ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ಮಂಜುಳಾರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲನಿ ನಿವಾಸದಲ್ಲಿದ್ದ ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳು ಈಗ ಅವರನ್ನು ಶಾಂತಿನಗರದ ಕಚೇರಿಗೆ ಕರೆ ತಂದುವಿಚಾರಣೆ ನಡೆಸುತ್ತಿದ್ದಾರೆ.
ವಾಲ್ಮೀಕಿ ನಿಗಮದ 187 ಕೋಟಿ ಅಕ್ರಮ ವ್ಯವಹಾರಲ್ಲಿ ಹಲವಾರು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬಂಧನಕ್ಕೆ ಒಳಗಾದ ನಾಗೇಂದ್ರ ಅವರ ಬ್ಯಾಂಕ್ ಖಾತೆ ಜೊತೆ ಕುಟುಂಬಸ್ಥರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪತ್ನಿಯ ಖಾತೆಯಿಂದ ಹೆಚ್ಚು ಹಣ ವರ್ಗಾವಣೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಇಡಿ ಅಧಿಕಾರಿಗಳು ಮಂಜುಳಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸುಮಾರು 1 ಗಂಟೆ 30 ನಿಮಿಷಗಳ ಕಾಲ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆದರೆ ಈ ವೇಳೆ ಅವರು ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಕರೆತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮಧ್ಯೆ, ಪ್ರಕರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಹೈದರಾಬಾದ್ ಮೂಲದ ಖಾಸಗಿ ಬ್ಯಾಂಕಿನಿಂದ ಬಳ್ಳಾರಿ ಜಿಲ್ಲೆಯ ಸುಮಾರು 20ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ವರದಿಯಾಗಿದೆ.