Thursday, December 5, 2024
Google search engine
Homeಇ-ಪತ್ರಿಕೆಕೊಲೆ ಪ್ರಕರಣ: ದರ್ಶನ್ ಬಂಧನಕ್ಕೆ ಸುಳಿವು ನೀಡಿದ ಸಿಸಿಟಿವಿ

ಕೊಲೆ ಪ್ರಕರಣ: ದರ್ಶನ್ ಬಂಧನಕ್ಕೆ ಸುಳಿವು ನೀಡಿದ ಸಿಸಿಟಿವಿ

ಬೆಂಗಳೂರು:. ರೇಣುಕಾಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ನಟ ದರ್ಶನ್  ಮತ್ತು ಅವರ ಆಪ್ತೆ ಪವಿತ್ರಾ ಗೌಡ ಜೊತೆಗೆ  11 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು, ಉದ್ಯಮಿ ವಿನಯ್, ದರ್ಶನ್ ಬಾಡಿಗಾರ್ಡ್ಸ್‌ ಸೇರಿದಂತೆ ಹಲವರಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ನಾಲ್ವರ ವಿಚಾರಣೆ ನಡೆಯುತ್ತಿದೆ. ಉಳಿದ ಆರೋಪಿಗಳನ್ನು ಪೊಲೀಸರು ಕಾಮಾಕ್ಷಿಪಾಳ್ಯ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 9ರಂದು ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್‌ನ ಪಕ್ಕದಲ್ಲಿರುವ ರಾಜಕಾಲುವೆ ಬಳಿ ಮೃತದೇಹವೊಂದು ಪತ್ತೆಯಾಗಿತ್ತು. ಅಲ್ಲಿಯೇ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗೆ ಈ ಮೃತದೇಹ ಕಾಣಿಸಿತ್ತು. ಅಲ್ಲದೇ, ಮೃತದೇಹವನ್ನು ನಾಯಿಗಳು ಎಳೆದಾಡಿದ್ದವು. ಶವದ ಒಂದು ಭಾಗ ಮೋರಿಯ ಪಕ್ಕದಲ್ಲಿದ್ದರೇ, ಮತ್ತೊಂದು ಭಾಗ ಮೋರಿಯಲ್ಲಿ ಬಿದ್ದಿತ್ತು. ಇದನ್ನು ಕಂಡ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶವವನ್ನು ಮೊದಲ ಬಾರಿ ನೋಡಿದ್ದ ಅನುಗ್ರಹ ಅಪಾರ್ಟ್ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ರಾಮ್ ದೋರ್​​ ಜೀ ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪಾರ್ಟ್ಮೆಂಟ್ ಮುಂಭಾಗ ಗಸ್ತು ಮಾಡುತ್ತಿದ್ದಾಗ ಮೃತದೇಹ ಪತ್ತೆಯಾಗಿತ್ತು. 35 ವರ್ಷ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೆಕ್ಯೂರಿಟಿ ಗಾರ್ಡ್ ಆಗ್ರಹಿಸಿದ್ದರು.

ಅಲ್ಲದೇ, ಡೆಲಿವೆರಿ ಬಾಯ್ ಮನು ಎಂಬಾತನೂ ಕೂಡ ಮೃತದೇಹವನ್ನು ಮೊದಲು ಕಂಡಿದ್ದಾಗಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. “ಮೊದಲಿಗೆ ನಾನು ಕಂಡಾಗ ಯಾರೋ ಕುಡಿದು ಬಿದ್ದಿರಬಹುದು ಎಂದುಕೊಂಡಿದ್ದೇ, ಆ ನಂತರ ಮೃತದೇಹವನ್ನು ನಾಯಿಗಳನ್ನು ಕಚ್ಚಿ ತಿನ್ನುತ್ತಿದ್ದವು. ಬಳಿಕ, ನಾನು ನಾಯಿಗಳನ್ನು ಓಡಿಸಿದೆ. ನಾಯಿಗಳು ಕಿವಿಯನ್ನು ಕಚ್ಚಿ ತಿಂದಿದ್ದವು. ಬಳಿಕ, ಈ ವಿಚಾರ ಕೇಳಿ ತುಂಬಾ ಶಾಕ್ ಆಯಿತು” ಎಂದಿದ್ದಾರೆ.

ಮೊದಲಿಗೆ ಅಪರಿಚಿತ ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದ ಹಿನ್ನೆಲೆ, ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಘಟನೆ ಸಂಬಂದ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಜೂನ್ 8ರಂದು ರೇಣುಕಾಸ್ವಾಮಿಯ ಕೊಲೆಯಾಗಿದೆ ಎಂದು ಹೇಳಲಾಗಿದೆ. ಜೂನ್ 9ರಂದು ಕಾಮಾಕ್ಷಿಪಾಳ್ಯದ ಮೋರಿಯಲ್ಲಿ ಒಂದು ಶವ ಸಿಕ್ಕಿದೆ. ಆ ದೇಹ ಯಾರದ್ದು ಎಂದು ತನಿಖೆ ಮಾಡಿದಾಗ ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ಗೊತ್ತಾಗಿದೆ. ಬೆಂಗಳೂರಿನ ಗಿರಿನಗರ ಮೂಲದ ಮೂವರು ಏಕಾಏಕಿ ಪೊಲೀಸ್ ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ, ಕೊಲೆ ಮಾಡಿದ್ದೇವೆಂದು ಹೇಳಿಕೊಂಡಿದ್ದರು. ಆದರೆ, ಪೊಲೀಸರು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಳಿಕ, ಘಟನೆ ಹಿಂದಿನ ಕಾರಣ ಗೊತ್ತಾಗಿದೆ ಎಂದು ಹೇಳಲಾಗಿದೆ.

ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ. ಈತ ಅಪೊಲೋ ಮೆಡಿಕಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತ ಬೆಸ್ಕಾಂ ನಿವೃತ್ತ ನೌಕರನ ಮಗ. ಕೊಲೆಯಾದ ವ್ಯಕ್ತಿ ನಟ ದರ್ಶನ್ ಅಭಿಮಾನಿ ಕೂಡ.

ಶನಿವಾರ ಮನೆಯಿಂದ ಹೊರಟವರು ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ. ರೇಣುಕಾಸ್ವಾಮಿ ಶವವಾಗಿ ಪತ್ತೆಯಾಗಿರುವ ಮಾಹಿತಿಯನ್ನು ಬೆಂಗಳೂರು ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವ್ಯಕ್ತಿಯ ಮುಖ, ತಲೆ ಹಾಗೂ ಕಿವಿಗೆ ರಕ್ತದ ಗಾಯ ಆಗಿರುವುದು ಕಂಡುಬಂದಿತ್ತು.

ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ಇತರ ತಾಂತ್ರಿಕ ಆಧಾರದ ಮೇಲೆ ಕೆಲವರನ್ನು ಬಂಧಿಸಿದ್ದಾರೆ. ಅವರ ವಿಚಾರಣೆ ಬಳಿಕ ಇದು ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ತಿಳಿದು ಬಂದಿದೆ. ಅಲ್ಲದೇ, ಆರೋಪಿಗಳು ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ. ಇದರ ಹಿಂದೆ ಚಿತ್ರ ನಟ ದರ್ಶನ್ ಇರುವುದು ತಿಳಿದು ಬಂದಿದೆ. ಈ ಹಿನ್ನೆಲೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಜೂನ್ 11ರಂದು ಬೆಳಿಗ್ಗೆ 8.30ಕ್ಕೆ ಬೆಂಗಳೂರು ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ನಟ ದರ್ಶನ್ ಅವರನ್ನು ಮೈಸೂರಿನ ರ್‍ಯಾಡಿಸನ್ ಹೋಟೆಲ್​ನಲ್ಲಿ ಬಂಧಿಸಲಾಗಿದೆ. ದರ್ಶನ್ ಬಂಧನದ ಬೆನ್ನಲ್ಲೇ ಆರ್.ಆರ್‌.ನಗರದಲ್ಲಿ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೈಸೂರಿನಲ್ಲಿ ದರ್ಶನ್ ಅವರನ್ನು ಬಂಧಿಸಿದ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಕೊಲೆ ಕೇಸ್‌ನಲ್ಲಿ ದರ್ಶನ್ ಆರೋಪಿಯ ಜೊತೆ ನಿರಂತರ ಸಂಪರ್ಕದ ಇರೋದು ಗೊತ್ತಾಗಿದೆ. ಆರೋಪಿಯ ವಿಚಾರಣೆ ವೇಳೆಯೂ ನಟ ದರ್ಶನ್ ಹೆಸರು ಬಾಯಿಬಿಟ್ಟಿದ್ದ ಎನ್ನಲಾಗಿದೆ.

ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದು, ದರ್ಶನ್ ಆಪ್ತೆ ಪವಿತ್ರಾ ಗೌಡಯಿಂದಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಕಾರಣಕ್ಕೆ ಪವಿತ್ರಾ ಮೇಲಿನ ಸಿಟ್ಟಿನಿಂದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದನು. ಇದರಿಂದಾಗಿ ದರ್ಶನ್, ರೇಣುಕಾ ಸ್ವಾಮಿ ಮೇಲೆ ಸಿಟ್ಟಾಗಿ ಬುದ್ಧಿಕಲಿಸಲು ನಿಶ್ಚಯಿಸಿದ್ದರು ಎನ್ನಲಾಗಿದೆ.

ಚಿತ್ರದುರ್ಗದಿಂದ, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಲು ಒಂದು ವಾರಗಳ ಕಾಲ ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಘು ಸಹಾಯ ಪಡೆಯಲಾಗಿತ್ತು. ರಘು ಹಾಗೂ ಅವನ ಸಹಚರರು ರೇಣುಕಾಸ್ವಾಮಿಯನ್ನು ಒಂದು ವಾರಗಳ ಕಾಲ ಗಮನಿಸಿದ್ದರು. ಆತನ ನಂಬರ್ ಪಡೆದು ಹುಡುಗಿಯ ರೀತಿ ಮಾತನಾಡಿ ಆತನನ್ನು ಸ್ಥಳವೊಂದಕ್ಕೆ ಬರುವಂತೆ ಹೇಳಿದ್ದರು ಎನ್ನಲಾಗಿದೆ.

ಕೊಲೆಯಾದ ರೇಣುಕಾಸ್ವಾಮಿ ಎಂಬುವನು ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್, ಫೋಟೋ ಕಳಿಸಿದ್ದನು. ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆ, ನಟ ದರ್ಶನ್ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆತರುವಂತೆ ಅವರ ಫ್ಯಾನ್ ಸಂಘಟನೆ ಅಧ್ಯಕ್ಷನಿಗೆ ಕರೆ ಮಾಡಿದ್ದರು. ಜೂ 8 ರಂದು ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ.

ಬಳಿಕ, ದರ್ಶನ್ ಸ್ನೇಹಿತ ಉದ್ಯಮಿ ವಿನಯ್ ಅವರ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಪಟ್ಟಣಗೆರೆ ಶೇಡ್​​ನಲ್ಲಿ ಆರೋಪಿಗಳು ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿಗೆ ಹಿಂಸೆ ನೀಡಿದ್ದಾರೆ. ಕಾದ ಕಬ್ಬಿಣದ ಸಲಾಕೆಯಿಂದ ರೇಣುಕಾಸ್ವಾಮಿ ಅವರಿಗೆ ಬರೆ ಹಾಕಿದ್ದಾರೆ. ಬಳಿಕ ಅವರ ಗುಪ್ತಾಂಗಕ್ಕೆ ಹಲವು ಬಾರಿ ಒದ್ದು ಹಲ್ಲೆ ಮಾಡಿದ್ದಾರೆ. ನಂತರ ತಲೆಗೆ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾರೆ. ರೇಣುಕಾಸ್ವಾಮಿ ದೇಹದ ಮೇಲೆ ಸುಟ್ಟಿರುವ ಗಾಯಗಳಿವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ವಾಮಿ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ರೇಣುಕಾಸ್ವಾಮಿ ಅವರಿಗೆ ದರ್ಶನ್ ಸೇರಿ 4 ಜನರಿಂದ ಶೆಡ್‌ನಲ್ಲಿ ಬಲವಾದ ಆಯುಧದಿಂದ ಹಲ್ಲೆ‌ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಎನ್ನುವವರು ಅಸಭ್ಯವಾಗಿ ಮೆಸೇಜ್ ಮಾಡಿದ್ದರು. ದರ್ಶನ್ ನಿರ್ದೇಶನದ ಮೇರೆಗೆ ರೇಣುಕಾಸ್ವಾಮಿ ಅವರನ್ನು ಕಾಮಾಕ್ಷಿಪಾಳ್ಯದ ಶೆಡ್‌ಗೆ ಕರೆದುಕೊಂಡು ಬಂದು ಬಲವಾಗಿ ಹೊಡೆಯಲಾಗಿದೆ. ಆ ಟೈಮ್‌ನಲ್ಲಿ ಅಲ್ಲಿ ದರ್ಶನ್, ಪವಿತ್ರಾ ಗೌಡ ಅವರು ಇದ್ದರು ಎಂದು ಆರೋಪಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕಾಂಟ್ಯಾಕ್ಸ್ ಲಿಸ್ಟ್, ವಾಟ್ಸಾಪ್ ಕಾಲ್‌ನಲ್ಲಿ ದರ್ಶನ್ ಅವರ ನಂಬರ್ ಇದ್ದು, ಕೆಲ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ. ಹೆಚ್ಚಿನ ವಿಚಾರಣೆ ನಡೆಯಬೇಕಿದ್ದು ಮಾಹಿತಿ ಹೊರಬೀಳಬೇಕಿದೆ.

RELATED ARTICLES
- Advertisment -
Google search engine

Most Popular

Recent Comments