್ತರಾಗಿರುವ ಮಲ್ನಾಡ್ ಜಗದೀಶ್‌ರವರ ಬಣ್ಣದ ಸೇವೆ ಇನ್ನಷ್ಟು ವರ್ಣರಂಜಿತವಾಗಿರಲಿ. ನನ್ನ ಪ್ರತಿಭೆಯನ್ನು ಗುರುತಿಸಿ ಕೆಲಸ ಸಿಕ್ಕರೆ ಸರಿ, ಇಲ್ಲವಾದಲ್ಲಿ ಅವಕಾಶ ಕೊಡಿ ಎನ್ನುವ ಮನೋಭಾವ ನನ್ನದಲ್ಲ ಎನ್ನುವ ಇವರ ಸ್ವಾಭಿಮಾನವೇ ಇವರನ್ನು ಇಂದು ಇಷ್ಟು ಎತ್ತರಕ್ಕೆ ಕೊಂಡೊಯ್ದಿರುವುದು. ಇವರ ಶ್ರಮಕ್ಕೆ, ಇವರ ಪ್ರತಿಭೆ ಇನ್ನೂ ಹಲವು ಅವಕಾಶಗಳು ಇವರನ್ನು ಅರಸಿಬರುವುದರಲ್ಲಿ ಸಂಶಯವಿಲ್ಲ. ಇವರ ಸಾಧನೆಯ ಹಾದಿಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳು.

RELATED ARTICLES
- Advertisment -
Google search engine

Most Popular

Recent Comments