Thursday, December 5, 2024
Google search engine
Homeಇ-ಪತ್ರಿಕೆವಚನಗಳ 1 ಸಾವಿರ ಹಸ್ತಪ್ರತಿ ಸಂಗ್ರಹಿಸಿದ್ದ ಫ.ಗು.ಹಳಕಟ್ಟಿ: ಶಿವಯೋಗಿ ಹಂಚಿನಮನೆ

ವಚನಗಳ 1 ಸಾವಿರ ಹಸ್ತಪ್ರತಿ ಸಂಗ್ರಹಿಸಿದ್ದ ಫ.ಗು.ಹಳಕಟ್ಟಿ: ಶಿವಯೋಗಿ ಹಂಚಿನಮನೆ

ಶಿವಮೊಗ್ಗ: ವಚನಗಳ ಮೌಲ್ಯವನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಜನರಿಗೆ ತಲುಪಿಸಿದರು. ಇದು ಕನ್ನಡ ನಾಡಿಗೆ ಅವರು ನೀಡಿದ ದೊಡ್ಡ ಕೊಡುಗೆ ಎಂದು  ಪೆಸಿಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿವಯೋಗಿ ಹಂಚಿನಮನೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಜೂ.02 ರಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ-ಡಾ.ಫ.ಗು.ಹಳಕಟ್ಟಿರವರ ಜನ್ಮ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಒಮ್ಮೆ ಅವರು ಪರಿಚಯದವರ ಮನೆಯಲ್ಲಿ ತಾಳೆಗರಿಗಳನ್ನು ಪೂಜಿಸುವುದನ್ನು ಕಾಣುತ್ತಾರೆ. ಅದು ವಚನಕಾರರು ರಚಿಸಿದ ವಚನಗಳೆಂದು ತಿಳಿದು, ವಚನಗಳ ಮೌಲ್ಯವನ್ನು ಎಲ್ಲರಿಗೆ ತಿಳಿಸಬೇಕೆಂದು ಪಣ ತೊಟ್ಟು 20 ವರ್ಷಗಳಲ್ಲಿ 1 ಸಾವಿರ ಹಸ್ತಪ್ರತಿ ಸಂಗ್ರಹಿಸುತ್ತಾರೆ. ಅದನ್ನು ಎಲ್ಲರಿಗೆ ಮುಟ್ಟಿಸಲು ಮಂಗಳೂರು ಬಾಸೆಲ್ ಮುದ್ರಣಾಲಯ ಸಂಸ್ಥೆಗೆ ಮುದ್ರಿಸಲು ಕಳುಹಿಸುತ್ತಾರೆ. ಅವರು ಮುದ್ರಿಸಲು ಒಪ್ಪದಿದ್ದಾಗ, ಹತಾಶರಾಗದೇ ಮುದ್ರಿಸಲು ವ್ಯವಸ್ಥೆ ಮಾಡುತ್ತಾರೆ. ಮುಂದೆ ತಾವೇ ಮುದ್ರಣಾಲಯ ಆರಂಭಿಸಲು ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ಹಿತಚಿಂತಕ ಎಂಬ ಮುದ್ರಣಾಲಯ ತೆರೆಯುತ್ತಾರೆ. ಜನರಿಗೆ ವಚನ ಸಾಹಿತ್ಯ ತಲುಪಿಸಲು ಶಿವಾನುಭವ ಎಂಬ ಮಾಸ ಪತ್ರಿಕೆಯನ್ನು ಹೊರ ತರುತ್ತಾರೆ ಎಂದು ತಿಳಿಸಿದರು.

ತಮ್ಮ ಸಂಶೋಧನೆ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದಿದ್ದು ಸುಮಾರು 22 ಸಾವಿರ ವಚನಗಳನ್ನು ಸಂಗ್ರಹಿಸುವ ಮೂಲಕ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಿಗಾಗಿ 1927 ರಲ್ಲಿ ನವಕರ್ನಾಟಕ ಪತ್ರಿಕೆಯನ್ನು ಸ್ಥಾಪಿಸುತ್ತಾರೆ. ರೈತ ಸಂಘಗಳು, ಪರಿಷತ್ ಸದಸ್ಯನಾಗಿ ಅವರು ಉತ್ತಮ ಕೆಲಸಗಳನ್ನು ಮಾಡುತ್ತಾರೆ. ಅವರು ಸಂಗ್ರಹಿಸಿದ 4 ವಚನ ಸಂಪುಟಗಳು 23 ಭಾಷೆಗೆ ಅನುವಾದಗೊಂಡಿರುವುದು ನಮ್ಮ ಹೆಮ್ಮೆ. ಬಡತನ, ಅನಾರೋಗ್ಯ, ಕುಟುಂಬದ ಸಾವುನೋವು ಮೀರಿ ವಚನ ಸಾಹಿತ್ಯ ಸಂಗ್ರಹಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಫ.ಗು ಹಳಕಟ್ಟಿಯವರು 1964 ರಲ್ಲಿ ಲಿಂಗೈಕ್ಯರಾಗುತ್ತಾರೆ. ಅವರ ವಚನ ಸಂಗ್ರಹಗಳಿಗೆ ಪೂರಕವಾಗಿ ಎಂ.ಎಂ.ಕಲಬುರ್ಗಿಯವರು ಸಹಕರಿಸುತ್ತಾರೆ. ಬಿಎಲ್‍ಡಿ ಸಂಸ್ಥೆಯಲ್ಲಿ ಅವರ ಸಂಶೋಧನಾ ಕೇಂದ್ರವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್ ಎಂ ಮಹಾರುದ್ರ, ಕದಳಿ ವೇದಿಕೆ ಅಧ್ಯಕ್ಷೆ ಗಾಯತ್ರಿ ಪಾಟಿಲ್, ಶಾಶ್ವತ ಪ್ರತಿಷ್ಟಾನ ಅಧ್ಯಕ್ಷ ಪ್ರೊ.ಎ ಎಸ್ ಚಂದ್ರಶೇಖರ್, ಜಯಮ್ಮ ಕುಬಸತ್, ಸಮಾಜದ ಮುಖಂಡರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular

Recent Comments