Thursday, December 5, 2024
Google search engine
Homeಇ-ಪತ್ರಿಕೆಜೂ.೧೦ರಂದು ಗಮಕ ಪಾಠಶಾಲೆ ಉದ್ಘಾಟನೆ

ಜೂ.೧೦ರಂದು ಗಮಕ ಪಾಠಶಾಲೆ ಉದ್ಘಾಟನೆ

ಪತ್ರಿಕಾಗೋಷ್ಠಿಯಲ್ಲಿ ಗಮಕ ಪಾಠಶಾಲೆಯ ಶಿಕ್ಷಕ ಪ್ರಸಾದ್ ಭಾರದ್ವಾಜ್ ಮಾಹಿತಿ

ಶಿವಮೊಗ್ಗ: ಗಮಕ ಪಾಠಶಾಲೆಯ ಉದ್ಘಾಟನಾ ಸಮಾರಂಭವನ್ನು ಜೂ.೧೦ರಂದು ನಗರದ ರಾಮಮಂದಿರ, ಜಯನಗರದಲ್ಲಿ ಆಯೋಜಿಸಲಾಗಿದೆ ಎಂದು ಗಮಕ ಪಾಠಶಾಲೆಯ ಶಿಕ್ಷಕ ಪ್ರಸಾದ್ ಭಾರದ್ವಾಜ್, ಹೊಸಹಳ್ಳಿ ಹೇಳಿದರು.

ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈ.ಎಸ್.ವಿ.ದತ್ತ, ಮಾಜಿ ಶಾಸಕರು ಉದ್ಘಾಟನೆಯನ್ನು ನೆರವೇರಿಸುವರು.  ಮುಖ್ಯ ಅತಿಥಿಗಳಾಗಿ ವಿದ್ವಾನ್ ಹೊಸಹಳ್ಳಿ ವೆಂಕಟ್ರಾಮ್, ಖ್ಯಾತ ಪಿಟೀಲು ವಾದಕರು ಮತ್ತು ಟಿ.ಆರ್‍.ಅಶ್ವತ್ಥನಾರಾಯಣ ಶ್ರೇಷ್ಠಿ, ಗೌರವಾಧ್ಯಕ್ಷರು, ಕರ್ನಾಟಕ ಗಮಕಕಲಾ ಪರಿಷತ್, ಶಿವಮೊಗ್ಗ ಶಾಖೆ ಇವರು ಭಾಗವಹಿಸುವರು. ಸುಬ್ರಮಣ್ಯ ಶಾಸ್ತ್ರಿಗಳು, ಅಧ್ಯಕ್ಷರು, ಕ.ಗ.ಪ. ಶಿವಮೊಗ್ಗ ಶಾಖೆ ಇವರು  ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಗಮಕ ವಾಚನ-ವ್ಯಾಖ್ಯಾನ  ಎಂಬ ಮತ್ತೊಂದು ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು, ಪ್ರಸಾದ್ ಭಾರದ್ವಾಜ್, ಹೊಸಹಳ್ಳಿ, ಶಿಕ್ಷಕರು, ಗಮಕ ಪಾಠಶಾಲೆ ಇವರು ವಾಚನ ನಡೆಸುವರು. ವೈ.ಎಸ್.ವಿ.ದತ್ತ, ಮಾಜಿ ಶಾಸಕರು, ಕಡೂರು. ಇವರು ವ್ಯಾಖ್ಯಾನ ನೀಡುವರು. ಈ ಗಮಕ-ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಸಂಧಾನ ಎಂಬ ಕಥಾ ಪ್ರಸಂಗ ಆಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.

ಗಮಕ ಕಲೆ ನಮ್ಮ ಕನ್ನಡ ನಾಡಿನ ಒಂದು ವಿಶಿಷ್ಟ ಜನಪದ ಕಲೆ, ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ನಮ್ಮ ಸಂಸ್ಕೃತಿಯ ಮಹಾಕಾವ್ಯಗಳನ್ನು ಜನರಿಗೆ ತಲುಪಿಸಿ, ತನ್ಮೂಲಕ ವ್ಯಕ್ತಿಗಳಿಗೆ ಉತ್ತಮ ಸಂಸ್ಕಾರ ನೀಡಿ, ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಗಮಕಕಲೆ ಬಹು ಮಹತ್ವದ ಪಾತ್ರವನ್ನು ವಹಿಸುತ್ತಿದೆ. ನಮ್ಮ ಶಿವಮೊಗ್ಗ ಜಿಲ್ಲೆ ಗಮಕ ಕಲೆಗೆ ಬಹು ಹೆಸರುವಾಸಿಯಾದ ಜಿಲ್ಲೆ, ಕರ್ನಾಟಕ ಗಮಕಕಲಾ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆ, ಸಮೀಪದ ಹೊಸಹಳ್ಳಿಯ ಗಮಕ ಕಲಾ ಪರಿಷತ್ತು, ಸಾಗರದ ಮಲೆನಾಡು ಗಮಕ ಕಲಾ ಸಂಘದಂತಹ ಹಲವಾರು ಸಂಘ-ಸಂಸ್ಥೆಗಳು ಹಲವು ದಶಕಗಳಿಂದ ಗಮಕ ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಗಮಕ ಕಲೆಯನ್ನು ಉಳಿಸಿ-ಬೆಳೆಸುತ್ತಿವೆ ಎಂದು ಹೇಳಿದರು.

ಇಂತಹ ಉನ್ನತವಾದ ಗಮಕ ಕಲೆಯನ್ನು ನಮ್ಮ ಮುಂದಿನ ಪೀಳಿಗೆಗೆ-ಮಕ್ಕಳು ಮತ್ತು ಯುವಕ-ಯುವತಿಯರಿಗೆ ಕಲಿಸಿಕೊಡುವುದರಿಂದ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ನೀಡಿದಂತಾಗುತ್ತದೆ ಮತ್ತು ಮೌಲಿಕವಾದ ಕಲೆಯನ್ನು ಉಳಿಸಿ-ಬೆಳೆಸಿದಂತಾಗುತ್ತದೆ. ಈ ಉದ್ದೇಶದಿಂದ ಗಮಕಿಯಾದ ನಾನು ಶಿವಮೊಗ್ಗದಲ್ಲಿ “ಗಂಧರ್ವ ಗಮಕ ಪಾಠಶಾಲೆ”ಯನ್ನು ಆರಂಭಿಸುತ್ತಿದ್ದಾರೆ. ಈ ಗಮಕ ಶಾಲೆ ಶಿವಮೊಗ್ಗ ನಗರದ ೫ ವಿವಿಧ ಭಾಗಗಳಲ್ಲಿ- ಜಯನಗರದ ಶ್ರೀರಾಮಮಂದಿರ, ಅಶೋಕನಗರದ ಯೋಗಮಂದಿರ, ವಿನೋಬನಗರದ ಕಲಾತ್ಮ ಕಲಾಶಾಲೆ, ಕೋಟೆ ರಸ್ತೆಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಬಿ.ಬಿ.ರಸ್ತೆಯ ಶ್ರೀ ವಿದ್ಯಾರಣ್ಯ ಗುರುಕುಲದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ನಾನು ಹೊಸಹಳ್ಳಿ ಆರ್‍.ಕೇಶವಮೂರ್ತಿಗಳಲ್ಲಿ ಅಭ್ಯಾಸ ಮಾಡಿದ್ದೇನೆ. ಕೇಶವಮೂರ್ತಿಗಳು ಗಮಕ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪ್ರಥಮಕುಮಾರವ್ಯಾಸ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಅವರು ೨೦೨೦ರ ಸಾಲಿನ “ಪದ್ಮಶ್ರೀ ಪ್ರಶಸ್ತಿ” ಪಡೆಯುವ ಮೂಲಕ ಗಮಕ ಕಲೆಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ರು. ೭೦ ವರ್ಷ ಕಾಲ ಕಲಾಸೇವೆಗೈದು ೨೦೨೨ರಲ್ಲಿ ಕಾಲವಾಗಿದ್ದಾರೆ. ಇಂತಹ ಗುರುಗಳ ಗಮಕ ಕಲೆಯನ್ನು ಅಭ್ಯಾಸ ಮಾಡಿರುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಬ್ರಮಣ್ಯ ಶಾಸ್ತ್ರಿಗಳು, ಅಧ್ಯಕ್ಷರು, ಕ.ಗ.ಪ. ಶಿವಮೊಗ್ಗ ಶಾಖೆ, ಕುಮಾರಶಾಸ್ತ್ರಿ, ಕಾರ್ಯದರ್ಶಿ, ಟಿ.ಆರ್‍.ಅಶ್ವತ್ಥ ನಾರಾಯಣ ಶ್ರೇಷ್ಠಿ, ಗೌರವಾಧ್ಯಕ್ಷರು ಹಾಜರಿದ್ದರು.

……………………………….

ಈ ಗಮಕ ಪಾಠಶಾಲೆಯಲ್ಲಿ ತಿಂಗಳಿಗೆ ೮ ಅಂದರೆ ವಾರಕ್ಕೆ ಎರಡು ತರಗತಿಗಳಿರುತ್ತವೆ. ಸಂಜೆ ೫ರಿಂದ ೯ರವರೆಗೆ ಇದರ ಕಾಲಾವಧಿಯಾಗಿದೆ. ಈ ಕಲೆಯನ್ನು ಉಳಿಸಿ-ಬೆಳೆಸುವಲ್ಲಿ ಮಕ್ಕಳ ಪಾತ್ರ ಮಹತ್ವದ್ದಾಗಿದ್ದು ಅವರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತೇವೆ. ಹಳೆಗನ್ನಡವನ್ನು ಹೇಗೆ ವಾಚನ ಮಾಡುವುದು ಮತ್ತು ಹೇಗೆ ಅರ್ಥ ಮಾಡಿಕೊಳ್ಳುವುದು ಎಂಬದನ್ನು ಈ ಪಾಠಶಾಲೆಯಲ್ಲಿ ಕಲಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಗಮಕ ಕಲೆಯನ್ನು ಉಳಿಸುವುದು ಒಂದು ಸವಾಲಿನ ಕೆಲಸವಾಗಿದೆ.

-ಟಿ.ಆರ್‍.ಆಶ್ವತ್ಥ ನಾರಾಯಣ ಶ್ರೇಷ್ಠಿ, ಗೌರವಾಧ್ಯಕ್ಷರು, ಕರ್ನಾಟಕ ಗಮಕ ಪರಿಷತ್, ಶಿವಮೊಗ್ಗ ಶಾಖೆ

RELATED ARTICLES
- Advertisment -
Google search engine

Most Popular

Recent Comments