ಶಿವಮೊಗ್ಗ : ಶಿಕ್ಷಣ ಇಲಾಖೆಯ ಅನುಮತಿ ಪಡೆಯದೇ ಶಾಲೆಗಳನ್ನು ಆರಂಭಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇಂದು ತಮ್ಮ ಕಚೇರಿ ಸಭಾಂ ಗಣದಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿ ಯಾಗಿ ಶಾಲೆಗಳನ್ನು ಆರಂಭಿಸಲಿಚ್ಚಿ ಸುವ ಸಂಸ್ಥೆಗಳ ಮುಖ್ಯಸ್ಥರು ನಿಯಮಾನುಸಾರ ಇಲಾಖೆಯ ಅನುಮತಿ ಪಡೆದು ನಂತರ ಶಾಲೆಯನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರಾಜ್ಯ ಪಠ್ಯಕ್ರಮ ಮತ್ತು ಐ.ಸಿ.ಎಸ್.ಇ. ಪಠ್ಯಕ್ರಮ ಪಾಲನೆ ಮಾಡುತ್ತಿರುವ ಎಲ್ಲಾ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗ ಳಿಂದ ಪಡೆಯುತ್ತಿರುವ ಶುಲ್ಕದ ವಿವರಗಳನ್ನು ಶಾಲೆಯ ಸೂಚನಾ ಫಲಕದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ಕಡ್ಡಾಯವಾಗಿ ಪ್ರಕಟಿಸುವಂತೆ ಸೂಚಿಸಿರುವ ಅವರು, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿಯೇ ಶಾಲಾ ದಾಖಲಾತಿಗಳನ್ನು ನಡೆಸು ವಂತೆ ಸೂಚಿಸಿದರು.
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕ್ಕಾಗಿ ಮಕ್ಕಳ ಹಕ್ಕು ಕಾಯಿದೆಯಂತೆ ಖಾಸಗಿ ಶಾಲೆಗಳಲ್ಲಿ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಮೂರು ವರ್ಷದ ಅವಧಿಯಲ್ಲಿ ಹೊಂದು ವುದು ಕಡ್ಡಾಯವಾಗಿದೆ. ಅಂತೆಯೇ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನೇ ನೇಮಕಾತಿ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಶಾಲೆಯ ಆಡಳಿತ ಮಂಡಳಿ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವು ವಿಚಾರಣೆ ನಡೆಸಿ, ೫ಲಕ್ಷ ರೂ.ಗಳ ವರೆಗೆ ದಂಡ ವಿಧಿಸಲಿದೆ ಎಂದರು.
ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯುವ ಸಂದರ್ಭದಲ್ಲಿ ಕ್ಯಾಪಿಟೇಶನ್ ಶುಲ್ಕ ತೆಗೆದುಕೊಳ್ಳುವಂತಿಲ್ಲ ಹಾಗೂ ಪ್ರವೇಶ ಪರೀಕ್ಷೆ ನಡೆಸುವಂತಿಲ್ಲ. ಪಾಲಕರಿಂದ ಪಡೆದ ಶುಲ್ಕಕ್ಕೆ ಸೂಕ್ತ ರಸೀದಿ ನೀಡಬೇಕು ಎಂದರು.
ಶಿಕ್ಷಣ ಸಂಸ್ಥೆಯವರು ಯಾವುದೇ ಕಾರಣಕ್ಕೂ ಮಕ್ಕಳ ದಾಖಲಾತಿ ಯನ್ನು ನಿರಾಕರಿಸುವಂತಿಲ್ಲ. ಪೋಷಕರನ್ನಾಗಲಿ, ಮಕ್ಕಳನ್ನಾಗಲೀ ಲಿಖಿತ ಅಥವಾ ಮೌಖಿಕ ಸಂದರ್ಶನ ನಡೆಸುವಂತಿಲ್ಲ. ಪೋಷಕರು ಪದವೀಧರರಾಗಿರಬೇಕು. ಪ್ರವೇಶ ಬಯಸುವ ಮಕ್ಕಳು ಇಂತಿಷ್ಟೇ ಅಂಕಗಳನ್ನು ಪಡೆದಿರಬೇಕು ಎಂದು ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದರು.
ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ೧ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಸಂಬಂಧಿಸಿದ ಶೈಕ್ಷಣಿಕ ವರ್ಷದ ಜೂನ್ ೦೧ರಂದು ೫ವರ್ಷ ೧೦ತಿಂಗಳು ಹಾಗೂ ಎಲ್.ಕೆ.ಜಿ. ತರಗತಿಗೆ ದಾಖಲಾಗುವ ಮಗುವು ಮೂರು ವರ್ಷ ೧೦ತಿಂಗಳು ಪೂರ್ಣಗೊಂಡಿರಬೇಕು ಎಂದರು.
ಶಾಲಾ ವಾಹನದಲ್ಲಿ ಸುರಕ್ಷತಾ ನಿಯಮಗಳನ್ನು ಅಳವಡಿಸಿದ್ದು, ಸಾಮರ್ಥ್ಯಕ್ಕೆ ಮೀರದಂತಿರಬೇಕು. ಚಾಲಕರು ಪರವಾನಿಗೆ ಹೊಂದಿದ್ದು, ಕನಿಷ್ಟ ೪ವರ್ಷಗಳ ಅನುಭವ ಹೊಂದಿರಬೇಕು. ವಾಹನದಲ್ಲಿ ಕರೆದೊಯ್ಯುವ ಮಕ್ಕಳ ಹೆಸರು, ತರಗತಿ ಮತ್ತು ಮನೆಯ ವಿಳಾಸ, ದೂರವಾಣಿ ಸಂಖ್ಯೆ, ರಕ್ತದ ಗುಂಪು, ಮಾರ್ಗದ ವಿವರ ಇತ್ಯಾದಿ ವಿವರ ಗಳನ್ನು ವಾಹನದಲ್ಲಿಟ್ಟಿರಬೇಕು. ಗಟ್ಟಿಮುಟ್ಟಾದ ಮುಚ್ಚಿದ ಕವಚ ಹೊಂದಿದ ವಾಹನ ಇದ್ದು, ವೇಗ ನಿಯಂತ್ರಕಅಳವಡಿಸಿರಬೇಕು. ಅಲ್ಲದೇ ೧೫ವರ್ಷಕ್ಕಿಂತ ಹಳೆಯ ದಾದ ವಾಹನ ಬಳಸಲು ಯೋಗ್ಯವಲ್ಲ ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಕೆ. ರಾಕೇಶ್‌ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಛಾಧೋ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮುಂತಾದವರು ಉಪಸ್ಥಿತರಿದ್ದರು.
ಅನುಮತಿ ಪಡೆಯದೆ ಶಾಲೆ ನಡೆಸುವವರ ವಿರುದ್ಧ ಕ್ರಮ : ಜಿಲ್ಲಾಧಿಕಾರಿ ಲೋಕೇಶ್
RELATED ARTICLES