ಶಿವಮೊಗ್ಗ: ಹೆಣ್ಣು ಸಾಕ್ಷತ್ಕಾರ, ಹೆಣ್ಣು ಸಮಾಜದ ಕಣ್ಣು ಎಂದು ಮೂಲೆಗದ್ದೆ ಶ್ರೀಸದಾನಂದ ಶಿವಯೋಗಾಶ್ರಮದ ಶ್ರೀಅಭಿನವ ಚನ್ನಬಸವ ಸ್ವಾಮೀಜಿ ನುಡಿದರು.
ಅವರು ಇಂದು ವಿನೋಬನಗರದ ಶಿವಾಲಯದಲ್ಲಿ ಹಮ್ಮಿಕೊಂಡಿದ್ದ, ಜಿಲ್ಲಾ ಜಂಗಮ ಮಹಿಳಾ ಸಮಾಜದ 6ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಎಲ್ಲಾ ರಾಷ್ಟ್ರಗಳು ಭಾರತವನ್ನು ಪ್ರೀತಿಸಲು ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ. ಈ ಸಂಸ್ಕಾರ ಮತ್ತು ಸಂಸ್ಕೃತಿಯು ಮಹಿಳೆಯರ ವರವಾಗಿದೆ. ಭಾರತದ ಮಹಿಳೆಯರಿಗೆ ಜಗತ್ತಿನಲ್ಲಿಯೇ ಗೌರವವಿದೆ ಎಂದರು.
12ನೇ ಶತಮಾನದಲ್ಲಿ ಅಕ್ಕಮಹಾದೇವಿಯ ಚರಿತ್ರೆಯನ್ನು ನಾವೆಲ್ಲರೂ ಕಂಡಿದ್ದೇವೆ. ಶರಣರು ನಮ್ಮ ಕನ್ನಡ ನಾಡಿನ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಅವರ ವಚನಗಳು ನಮಗೆ ದಾರಿದೀಪವಾಗಿವೆ. ನಮ್ಮ ಯುವಕ ಯುವತಿಯರು ಭಾರತೀಯ ಸಂಸ್ಕೃತಿಯನ್ನು ಗೌರವಿಸಬೇಕು. ಹೆಣ್ಣಿಗೆ ಎಲ್ಲಿ ಗೌರವವಿರುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ನಮ್ಮದು. ಹಾಗಾಗಿಯೇ ಹೆಣ್ಣು ಸಾಕ್ಷತ್ಕಾರ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಹಿಳೆಯರು ಬಹುದೊಡ್ಡ ಜವಬ್ದಾರಿಯಲ್ಲಿದ್ದು, ಪುರುಷ ಸಮಾಜ ಕೂಡ ಅವರನ್ನು ಗೌರವಿಸಬೇಕು. ಮಹಿಳೆಯರು ಇಂದು ನಾಲ್ಕು ಗೋಡೆಗಳಿಂದ ಆಚೆ ಬಂದಿದ್ದಾರೆ. ಬದುಕನ್ನು ಕಟ್ಟಿಕೊಳ್ಳಲು ಸ್ವಾವಲಂಬನಿಗಳಾಗಲು ಪ್ರಯತ್ನಿಸುತ್ತಿದ್ದಾರೆ. ಪುರುಷ ಸಮಾಜ ಅವರನ್ನು ಗೌರವಿಸಬೇಕು. ಬಸವಣ್ಣನವರ ಕಾಲದಲ್ಲಿಯೇ ಮಹಿಳೆಯರಿಗೆ ಉನ್ನತ ಸ್ಥಾನವಿತ್ತು. ಇಂದಿನ ಹೊಸ ತಲೆಮಾರಿನಲ್ಲಿ ಮಹಿಳೆ ಪುರುಷರಷ್ಟೇ ಸಮರ್ಥವಾಗಿ ದೊಡ್ಡ ದೊಡ್ಡ ಜವಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕೇವಲ ಮನೆಯಲ್ಲಿ ಮಾತ್ರ ಕೆಲಸ ಮಾಡದೆ ಹೊಸ ಜಗತ್ತಿನಲ್ಲೂ ದುಡಿದು ಕುಟುಂಬಕ್ಕೆ ನೆರವಾಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಸಮಾಜದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಸುಜಯಪ್ರಸಾದ್, ಪದಾಧಿಕಾರಿಗಳಾದ ಶೈಲಜಾ, ಪ್ರೇಮಾ, ಸುಲೋಚನ, ಗಿರಿಜಾ ಪ್ರಭುಕುಮಾರ್, ಸುಜಾತ ನಾಗರಾಜ್, ಸುನಂದ ಜೈದೇವಪ್ಪ, ಅರುಣಾ ಹಿರೇಮಠ್, ರೇಖಾ ವಾಗೀಶ್, ರಶ್ಮಿ, ಸುಜಾತ ಲಿಂಗರಾಜು ಪ್ರಮುಖರಾದ ಬಳ್ಳಕೆರೆ ಸಂತೋಷ್, ಮುರುಗೇಶ್ ಕುಸನೂರು, ಮಹೇಶ್ ಮೂರ್ತಿ ಸೇರಿದಂತೆ ವೇದಮೂರ್ತಿ, ಮರುಳೇಶ್, ರುದ್ರಯ್ಯ, ಸೇರಿದಂತೆ ಹಲವರಿದ್ದರು.
ಪುಷ್ಪ ಪ್ರಾರ್ಥಿಸಿದರು, ಗಿರಿಜಮ್ಮ ಸಂಗಡಿಗರು ವೇದಘೋಷಿಸಿದರು, ನಾಗರತ್ನ ಸ್ವಾಗತಿಸಿದರು. ಸುನಂದ ನಿರೂಪಿಸಿದರು.