ಶಿವಮೊಗ್ಗ : ಮಲೆನಾಡಿನ ವಿಶಿಷ್ಟ ಹಲಸಿನ ತಳಿಗಳಾದ ಹಳದಿ ರುದ್ರಾಕ್ಷಿ-ಜೆ.ಎ.ಆರ್., ಆರೆಂಜ್-ಆರ್.ಪಿ.ಎನ್., ಕೆಂಪು ರುದ್ರಾಕ್ಷಿ-ಡಿ.ಎಸ್.ವಿ ಮತ್ತು ರೆಡ್-ಆರ್.ಟಿ.ಬಿ. ತಳಿಗಳಿಗೆ ನವದೆಹಲಿ ಭಾರತ ಸರ್ಕಾರದ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ ನೋಂದಣಿಗೊಂಡು ಮಾನ್ಯತೆ ಪಡೆದಿವೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಂ.ಬಿ.ದುಶ್ಯಂತಕುಮಾರ್ ಮಾಹಿತಿ ನೀಡಿ, ಅಳಿವಿನಂಚಿನಲ್ಲಿರುವ ಅಪರೂಪದ ಹಲಸಿನ ತಳಿಗಳನ್ನು ಸಂರಕ್ಷಿಸಿ, ಬೆಳೆಸುವ ಹಾಗೂ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಈ ನಾಲ್ಕು ತಳಿಗಳ ಕುರಿತು ಸುಮಾರು ೩-೪ವರ್ಷಗಳಿಂದ ಸಮಗ್ರ ಅಧ್ಯಯನ ನಡೆಸಿ, ಸಂಪೂರ್ಣ ಮಾಹಿತಿಯನ್ನು ನವದೆಹಲಿಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಾಧಿಕಾರದಿಂದ ನೇಮಕಗೊಂಡ ತಜ್ಞ ವಿಜ್ಞಾನಿಗಳು ೨ಬಾರಿ ಸ್ಥಳ ಪರಿಶೀಲನೆ ನಡೆಸಿ, ವಿವರವಾದ ಮಾಹಿತಿಯನ್ನು ಸಂಗ್ರಹಿಸಿ, ಅಂತಿಮವಾಗಿ ನೋಂದಣಿಗೆ ಅರ್ಹವೆಂದು ಶಿಫಾರಸ್ಸು ಮಾಡಿದ್ದ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯ ಪೂರ್ಣಗೊಂಡು ಪ್ರಮಾಣಪತ್ರ ದೊರಕಿರುವುದು ಹರ್ಷದ ಸಂಗತಿ ಎಂದವರು ಮಾಹಿತಿ ನೀಡಿದರು..
ಈ ತಳಿಗಳು ಮಲೆನಾಡು ಮಾತ್ರವಲ್ಲದೇ ದೇಶದ ಎಲ್ಲೆಡೆ ಬೆಳೆಯಬಹುದಾಗಿದ್ದು, ಎಲ್ಲಾ ಕಾಲಮಾನಕ್ಕೂ ಹೊಂದಿಕೊಳ್ಳಲಿವೆ. ಇದರ ಸವಿ ಎಲ್ಲರೂ ಸವಿಯುವಂತಾಗಬೇಕು. ಅಲ್ಲದೇ ಅಪರೂಪದ ತಳಿ ಇವುಗಳಾಗಿದ್ದು, ಹಲಸು ಬೆಳೆಯುವ ಆಸಕ್ತ ಕೃಷಿಕರಿಂದ ಈ ಹಲಸಿನ ತಳಿ ಉಳಿದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಾಧ್ಯಾಪಕ ಡಾ.ನಾಗರಾಜಪ್ಪ ಅಡಿವೆಪ್ಪರ್, ಸಹ ಸಂಶೋಧನಾ ನಿರ್ದೇಶಕ ಡಾ.ಜಿ.ಎನ್.ತಿಪ್ಪೇಶಪ್ಪ, ಜಿಲ್ಲಾ ವಾರ್ತಾಧಿಕಾರಿ ಆರ್.ಮಾರುತಿ, ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಸೇರಿದಂತೆ ಹಲಸು ಬೆಳೆಗಾರರು ಉಪಸ್ಥಿತರಿದ್ದರು.