ಬೆಂಗಳೂರು: ರಾಜ್ಯದ 5 ಮಂದಿ ಕೇಂದ್ರ ಮಂತ್ರಿಗಳಿದ್ದರೂ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಒಂದು ರೀತಿ ಚೊಂಬು ಕೊಟ್ಟಿದ್ದಾರೆ. ಬಿಹಾರ, ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳಿಗೆ ಏನೂ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಕೇಂದ್ರದ ಬಜೆಟ್ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಆಂಧ್ರಪ್ರದೇಶ ಹಾಗೂ ಬಿಹಾರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಜೆಟ್‌ನಿಂದ ಯಾವುದೇ ಅನುಕೂಲ ಆಗಿಲ್ಲ. ರಾಜ್ಯಕ್ಕಂತೂ ಭಾರಿ ಅನ್ಯಾಯವಾಗಿದೆ” ಎಂದು ಹೇಳಿದರು.
“ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ರೀತಿಯಿಂದ ಅನುಕೂಲವಾಗಿಲ್ಲ. ಕೈಗಾರಿಕೆ, ರೈಲ್ವೆ ಸೇರಿ ಯಾವುದೇ ಕ್ಷೇತ್ರಗಳಿಗೂ ಹೆಚ್ಚಿನ ಅನುದಾನ ಕೊಟ್ಟಿಲ್ಲ. ಒಟ್ಟಿನಲ್ಲಿ ಈ ಬಜೆಟ್ ನಿರಾಶಾದಾಯಕ, ನೀರಸವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೈತರಿಗೆ ಭಾರಿ ಅನ್ಯಾಯವಾಗಿದೆ. ಅವರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಬಗ್ಗೆ ಮಾತನಾಡುವ ಇವರು ಅನುದಾನ ಕಡಿಮೆ ಮಾಡಿದ್ದಾರೆ. ಕಳೆದ ಮಧ್ಯಂತರ ಬಜೆಟ್‌ನಲ್ಲಿ 9409 ಕೋಟಿ ರೂ. ಮೀಸಲಿಟ್ಟಿದ್ರು. ಆದ್ರೆ ಈಗ 6300 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಇಲ್ಲ. ಕೈಗಾರಿಕಾ, ರೈಲ್ವೆ ಕೃಷಿ ಕ್ಷೇತ್ರಗಳಿಗೆ ಯಾವುದೆ ಕೊಡುಗೆ ಇಲ್ಲ. ಬಹಳ ದಿನಗಳಿಂದ ರಾಯಚೂರಿಗೆ AIIMS ಆಸ್ಪತ್ರೆ ಕೇಳಿದ್ವಿ, ಕೊಟ್ಟಿಲ್ಲ. ಸಂಪೂರ್ಣ ನಿರಾಶದಾಯಕ ಜನವಿರೋಧಿ ಬಜೆಟ್ ಇದು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪಂಗನಾಮ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.