ಶಿವಮೊಗ್ಗ : ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭದ್ರಾವತಿ ತಾಲೂಕು ಎಮ್ಮೆ ಹಟ್ಟಿ ಗ್ರಾಮದ ಮೃತರ ಕುಟುಂಬವನ್ನು ಶನಿವಾರ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರ ನಿಯೋಗ ಭೇಟಿ ಮಾಡಿ, ಸಾಂತ್ವಾನ ಹೇಳಿತು. ಇದೇ ವೇಳೆ ನೊಂದ ಕುಟುಂಬಕ್ಕೆ 15 ಲಕ್ಷ ರೂ. ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮರೆಯಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಮೇಘರಾಜ್, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಡಿ.ಎಸ್ .ಅರುಣ್, ಮಾಜಿ ಶಾಸಕ ಅಶೋಕ್ ನಾಯ್ಕ್ ಅವರು ನೊಂದ ಕುಟುಂಬದವರಿಗೆ ಸಾಂತ್ವಾನ ಹೇಳಿದ ಬಳಿಕ, ಆರ್ಥಿಕ ನೆರವಿನ ನಗದನ್ನು ಹಸ್ತಾಂತರಿಸಿದರು.
ಭೇಟಿಯ ಬಳಿಕ ಸಂಸದ ಬಿ.ವೈ. ರಾಘವೇಂದ್ರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹಾವೇರಿ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ 13 ಜನ ಅಸುನೀಗಿದ್ದರು. ಅತ್ಯಂತ ದುಃಖದ ಘಟನೆ ಇದಾಗಿತ್ತು. ನೊಂದ ಈ ಕುಟುಂಬಕ್ಕೆ ನಾವು ಈ ಹಿಂದೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೆವು. ಈಗ ನೊಂದ ಕುಟುಂಬಕ್ಕೆ ಪರಿಹಾರ ನೀಡುವ ಮಾನವೀಯ ಕೆಲಸ ಮಾಡಿದ್ದೇವೆ ಎಂದರು.
ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿದ್ದೆವೆ. ಅದರ ಜತೆಗೆ ಬಿಜೆಪಿ ಪಕ್ಷದ ವತಿಯಿಂದ 15 ಲಕ್ಷ ರೂ. ಪರಿಹಾರ ನೀಡಿದ್ದೆವೆ ಎಂದರಲ್ಲದೆ, ನೊಂದ ಕುಟುಂಬಕ್ಕೆ ಎನೇ ಪರಿಹಾರ ಕೊಟ್ಟರೂ, ದುಃಖ ಕಡಿಮೆ ಆಗೋದಿಲ್ಲ. ಆದರೆ ಮಾನವೀಯ ದೃಷ್ಟಿಯಿಂದ ಅವರ ಕಷ್ಟದಲ್ಲಿ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದರು.