ಶಿವಮೊಗ್ಗ: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇನ್ನು ೪ ದಿನ ಬಾಕಿಯಿದೆ. ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳ ಮತದಾರರು, ಕಾರ್ಯಕರ್ತರನ್ನು ಭೇಟಿಯಾಗಿ ಬಂದಿದ್ದೇನೆ. ಎಲ್ಲ ಕಡೆ ಉತ್ತಮ ವಾತಾವರಣವಿದೆ. ಪ್ರಥಮ ಪ್ರಾಶಸ್ತ್ಯದೊಂದಿಗೆ ಗೆಲುವು ಸಾಧಿಸುತ್ತೇನೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
ಬುಧವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊಡಗು, ಚಿಕ್ಕಮಗಳೂರು, ದಾವಣಗೆರೆಯಲ್ಲಿ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದೆ. ಇಂದು ಶಿವಮೊಗ್ಗ ಮತ್ತು ಶಿಕಾರಿಪುರಗಳಲ್ಲಿ ಮತಯಾಚನೆ ಮಾಡಲಿದ್ದೇನೆ. ಕರಾವಳಿಯ ಪ್ರದೇಶಗಳಾದ ಉಡುಪಿ ಮತ್ತು ಮಂಗಳೂರಿನ ಮತದಾರರಲ್ಲಿ ನನ್ನ ಪರಿಚಯ ಗಟ್ಟಿಯಾಗಿದೆ. ಎಲ್ಲ ಕಡೆ ಕಾರ್ಯಕರ್ತರ ಕೊರತೆಯಿಲ್ಲವಾಗಿದೆ. ನನಗೆ ಹಿಂದುಳಿದ, ದಲಿತ, ಲಿಂಗಾಯಿತರನ್ನೊಳಗೊಂಡು ಎಲ್ಲಾ ಜಾತಿಯ ನಾಯಕರು, ಕಾರ್ಯಕರ್ತರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಜನಸಂಘದಿಂದ ಇದ್ದಂತಹ ಹಿರಿಯರು ನನಗೆ ಬೆಂಬಲ ಸೂಚಿಸಿದ್ದು ನನಗೆ ಮತ್ತಷ್ಟು ಸ್ಪೂರ್ತಿ ತುಂಬಿದೆ ಮತ್ತು ಜವಾಬ್ದಾರಿ ಹೆಚ್ಚಾಗಿದೆ. ಈ ಹಿರಿಯರ ಮಾರ್ಗದರ್ಶನ, ಬೆಂಬಲ, ಕಾರ್ಯಕರ್ತರ ಬೆಂಬಲ, ರಾಷ್ಟ್ರಭಕ್ತ ಬಳಗದ ಬೆಂಬಲವನ್ನು ನೋಡಿದರೆ ನನಗೆ ಪೂರ್ವ ಜನ್ಮದ ಪುಣ್ಯವೋ ಎಂಬಂತಾಗಿದೆ. ಇಲ್ಲಿ ನನ್ನ ಸೋಲು- ಗೆಲುವು ಏನೇ ಇರಲಿ ನನ್ನ ಸ್ಪರ್ಧೆ ಬಿಜೆಪಿಯ ವ್ಯವಸ್ಥೆಗೆ ಸರಿಯಾದ ಉತ್ತರವಾಗಿದೆ. ಒಬ್ಬ ಪಕ್ಷೇತರ ಅಭ್ಯರ್ಥಿ ರಾಷ್ಟ್ರೀಯ ಪಕ್ಷಗಳ ವಿರುದ್ಧ, ಪ್ರಭಾವಿ ವ್ಯಕ್ತಿಗಳ ವಿರುದ್ಧದ ಸ್ಪರ್ಧೆಯೂ ದೇವರ ಆಶೀರ್ವಾದವಾಗಿದೆ. ನಾನು ಸ್ಪರ್ಧೆ ಮಾಡದೇ ಹೋಗಿದ್ದರೆ ಈಗ ರಾಜ್ಯದಲ್ಲಿ ಇಷ್ಟೊಂದು ಚರ್ಚೆಯಾಗುತ್ತಿರಲಿಲ್ಲ. ಬಿಜೆಪಿಯವರಿಗೆ ಸಾಮಾನ್ಯ ಕಾರ್ಯಕರ್ತರ ನೋವು ತಿಳಿಯುತ್ತಿರಲಿಲ್ಲ. ಇದು ಚಿಂತನ, ಮಂಥನಕ್ಕೆ ಹೊಸ ದಿಕ್ಕನ್ನು ತೋರಿಸಿದೆ ಎಂದು ಅಭಿಪ್ರಾಯಿಸಿದರು.
ಗೆಲುವಿನ ನಂತರ ನಾನು ಮತ್ತೆ ಬಿಜೆಪಿಯಲ್ಲೇ ಕೆಲಸ ಮುಂದುವರಿಸುತ್ತೇನೆ. ಜಗದೀಶ್ ಶೆಟ್ಟರ್ ಅವರಂತೆ ವೈಯಕ್ತಿಕವಾಗಿ ನಾನು ಬಿಜೆಪಿಯಲ್ಲಿರುವ ಯಾವುದೇ ವ್ಯಕ್ತಿಯನ್ನು ದೂಷಿಸಿಯಿಲ್ಲ. ಅವರು ರಾಷ್ಟ್ರಮಟ್ಟದ ನಾಯಕರನ್ನು ದೂಷಿಸಿ, ಚುನಾವಣೆಯಲ್ಲಿ ಸೋತು ಒಂದು ವರ್ಷದ ಅವಧಿಯಲ್ಲೇ ಪಕ್ಷಕ್ಕೆ ಮರಳಿ ತರಲಾಗಿದೆ. ಇಷ್ಟು ಮಾತ್ರವಲ್ಲ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಆದಕಾರಣ ಗೆಲುವಿನ ನಂತರ ಬಿಜೆಪಿಗೆ ಮರಳಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಷ್ಟೆಲ್ಲಾ ಘಟನಾವಳಿಗಳು ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ವಿಚಾರಧಾರೆಗೆ ಹಚ್ಚುತ್ತದೆ ಎಂದರು.
ಕರಾವಳಿಯಲ್ಲಿ ಸಾಮಾಜಿಕ, ರಾಜಕೀಯ ಜೀವನ ಆರಂಭಿಸಿದ ನನಗೆ ಮಲೆನಾಡಿನ ಭಾಗದಲ್ಲೂ ಬೆಂಬಲ ವ್ಯಕ್ತವಾಗಿರುವುದು ಹೃದಯ ತುಂಬಿ ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ಇದು ಪ್ರಮುಖ ಘಟ್ಟ. ಇದನ್ನು ನಾನು ನನ್ನ ಜೀವನ ಪರ್ಯಾಂತ ನೆನಪಿಟ್ಟುಕೊಳ್ಳುತ್ತೇನೆ. ಮಲೆನಾಡಿನವರ ಬೆಂಬಲಕ್ಕೆ ನಿರಾಶೆಯನ್ನುಂಟು ಮಾಡುವುದಿಲ್ಲ. ನಾನು ಗೆಲುವು ಸಾಧಿಸಿದರೆ ಮಲೆನಾಡಿನ ಸಮಸ್ಯೆಗಳ ಕುರಿತು ಗಟ್ಟಿ ಧ್ವನಿಯಾಗುತ್ತೇನೆ. ಶಾಸಕನಾಗಿ ಮಾಡಿದ ಸಾಧನೆ ಆಧಾರದ ಮೇಲೆ ಮತಯಾಚಿಸಿದ್ದೇನೆ. ನಾನು ಎಂದಿಗೂ ಹಿಂದುತ್ವದ ನಿಲುವಿಗೆ ಬದ್ದನಾಗಿರುತ್ತೇನೆ. ಧ್ವನಿಯಾಗಿರುತ್ತೇನೆ. ನನ್ನ ಕ್ರಮ ಸಂಖ್ಯೆ ೭ಕ್ಕೆ ಮತ ಚಲಾಯಿಸುವ ಮೂಲಕ ನನ್ನನ್ನು ಗೆಲ್ಲಿಸಿ ಕೊಡಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಂಕರ್, ಪ್ರಕಾಶ್, ವಾಗೀಶ್, ಹೊನ್ನಾಳಿ ನಾರಾಯಣ ರಾವ್ ಉಪಸ್ಥಿತರಿದ್ದರು.
……………………………….
ಮತಯಾಚನೆ ಭಾಗವಾಗಿ ಚನ್ನಗಿರಿಗೆ ಹೋಗಿದ್ದೆ. ಅಲ್ಲಿನ ವ್ಯಕ್ತಿಯೊಬ್ಬರ ಲಾಕಪ್ ಡೆತ್ ಸಾವಿನ ಸಂಬಂಧ ಪೊಲೀಸ್ ಠಾಣೆ ಮೇಲೆ ದಾಂಧಲೆ ನಡೆದಿರುವುದು ವರದಿಯಾಗಿತ್ತು. ಈ ಕುರಿತು ಪೊಲೀಸ್ ಇಲಾಖೆಯನ್ನು ಭೇಟಿ ನೀಡಿದೆ. ಸಿಸಿಟಿವಿ, ಮರಣೋತ್ತರ ಪರೀಕ್ಷೆಗಳಿಂದ ವ್ಯಕ್ತಿಯ ಸಾವು ಲೋ ಬಿಪಿಯಿಂದಾಗಿ ಸಂಭವಿಸಿದ್ದು ಎಂದು ಸಾಬೀತಾಗಿದೆ. ಗಲಭೆಕೋರರನ್ನು ಕೂಡಲೇ ಬಂಧಿಸಬೇಕು. ಪೊಲೀಸರಿಗೆ ಧೈರ್ಯ ತುಂಬಲು ನಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ.
-ರಘುಪತಿ ಭಟ್, ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ