ಸೊರಬ: ಮೊಹರಂ ಕೇವಲ ಮುಸ್ಲೀಂ ಸಮುದಾಯದವರು ಮಾತ್ರವಲ್ಲದೇ ಹಿಂದೂ ಸಮಾಜದವರು ಭಾವೈಕ್ಯತೆಯಿಂದ ಆಚರಿಸುವ ಹಬ್ಬವಾಗಿದ್ದು ಚಂದ್ರಗುತ್ತಿ ಸಮೀಪ ಚನ್ನಪಟ್ಟಣ ಗ್ರಾಮದಲ್ಲಿ ಮೊಹರಂ ಆಚರಣೆಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಕಳೆದ ಒಂದು ವಾರದಿಂದ ಇಮಾಂ ಹುಸೇನ್ ಸಾಹೇಬರ ಹಸ್ತಗಳನ್ನು ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.
ಮಂಗಳವಾರ ರಾತ್ರಿ ಅಗ್ನಿ ಕುಂಡ ( ಕೆಂಡ ಹಾಯುವುದು) ನಡೆಸಲಾಯಿತು. ಗ್ರಾಮದಲ್ಲಿ ಒಂದು ಶತಮಾನದ ಇತಿಹಾಸ ಇರುವ ಹಬ್ಬದಲ್ಲಿ ಕೆಲ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಕುಂಡಕ್ಕೆ ಕಾಳುಮೆಣಸು, ಉಪ್ಪು, ಕಟ್ಟಿಗೆಗಳನ್ನು ನೀಡಿ ಪ್ರಾರ್ಥಿಸಿ, ಭಕ್ತಿ ಸಮರ್ಪಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಪಂಜಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಡೊಳ್ಳು ಹಾಗೂ ವಿವಿಧ ವಾಧ್ಯಮೇಳಗಳು ಮೆರಗು ತಂದವು. ಗ್ರಾಮದ ಯುವಕರು ಡೊಳ್ಳಿನ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮಹಿಳೆಯರು ಪಂಜಾಕ್ಕೆ ಲೋಬಾನ ಸಮರ್ಪಿಸಿದರು.
ಕೆಲವಡೆ ಜಾತಿ-ಧರ್ಮಗಳ ನಡುವೆ ಭಿನ್ನಾಭಿಪ್ರಾಯ, ವೈಷಮ್ಯಗಳು ನಡೆಯುತ್ತಿರುವ ಸನ್ನಿವೇಶದಲ್ಲಿ ಮೊಹರಂ ಅಂತಹ ಹಿಂದೂ-ಮುಸ್ಲೀಂ ಸಮಾಜದವರು ಒಗ್ಗೂಡಿ ಭಾವೈಕ್ಯತೆಯಿಂದ ಹಬ್ಬ ಆಚರಿಸುವುದು ಮಾದರಿಯಾಗಿದೆ. ಇನ್ನು ಮೆರವಣಿಗೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಊರ ಗ್ರಾಮಸ್ಥರು ಪಾಲ್ಗೊಂಡಿದ್ದರು.