ದಾವಣಗೆರೆ: ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ 2022-23ನೇ
ಸಾಲಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸುವ ನೆಪದಲ್ಲಿ ಕಾರ್ಮಿಕ ಮಂಡಳಿಯ ನೂರಾರು ಕೋಟಿ ಹಣ ಗೋಲ್‌ಮಾಲ್ ಆಗಿದೆ. ಇದರಲ್ಲಿ ಖಾಸಗಿ ಆಸ್ಪತೆಯ ಆರೋಗ್ಯಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಶಾಮಿಲಾಗಿದ್ದಾರೆ. ಈ ಕುರಿತು ನ್ಯಾಯಸಮ್ಮತ ತನಿಖೆಯಾಗಿ ಸಂಬಂಧಪಟ್ಟವರಿಂದ ಹಣ ಮರುವಸೂಲಾತಿಯಾಗಬೇಕು ಎಂದು ಕರ್ನಾಟಕ ರಾಜ್ಯ ಕನ್ನಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವೆಲ್ಫೇರ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ವಿ.ಕುಮಾರ್ ಒತ್ತಾಯಿಸಿದರು.
2022-23ನೇ ಸಾಲಿನಲ್ಲಿ ದಾವಣಗೆರೆ ನಗರದಲ್ಲಿರುವ ಆರೈಕೆ ಆಸ್ಪತ್ರೆ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲು ಗುತ್ತಿಗೆ ಪಡೆದಿತ್ತು. ತಪಾಸಣೆ ಶುಲ್ಕ ತಲಾ 3 ಸಾವಿರ ರೂ. ವಾಗಿತ್ತು. ಜಿಲ್ಲೆಯ 33,500 ಕಾರ್ಮಿಕರಿಗೆ ತಪಾಸಣೆ ನಡೆಸಲಾಗಿದೆ ಎಂದು ಸುಮಾರು 10 ಕೋಟಿ ರೂ.ನಷ್ಟು ಗೋಲ್ ಮಾಲ್ ಮಾಡಲಾಗಿದೆ. ಇದರಲ್ಲಿ ಆರೈಕೆ ಆಸ್ಪತ್ರೆ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಆಯಕ್ತರು ಶಾಮಿಲ್ಲಾಗಿದ್ದಾರೆ ಎಂದು ಅವರು ಸುದ್ಧಿಗೋಷ್ಠಿಯಲ್ಲಿ ದೂರಿದರು.
ರಾಜ್ಯ ಕಟ್ಟಡ ಕಾರ್ಮಿಕ ಮಂಡಳಿ ಪ್ರತಿ ವರ್ಷ ʻಪ್ರಿವೆನ್ಸನ್ ಹೆಲ್ತ್ ಕೇರ್ʼ ಎಂಬ ಯೋಜನೆಯಡಿ ಕಟ್ಟಡ ಕಾರ್ಮಿಕರು ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸುವ ಸದುದ್ದೇಶವನ್ನು ಹೊಂದಿದ್ದು, ಕಾರ್ಮಿಕ ಆಯುಕ್ತರು ಇಂತಹ ಶಿಬಿರ ಆಯೋಜಿಸುವ ಮೊದಲು ಸ್ಥಳಿಯ ಕಟ್ಟಡ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ನಡೆಸಬೇಕು ಎಂಬ ನಿಯಮ ಇದೆ. ಜಿಲ್ಲೆಯಲ್ಲಿ 30-40 ಕಾರ್ಮಿಕ ಸಂಘಟನೆಗಳಿದ್ದು, ಯಾರ ಗಮನಕ್ಕೂ ಬಾರದಂತೆ ಆರೋಗ್ಯ ಶಿಬಿರ ನಡೆಸಿದ್ದು ಏಕೆ?. ಯಾವುದೇ ಆರೋಗ್ಯ ತಪಾಸಣೆ ನಡೆಸದೇ ಬೋಗಸ್ ಕಡತಗಳನ್ನು ಸೃಷ್ಟಿಸಿ ಟೆಂಡರ್ ಪಡೆದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಣವನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಸುದ್ಧಿಗೋಷ್ಠಿಯಲ್ಲಿ ನಿರ್ದೆಶಕರಾದ ನಾಗರಾಜ್,ರಾಜಪ್ಪ ಬಿ.,ತಿಮ್ಮಯ್ಯ, ಪರಶುರಾಮ್ ಇದ್ದರು.
ಆರೋಗ್ಯ ತಪಾಸಣೆ: ಕಾರ್ಮಿಕ ಮಂಡಳಿಯ ನೂರಾರು ಕೋಟಿ ಲೂಟಿ; ತನಿಖೆಗೆ ಆಗ್ರಹ
RELATED ARTICLES