ಗೋಣಿಕೊಪ್ಪ (ಕೊಡಗು): ಇಲ್ಲಿನ ಅಂಬೂರ್ ಬಿರಿಯಾನಿ ಹೋಟೆಲ್ ಇದ್ದ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿ ಹಲವರು ಸಿಕ್ಕಿಬಿದ್ದಿರುವ ದುರ್ಘಟನೆ ವರದಿಯಾಗಿದೆ.
ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿರುವ ಅಂಬೂರ್ ಧಮ್ ಬಿರಿಯಾನಿ ಹೋಟೆಲ್ ಇದ್ದ ಕಟ್ಟಡ ಇಂದು ದಿಢೀರನೆ ಕುಸಿದು ಬಿದ್ದು ಹೋಟೆಲ್‌ನಲ್ಲಿದ್ದ ಕಾರ್ಮಿಕರು, ಊಟಕ್ಕೆ ತೆರಳಿದ್ದ ಗ್ರಾಹಕರು ಸಿಲುಕಿಕೊಂಡ ಘಟನೆ ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರು ಧಾವಿಸಿದ್ದಾರೆ.
ತೀರಾ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ ಒಂದು ಭಾಗದಲ್ಲಿ ಅಂಬುರ್ ಬಿರಿಯಾನಿ ಹೋಟೆಲ್ ಮತ್ತೊಂದರಲ್ಲಿ ಮಟನ್ ಸ್ಟಾಲ್ ಅಂಗಡಿ ಇತ್ತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟಡ ಬೀಳುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೋಣಿಕೊಪ್ಪಲು ನಗರ ಪ್ರವೇಶಿಸಲು ವಿರಾಜಪೇಟೆಯಿಂದ ಬರುವ ವಾಹನಗಳು ಹೆಚ್ ಟಿ ಪೆಟ್ರೋಲ್ ಬಂಕ್ ಮುಖಾಂತರ ಬೈಪಾಸ್ ರಸ್ತೆ ಸಂಚಾರ ಮಾಡಿ, ಮೈಸೂರು ಹಾಗೂ ಪಾಲಿಬೆಟ್ಟ ರಸ್ತೆಯಿಂದ ಬರುವ ವಾಹನಗಳು ಪೊನ್ನಂಪೇಟೆ ಜಂಕ್ಷನ್ ಗಾಗಿ ಬೈಪಾಸ್ ರಸ್ತೆ ಮುಖಾಂತರ ಸಂಚರಿಸುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.