ಬೆಂಗಳೂರು: ಪಿಎಸ್ಐ ಪರಶುರಾಮ್ ಸಾವು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿ ಬಳಿ, ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿಮ್ಮೇಗೌಡ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಬೆಂಗಳೂರು ಸಿಸಿಬಿ ಆರ್ಥಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
98ರ ಬ್ಯಾಚ್ ಅಧಿಕಾರಿಯಾಗಿದ್ದ ತಿಮ್ಮೇಗೌಡ ಬಿಡದಿಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ತಿಮ್ಮೇಗೌಡ ಬಹಳ ಟೆನ್ಶನ್‌ನಲ್ಲಿ ಇದ್ದರು.
ಬಿಡದಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಯಾವ ಕಾರಣಕ್ಕೆ ಟೆನ್ಷನ್‌ನಲ್ಲಿ ಇದ್ದೇನೆ ಎನ್ನುವುದರ ಬಗ್ಗೆ ಯಾರ ಜೊತೆಗೂ ಹೇಳಿಕೊಂಡಿರಲಿಲ್ಲ.
ತಿಮ್ಮೇಗೌಡ ಸುಮಾರು 20 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ತಿಂಗಳುಗಳ ಹಿಂದಷ್ಟೇ ಅವರು ಸಿಸಿಬಿ ಆರ್ಥಿಕ ವಿಭಾಗಕ್ಕೆ ವರ್ಗಾವಣೆಯಾಗಿದ್ದರು.
ಇದೀಗ ಬಿಡದಿ ಪೊಲೀಸರು ತಿಮ್ಮೇಗೌಡ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.