ಮಾಗಡಿ: ಗ್ಯಾಸ್ ಗೀಸರ್ ನ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಿಂದ ತಾಯಿ ಮಗ ದುರಂತ ಸಾವು ಕಂಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಜ್ಯೋತಿ ನಗರದಲ್ಲಿ ನಡೆದಿದೆ.
ಶೋಭಾ(40) ಮತ್ತು ಅವರ ಪುತ್ರ ದಿಲೀಪ್ (17) ಮೃತ ದುರ್ದೈವಿಗಳು.
ರಾತ್ರಿ ಏಳು ಗಂಟೆ ಸುಮಾರಿಗೆ ದಿಲೀಪ್ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ ಆನ್ ಮಾಡಿಕೊಂಡು ಸ್ನಾನಕ್ಕೆ ತೆರಳಿದ್ದಾನೆ. ಈ ವೇಳೆ ಗೀಸರ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿದೆ. ಸ್ನಾನದ ಮನೆಗೆ ಕಿಟಕಿ ಇಲ್ಲದ ಪರಿಣಾಮ ಕೊಠಡಿಯಲ್ಲಿ ವಿಷಾನಿಲ ಆವರಿಸಿ ದಿಲೀಪ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಇತ್ತ ಸ್ನಾನಕ್ಕೆ ಹೋದ ಮಗ ಇಷ್ಟು ಹೊತ್ತಾದರೂ ಬರಲಿಲ್ಲವಲ್ಲ ಎಂದು ತಾಯಿ ಶೋಭಾ, ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋದಾಗ ಅವರು ಕೂಡಾ ಅಸ್ವಸ್ಥರಾಗಿದ್ದಾರೆ.
ಸ್ಥಳೀಯರು ಗಮನಿಸಿ ಆಸ್ಪತ್ರೆಗೆ ರವಾನಿಸುವಾಗ ಶೋಭಾ ಕೂಡಾ ಮೃತಪಟ್ಟಿದ್ದಾರೆ. ವಿಷಯ ತಿಳಿದ ಮಾಗಡಿ ಪೊಲೀಸರು, ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.