ದಾವಣಗೆರೆ: ಮನೆಯಲ್ಲೇ ಸಿಗುವ ಶುಂಠಿ, ಬೆಳ್ಳುಳ್ಳಿ ಸೇರಿದಂತೆ ಇನ್ನಿತರ ಮನೆ ಮದ್ದುಗಳನ್ನು ಬಳಸಿ ಸೊಳ್ಳೆಗಳನ್ನು ಮನೆಯಿಂದ ಹೊರಹಾಕಿ ಅವುಗಳನ್ನು ನಿಯಂತ್ರಿಸಬಹುದು ಎಂದು ಕರ್ನಾಟಕ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಡಾ. ಪ್ರಶಾಂತ್ ಆರಾಧ್ಯ ಹೇಳಿದರು.
ಎರಡು ಇಂಚು ಶುಂಠಿ, 10 ಬೆಳ್ಳುಳ್ಳಿ ಬೇಳೆಗಳು, ಎರಡು ಇಂಚು ಚಕ್ಕೆ, 20 ಲವಂಗ ಇದನ್ನೆಲ್ಲಾ ಸೇರಿಸಿ ಪುಡಿ ಮಾಡಿ, 10 ಬೇವಿನ ಎಲೆಗಳನ್ನು ಸಣ್ಣದಾಗಿ ಕತ್ತರಿಸಿ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಒಂದುವರೆ ಲೀಟರ್ ನೀರನ್ನು ಬೆರೆಸಿ ಕುದಿಸಿ. ಅದು ಕುದ್ದು ಒಂದು ಲೀಟರ್‌ಗೆ ಬಂದ ನಂತರ ಒಲೆಯಿಂದ ಇಳಿಸಿ, ಆ ನೀರು ತಣ್ಣಗಾದ ಮೇಲೆ ಶೋಸಿ ಅದಕ್ಕೆ 20 ಕರ್ಪುರಗಳನ್ನು ಪುಡಿ ಮಾಡಿ ಬೆರೆಸಿ ಒಂದು ಬಾಟಲಿಗೆ ಹಾಕಿ ಸರಿಯಾಗಿ ಕುಲುಕಿ ಅದನ್ನು ಮೈಗೆ ಲೇಪಿಸಿಕೊಳ್ಳಬೇಕು ಎಂದು ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಜ್ವನದ ಎಲೆಗಳು ಸಿಕ್ಕಲ್ಲಿ, 10 ಎಲೆಗಳನ್ನು ಜಜ್ಜಿ ಅದರಲ್ಲಿ ಬರುವ ರಸವನ್ನು ಬೆರೆಸಿ. ಇವೆಲ್ಲವನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ಹಾಕಿ, ಮನೆಯ ಒಳಗೆ ಮತ್ತು ಹೊರಗಡೆ ಸ್ಟೇ ಮಾಡಿ ಇದರಿಂದ ಸೊಳ್ಳೆಗಳು ಸಂಪೂರ್ಣವಾಗಿ ಮನೆಯಿಂದ ತೊಲಗಿಸಬಹುದು. ಡೆಂಗ್ಯೂ ಜ್ವರ ಬಂದವರು, ಡಾಕ್ಟರ್ ಕೊಡುವ ಔಷಧಿಯ ಜೊತೆಗೆ ಪಪ್ಪಾಯದ ಎಲೆಗಳನ್ನು ಕುದಿಸಿ, ಶೋಧಿಸಿ ಕುಡಿಯುವುದರಿಂದ ಜ್ವರ ಕಡಿಮೆ ಮಾಡಲು ಸಹಕರಿಸುತ್ತದೆ ಎಂದು ಹೇಳಿದರು.
ಬೇವಿನ ಸೊಪ್ಪನ್ನು ರುಬ್ಬಿ, ಕೊಬ್ಬರಿ ಎಣ್ಣೆಯ ಜೊತೆಗೆ ಕುದಿಸಿ, ಹೊರಗಡೆ ಹೋಗುವಾಗ ಚರ್ಮಕ್ಕೆ ಹಚ್ಚಿದ್ದಲ್ಲಿ ಸೊಳ್ಳೆಗಳು ಕಚ್ಚುವುದಿಲ್ಲ ಮತ್ತು ಇದರಿಂದ ಅನೇಕ ಖಾಯಿಲೆಗಳಿಗೂ ಸಹಕರಿಯಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.