ಚಿತ್ರದುರ್ಗ: ಸಮಾಜವನ್ನು ಕಟ್ಟುವಾಗ ಬರುವಂತ ವಿವಿಧ ರೀತಿಯ ಮಾತುಗಳಿಗೆ ಕಿವಿ ಕೂಡಬಾರದು, ಅವುಗಳನ್ನು ಕೊಡವಿಕೊಂಡು ಮುನ್ನಡೆಯುವುದರ ಮೂಲಕ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕಿದೆ. ಆಗ ಮಾತ್ರ ಸಮಾಜ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ನಡೆದ ಜು.20ರಂದು ನಡೆದ ಶ್ರೀಗಳ ದೀಕ್ಷಾ ರಜತ ಮಹೋತ್ಸವವನ್ನು ಯಶಸ್ವಿಗೊಳಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಯಾವುದೇ ಒಂದು ಕಾರ್ಯಕ್ರಮ ನಡೆಯಬೇಕಾದರೆ ಹಲವಾರು ಜನರ ಸಹಾಯ ಸಹಕಾರ ಅಗತ್ಯವಾಗಿದೆ. ಇದೆ ರೀತಿ ಶ್ರೀಮಠದ ದೀಕ್ಷಾ ರಜತ ಮಹೋತ್ಸವದ ಕಾರ್ಯಕ್ರಮ ನಿಮ್ಮಗಳ ಸಹಕಾರ ಹೆಚ್ಚಿನ ಮಟ್ಟದಾಗಿದೆ. ನಮಗೆ ಇಂತಹ ಭಕ್ತರು ಸಿಕ್ಕಿರುವುದು ಪುಣ್ಯವಾಗಿದೆ, ಒಂದು ಕಾಲದಲ್ಲಿ ಏನು ಇಲ್ಲದೆ ಗುಡಿಸಲಿನಲ್ಲಿ ಇದ್ದ ನಿಮ್ಮ ಗುರುಗಳನ್ನು ಈಗ ವಾಸಕ್ಕೆ ಉತ್ತಮವಾದ ಕಟ್ಟಡ, ಓಡಾಡಲು ಕಾರನ್ನು ನೀಡಲಾಗಿದೆ. ಇದರ ಮೂಲಕ ರಾಜ್ಯದಲ್ಲಿ ಪ್ರವಾಸ ಮಾಡುವುದರ ಮೂಲಕ ಸಮಾಜವನ್ನು ಕಟ್ಟಲಾಗುತ್ತಿದೆ ಎಂದರು.
ಅಂಬೇಡ್ಕರ್ ರವರ ಮಾತಿನಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ನಮ್ಮ ಸಮಾಜ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ನಮ್ಮ ಮಠದಲ್ಲಿ ಬಡ ಮಕ್ಕಳಿಗೆ ಪ್ರಸಾದ ಜೊತೆಗೆ ಉಚಿತವಾದ ಶಿಕ್ಷಣವನ್ನು ನೀಡಲಾಗುತ್ತಿದೆ. ಇನ್ನೂ ಸಮಾಜವನ್ನು ರಾಜ್ಯ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಸಹ ಕಟ್ಟುವಂತ ಕಾರ್ಯವನ್ನು ಮಾಡಲಾಗುತ್ತಿದೆ. ಇದರೊಂದಿಗೆ ಸಮಾಜಕ್ಕೆ ಧಕ್ಕೆಯಾದಾಗಲೆಲ್ಲ ಹೋರಾಟವನ್ನು ಮಾಡುವುದರ ಮೂಲಕ ಸಮಾಜವನ್ನು ಮುನ್ನಡೆಸುವ ಕಾರ್ಯವನ್ನು ಮಾಡಲಾಗುತ್ತದೆ. ನಮ್ಮ ಸಮಾಜದವರು ಶಿಕ್ಷಣವನ್ನು ಪಡೆಯುವುದರ ಮೂಲಕ ವಿವಿಧ ರೀತಿಯ ಹುದ್ದೆಗಳಲ್ಲಿ ಇರಬೇಕಿದೆ, ಇದರಿಂದ ನಮ್ಮ ಸಮಾಜಕ್ಕೂ ಅನುಕೂಲ ನಿಮಗೂ ಸಹ ಅನುಕೂಲವಾಗಲಿದೆ ಎಂದು ಶ್ರೀಗಳು ತಿಳಿಸಿದರು.
ಹಿಂದಿನ ಕಾಲದಲ್ಲಿ ನಮ್ಮ ಸಮುದಾಯದವರು ಒಡ್ಡರು ಎಂದು ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದರು. ಆದರೆ ಈಗಲೂ ಸಹ ನಮ್ಮವರು ತಮ್ಮ ಜಾತಿಯನ್ನು ಹೇಳುತ್ತಿಲ್ಲ, ರಾಜ್ಯದಲ್ಲಿ ನಮ್ಮವರ ಸಂಖ್ಯೆ ಅಧಿಕವಾಗಿದ್ದರು ಸರಿಯಾದ ರೀತಿಯಲ್ಲಿ ಜಾತಿಯನ್ನು ನಮೂದಿಸದಿದ್ದರಿಂದ ನಮ್ಮ ಜಾತಿಯವರು ಎಷ್ಟಿದ್ದಾರೆ ಎಂದು ನಿಖರವಾಗಿ ಸಂಖ್ಯೆ ಸಿಗುತ್ತಿಲ್ಲ. ಇದರ ಬಗ್ಗೆ ನಾವುಗಳೇ ನಮ್ಮ ಜನಗಣತಿಯನ್ನು ಮಾಡಬೇಕಿದೆ. ಇದರಿಂದ ನಮ್ಮವರ ನಿಖರವಾದ ಸಂಖ್ಯೆ ಸಿಗಲು ಸಾಧ್ಯವಿದೆ. ನಮ್ಮವರು ಜಾತಿಯ ಬಗ್ಗೆ ಗರ್ವವನ್ನು ಪಡಬೇಕಿದೆ. ಇದನ್ನು ಬಹಿರಂಗವಾಗಿ ಹೇಳುವಂತೆ ಆಗಬೇಕಿದೆ. ನಾವುಗಳು ಬರುಬರುತ್ತಾ ಪರಿವರ್ತನೆ ಕಂಡುಕೊಂಡಾಗ ನಮ್ಮ ಘನತೆ ಗೌರವ ಹೆಚ್ಚಾಗುತ್ತದೆ. ಸವಾಲುಗಳನ್ನು ಸಮನಾಗಿ ಸ್ವೀಕಾರ ಮಾಡಬೇಕಿದೆ ಎಂದರು.
ಭೋವಿ ಅಭೀವೃಧ್ದಿ ನಿಗಮದ ಅಧ್ಯಕ್ಷ ರವಿ ಮಾತನಾಡಿ, ಸಮಾಜದ ಯಾವುದೇ ಕಾರ್ಯಕ್ರಮವಾದರೂ ಅದರಲ್ಲಿ ಏನಾದರೂ ಆದರೆ ಅದನ್ನು ಹೇಳದೆ ನುಂಗಿಕೊಂಡು ಹೋಗುವಂತ ಗುಣ ನಮ್ಮಲ್ಲಿ ಇರಬೇಕಿದೆ. ಸಮಾಜದ ಗುರುಗಳಿಗೆ ಶಕ್ತಿಯನ್ನು ತುಂಬವ ಕಾರ್ಯವಾಗಬೇಕಿದೆ ನಮ್ಮ ಸಮಾಜದವರಿಗೆ ಬಲವನ್ನು ನೀಡಬೇಕಿದೆ. ನಮ್ಮ ಕಾರ್ಯಕ್ರಮವನ್ನು ನೋಡಿ ಸಹಾಯ ಮಾಡದವರು ಈಗ ನೋವನ್ನು ಅನುಭವಿಸುತ್ತಿದ್ದಾರೆ. ಸಮಾಜದ ಸಹಾಯವನ್ನು ಪಡೆದವರು ಮರಳಿ ಸಮಾಜಕ್ಕೆ ಸಹಾಯವನ್ನು ಮಾಡುವವರ ಸಂಖ್ಯೆ ನಮ್ಮಲ್ಲಿ ಕಡಿಮೆ ಇದೆ. ಜವಾಬ್ದಾರಿಯಿಂದ ಸಮಜವನ್ನು ಮುನ್ನೆಡೆಸುವ ಕಾರ್ಯವನ್ನು ಮಾಡಬೇಕಿದೆ. ನಮ್ಮ ಸಮಾಜದವತಿಯಿಂದ ಒಂದೇ ಸಂಘಟನೆ, ಒಬ್ಬರೇ ಗುರುಗಳು ಇರಬೇಕು, ಹೊಟ್ಟೆ ಪಾಡಿಗಾಗಿ ಸಂಘ ಹುಟ್ಟಬಾರದು ಸಮಾಜದ ಪ್ರಗತಿಗಾಗಿ ಎಲ್ಲರು ನಡೆಯಬೇಕಿದೆ. ಸಮಾಜದ ಹೆಸರಿನಲ್ಲಿ ಹತ್ತಾರು ಸಂಘಟನೆಗಳು ಇರಬಾರದು ಎಂದರು.
ಕಾರ್ಯಕ್ರಮದಲ್ಲಿ ರಘುಚಂದನ್ , ರವಿ ಮಾಕಳಿ, ರವಿ ಪೂಜಾರ್, ವಾಣಿಕ್‌ರಾವ್ ಒಡೆಯರ್, ಲಕ್ಷ್ಮಣ್ ಗಾಡಿವಡ್ಡರ್,ಕೊಪ್ಪಳ ಜಿಲ್ಲಾಧ್ಯಕ್ಷ ಸತ್ಯಪ್ಪ, ಕೃಷ್ಣ, ಸಿದ್ದಪ್ಪ, ದೊಡ್ಡ ರಾಮಣ್ಣ, ಮಹೇಶ್, ಕುಮಾರ್, ಉಮಾ ಶಂಕರ್, ರಾಮಾಂಜಿ, ನಾಗಪ್ಪ ಒಡ್ಡರ್, ಎಸ್.ಜೆ.ಎಸ್.ಜ್ಞಾನ ಪೀಠದ ನಿರ್ದೇಶಕ ಮಂಜುನಾಥ್ ಹನುಮಂತಪ್ಪ, ಕೃಷ್ಣಮೂರ್ತಿ, ಆಂಜನೇಯ, ಕಾರ್ಯದರ್ಶಿ ಡಿ.ಸಿ.ಮೋಹನ್, ಸಿಇಓ ಗೋವಿಂದಪ್ಪ, ತಿಪ್ಪೇಸ್ವಾಮಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.