ಶಿವಮೊಗ್ಗ : ಒತ್ತಡದಿಂದ ಬಿಡುಗಡೆಗೊಳ್ಳಲು ಕ್ರೀಡೆ ಸಹಕಾರಿ ಎಂದು ಜಿಲ್ಲಾಧಿಕಾರಿ ಡಾ|| ಎಂ. ಲೋಕೇಶ್ ಹೇಳಿದರು.
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಕಂದಾಯ ಇಲಾಖೆ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕಂದಾಯ ಇಲಾಖೆ ನೌಕರರು ತಮ್ಮ ದೈನಂದಿನ ಕಛೇರಿ ಕೆಲಸದಿಂದ ಒತ್ತಡಕ್ಕೆ ಸಿಲುಕಿರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ರೀಡಾಕೂಟಗಳು ಅವರನ್ನು ಒತ್ತಡದಿಂದ ಮುಕ್ತರನ್ನಾಗಿಸಲು ಕ್ರೀಡೆ ಸಹಕಾರಿಯಾಗುತ್ತದೆ ಎಂದರು.
ಮನುಷ್ಯನ ಆರೋಗ್ಯ ಉತ್ತಮವಾಗಿರಬೇಕಾದರೆ ಪ್ರತಿಯೊಬ್ಬರೂ ಸಹ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ. ಪ್ರತಿನಿತ್ಯವೂ ಸಹ ಕಛೇರಿಯ ಕೆಲಸದ ಒತ್ತಡದಲ್ಲಿ ತೊಡಗುವುದು ಸಾಮಾನ್ಯ. ಆದರೆ ಇದರಿಂದ ಹೊರಬರಬೇಕಾದರೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ನೌಕರನೂ ಸಹ ಇಂತಹ ಕ್ರೀಡಾಕೂಟವನ್ನು ಸವಿಯಬೇಕೆಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿ.ಪಂ. ಸಿಇಓ ರಾಕೇಶ್ ಕುಮಾರ್ ಮಾತನಾಡಿ, ಕಂದಾಯ ನೌಕರರು ಎರಡು ದಿನಗಳ ಕಾಲ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಅವರ ಮನಸ್ಸು ಮತ್ತಷ್ಟು ಉಲ್ಲಾಸವಾಗಿರುತ್ತದೆ. ಇದರಿಂದ ಕಛೇರಿ ಕೆಲಸವನ್ನು ಮತ್ತಷ್ಟು ವೇಗದಲ್ಲಿ ಮಾಡಲು ಸಹಕಾರಿಯಾಗುತ್ತದೆ ಎಂದರು.
ಕ್ರೀಡೆ ಕೇವಲ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಅಲ್ಲದೆ, ನಮ್ಮ ಆರೋಗ್ಯವನ್ನೂ ಕೂಡಾ ಸುಸ್ಥಿತಿಯಲ್ಲಿಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಕಂದಾಯ ನೌಕರನೂ ಸಹ ಈ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವುದು ಅತೀ ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಏಳುಮಲೈ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
ಒತ್ತಡದಿಂದ ಬಿಡುಗಡೆಗೆ ಕ್ರೀಡೆ ಸಹಕಾರಿ : ಜಿಲ್ಲಾಧಿಕಾರಿ ಲೋಕೇಶ್
RELATED ARTICLES