ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನನ್ನ ತಂದೆ ದಿ. ಎಸ್. ಬಂಗಾರಪ್ಪ ಅವರ ಹೆಸರನ್ನು ಮತ್ತು ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ವಿರುದ್ದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನನ್ನ ತಂದೆ ಬಂಹಾರಪ್ಪ ನವರು ಕರ್ನಾಟಕ ಕಂಡ ಧೀಮಂತ ರಾಜಕಾರಣಿ , ಬಡವರ ಬಂಧು ಎಂಬ ಸಾರ್ಥಕ ಬಿರುದಾವಳಿಯನ್ನು ತಮ್ಮ ಹೆಸರಿನೊಡನೆ ನಡೆಸಿಕೊಂಡು ಬದುಕಿದವರು.ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರೆಲ್ಲರಲ್ಲಿಯೂ ಸಮ ಭಾವ, ಸಮಚಿತ್ತದಿಂದ ಬೆರೆತಿದ್ದವರು. ಇವರ ಆಡಳಿತ ವ್ಯೆಖರಿಯು ಅನುಕರಣೀ ಯ ಮಾತ್ರವಲ್ಲದೆ ಆದರ್ಶರೂಪದ್ದಾಗಿತ್ತು. ಅಂತಹವರ ಹೆಸರನ್ನು ದುರ್ಬಳಕೆ ಮಾಡಿಕೊಂಡು, ದ್ವೇಷದ ರಾಜಕಾರಣ ಮಾಡಲು ಹೊರಟಿದ್ದ ಸಚಿವ ಮಧು ಬಂಗಾರಪ್ಪನವರಿಗೆ ಚುನಾವಣೆ ಸರಿಯಾದ ಪಾಠ ಕಲಿಸಿದೆ ಎಂದಿದ್ದಾರೆ.
ಬಂಗಾರಪ್ಪ ಅವರಂತಹ ಒಬ್ಬ ಧಿರೋದ್ದಾತ ನಾಯಕನನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆ ಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ ಮಾತ್ರ. ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ಈಗ ತಕ್ಕ ಶಾಸ್ತಿಯಾಗಿದೆ. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ. ಮೇಲಾಗಿ, ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣ್ಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ ಎಂದು ಟೀಕಿಸಿದ್ದಾರೆ.
ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿ ಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ. ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ ಎಂದು ಸಲಹೆ ನೀಡಿರುವ ಅವರು, ಬಿಜೆಪಿಯ ವಿಜಯೋತ್ಸವದ ಕೊಡುಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದ ಮತದಾರರಿಂದ ಲಭಿಸಿದ್ದು, ಅವರಿಗೆ ನಾವು ಚಿರಋಣಿಗಳಾಗಿರುತ್ತೇವೆ. ಅವರ ಆಶಯಗಳನ್ನು ಸಾಕಾರಗೊಳಿಸುತ್ತೇವೆ ಎಂದಿದ್ದಾರೆ.
ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ. ಅವನ ಭಾವ, ನನ್ನ ತಂಗಿಯ ಗಂಡ ಡಾ. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು. ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು ಎಂದು ಲೇವಡಿ ಮಾಡಿರುವ ಅವರು,
ಸಚಿವ ಮಧು ಬಂಗಾರಪ್ಪ, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.