ಬೆಂಗಳೂರು: ಜುಲೈ 1ರಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯತಿಗಳಲ್ಲಿ ಜನನ, ಮರಣ ನೋಂದಣಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದಕ್ಕಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟಿಸುವ ಜನನ, ಮರಣ ಘಟನೆಗಳು ಸಂಭವಿಸಿದ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದರು.
21 ದಿನಗಳ ತರುವಾಯ ಮತ್ತು 30 ದಿನಗಳ ಒಳಗಿನ ಘಟನೆಗಳನ್ನು ನಿಯಮಗಳಂತೆ 2 ರೂ. ಶುಲ್ಕ ಪಡೆದು ನೋಂದಾಯಿಸಲಾಗುವುದು, 30 ದಿನಗಳ ತರುವಾಯ ಒಂದು ವರ್ಷದೊಳಗೆ ವರದಿಯಾಗುವ ಜನನ, ಮರಣಗಳನ್ನು ತಹಶೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು ಎಂದು ಮಾಹಿತಿ ನೀಡಿದರು.
ಜನನ, ಮರಣ ನೋಂದಣಿ ಸಂಬಂಧದಲ್ಲಿ ಸಂದೇಹಯಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಹಾಗೂ ಇ-ಮೇಲ್ crbdkar@gmail.com/ejanmahelpdesk@gmail.com ಮತ್ತು ಇ-ಜನ್ಮ ಸಹಾಯವಾಣಿ 1800-425-6578 ಸಂಖ್ಯೆಗೆ ಸಂಪರ್ಕಿಸಿಯೂ ಮಾಹಿತಿ ಪಡೆಯಬಹುದಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.