ಶಿವಮೊಗ್ಗ : ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಿವಮೊಗ್ಗ ಜಿಲ್ಲೆಯ ವೀಕ್ಷಕ ಹಾಗೂ ಸಂಸದ ಚಂದ್ರಪ್ಪ ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿಯೇ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ರಿಗೆ ಟಿಕೆಟ್ ನೀಡಬೇಡಿ ಎನ್ನುವವರ ಮೇಲೆ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಇಂದು ಪಕ್ಷದ ಕಛೇರಿ ಆವರಣದಲ್ಲಿ ನಡೆದಿದೆ.
ಕಾಂಗ್ರೆಸ್ ವೀಕ್ಷಕರ ಎದುರೇ ಹಾಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಬೆಂಬಲಿಗರು ರೌಡಿಸಂ ಪ್ರದರ್ಶಿ ಸಿದ್ದು, ಶಿವಮೊಗ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಕಡೆಯವರ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನೇ ಹರಿದು ಹಾಕಿದ ಘಟನೆ ಕೂಡಾ ಇಂದು ನಡೆಯಿತು.
ಜಿಲ್ಲೆಯ ೭ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಕುರಿತು ವೀಕ್ಷಕರಾಗಿ ಆಗಮಿಸಿದ್ದ ಚಿತ್ರದುರ್ಗದ ಲೋಕ ಸಭಾ ಸದಸ್ಯ ಬಿ.ಎಸ್.ಚಂದ್ರಪ್ಪ, ಮಾಜಿ ಸಂಸದ ಮಂಜುನಾಥ್ ಕುನ್ನೂರು ಪಕ್ಷದ ಕಚೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಭರಾಟೆ ಮುಗಿಲುಮುಟ್ಟಿತ್ತು.
ಒಂದು ಹಂತದಲ್ಲಿ ತಳ್ಳಾಟ, ನೂಕಾಟ ನಡೆದು ಕೈ ಕೈ ಮಿಲಾವಣೆ ಹಂತ ತಲುಪಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದ ಆಕಾಂಕ್ಷಿಗಳಾಗಿದ್ದ, ದೆಹಲಿ ವರೆಗೂ ಹೋಗಿ ಬಂದಿದ್ದ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಲ್. ಸತ್ಯನಾರಾಯಣರಾವ್, ಮುಕ್ತಿಯಾರ್ ಸೇರಿದಂತೆ ಹಲವು ಪ್ರಮುಖರು ಕೂಡ ಸ್ಥಳದಲ್ಲಿದ್ದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮತ್ತು ಶಿವಮೊಗ್ಗ ಟಿಕೆಟ್ ಆಕಾಂಕ್ಷಿ ಗಳ ಮುಖಾಮುಖಿಯಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪಕ್ಷದ ನಾಯಕರ ಮಾತಿಗೂ ಬೆಂಬಲಿಗರು ಕಿವಿಗೊಡ ಲಿಲ್ಲ. ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.
ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಬೆಂಬಲಿಗರ ಗಲಾಟೆಯಿಂದ ಕಾಂಗ್ರೆಸ್ ಕಚೇರಿ ಹಾಗೂ ಎದುರುಭಾಗದಲ್ಲಿ ಜನಜಾತ್ರೆ ಸೇರಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಎತ್ತ ನೋಡಿದರೂ ಬ್ಯಾನರ್ ಗಳು, ಬೆಂಬಲಿಗರ ಘೋಷಣೆ, ನಮ್ಮ ನಾಯಕನಿಗೆ ಬರುವ ವಿಧಾನ ಸಭೆ ಚುನಾವಣೆಗೆ ನಮ್ಮ ಬೆಂಬಲಿಗನಿಗೇ ಟಿಕೇಟ್ ನೀಡಬೇಕೆಂಬ ಘೋಷಣೆ ಮುಗಿಲು ಮುಟ್ಟಿತ್ತು. ಶಿವಮೊಗ್ಗ ಗ್ರಾಮಾಂತರ ವಿಧಾನ ಸಭೆ ಕ್ಷೇತ್ರಕ್ಕೆ ಎಸ್.ರವಿಕುಮಾರ್, ಓ.ಶಂಕರ್, ಮಧುಸೂಧನ್, ಬಲದೇವ್ ಕೃಷ್ಣ, ಪಲ್ಲವಿ.ಜಿ ಅವರಿಗೆ ಟಿಕೇಟ್ ನೀಡಬೇಕೆಂದು ಒತ್ತಾಯಿಸಿ ಅವರ ಬೆಂಬಲಿಗರು ವೀಕ್ಷಕರಿಗೆ ಮನವಿ ಸಲ್ಲಿಸಿದರು.
ಇದೇ ಕ್ಷೇತ್ರಕ್ಕೆ ಪ್ರಮುಖ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಕರಿಯಣ್ಣ ಹಾಗೂ ಅವರ ಪುತ್ರ ಡಾ. ಶ್ರೀನಿವಾಸ್ ಕೂಡ ಸ್ಥಳದಲ್ಲಿದ್ದರು. ಭದ್ರಾವತಿ ಕ್ಷೇತ್ರಕ್ಕೆ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಪ್ರವೀಣ್ ಪಟೇಲ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದ್ದ ಪರಿಸ್ಥಿತಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿಲ್ಲ. ಕಳೆದ ಚುನಾಣೆಯಲ್ಲಿ ಕೇವಲ ೨೫೨ ಮತಗಳ ಅಂತರದಿಂದ ಕೆಬಿಪಿ ಜಯಶಾಲಿಯಾಗಿದ್ದರು. ಕೆಜೆಪಿ-ಬಿಜೆಪಿಯ ಗುದ್ದಾಟದಿಂದ ಇವರಿಗೆ ಜಯ ಸಿಕ್ಕಿತ್ತು. ಆದರೆ ಈ ಬಾರಿ ಪರಿಸ್ಥಿತಿ ಬೇರೆಯೇ ಆಗಿದೆ. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಜಾತಿ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಅವರು ಹೇಳುವಂತೆ ಬ್ರಾಹ್ಮಣ ಸಮುದಾಯದ ಮತಗಳು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಟಿಕೆಟ್ ಕೊಡಬೇಡಿ ಎನ್ನುವವರ ಮೇಲೆ ಹಲ್ಲೆ ನಡೆಸುವಂತಹ ಗೂಂಡಾಗಿರಿಯನ್ನು ಪ್ರದರ್ಶಿಸುತ್ತಿದ್ದಾರೆ. ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆ. ಕಾನೂನಾತ್ಮಕವಾಗಿ ನಡೆಯುವ ಮರಳು ಕ್ವಾರಿಗಳಿಗೆ ತಡೆಯೊಡ್ಡುತ್ತಿದ್ದಾರೆ. ಪಾಲಿಕೆಯ ಕಾಮಗಾರಿಯಲ್ಲಿ ಕಮೀಷನ್ ಪಡೆಯುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದ ವಿಶ್ವನಾಥ್ ಕಾಶಿಯನ್ನು ಇದುವರೆಗೂ ಮೇಯರ್ ಮಾಡುವಂತಹ ಪ್ರಯತ್ನವನ್ನು ಶಾಸಕರು ಮಾಡಿಲ್ಲ. ಅಲ್ಲದೆ ತಾವು ಪ್ರತಿನಿಧಿಸಿದ್ದ ಪಾಲಿಕೆಯ ವಾರ್ಡ್‌ನಲ್ಲಿ ಮತ್ತೊಬ್ಬರಿಗೆ ಇದುವರೆಗೂ ಅವಕಾಶ ಮಾಡಿಕೊಟ್ಟಿಲ್ಲ. ಈ ಎಲ್ಲಾ ಹಿನ್ನ್ಝೆಲೆಯಲ್ಲಿ ಈ ಬಾರಿ ಇವರಿಗೆ ಟಿಕೆಟ್ ನೀಡಬಾರದು ಎಂಬುದು ನಮ್ಮ ವಾದವಾಗಿದೆ.
-ಕೆ.ಬಿ.ಪ್ರಸನ್ನಕುಮಾರ್ ವಿರೋಧಿ ಗುಂಪು