ಶಿವಮೊಗ್ಗ: ಬಿಜೆಪಿಯವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ತಮ್ಮ ಪಕ್ಷದ ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸವಾಲು ಹಾಕಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆರೋಪ ಮಾಡಿದ್ದರು. ಅದಕ್ಕೆ ಮಾಜಿ ಸಂಸದರು ಉತ್ತರ ನೀಡಿದ್ದರು. ಅಲ್ಲಿಗೆ ಸುಮ್ಮನಾಗದ ಅವರು ಪುನಃ ಮಾತನಾಡಿದ್ದಾರೆ. ಅವರ ಮಾತುಗಳನ್ನು ಗಮನಿಸಿದರೆ ಜಿಲ್ಲಾಧ್ಯಕ್ಷರ ಅಜ್ಞಾನಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ತುಮರಿ ಸೇತುವೆ ನಿರ್ಮಾಣ ಆಗೇ ಆಗುತ್ತದೆ. ಈ ಬಗ್ಗೆ ಜನತೆಗೆ ಯಾವುದೇ ಆತಂಕ ಬೇಡ ಎಂದ ಅವರು, ೬೦೦-೭೦೦ ಕೋಟಿ ಯೋಜನೆ ರೂಪಿಸಿದಾಗ ಕೆಲ ತಾಂತ್ರಿಕ ಸಂಗತಿಗಳು ಇರುತ್ತವೆ. ಲೋಪಗಳನ್ನು ಈಗ ಸರಿಪಡಿಸಲಾಗಿದೆ. ಸ್ವತಃ ನಿತಿನ್ ಗಡ್ಕರಿ ಅವರೇ ಬಂದಾಗ ಕಾಗೋಡು ತಿಮ್ಮಪ್ಪನವರು ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಸ್ವತಃ ಲೋಕೋಪಯೋಗಿ ಸಚಿವರಾಗಿದ್ದರೂ ಕಾಗೋಡು ಅವರಿಗೆ ಸಾಧ್ಯವಾಗದ ಕೆಲಸವನ್ನು ಗಡ್ಕರಿ ಮಾಡುತ್ತಿದ್ದಾರೆ ಎಂಬ ಭಾವ ಅವರಲ್ಲಿತ್ತು. ಪ್ರಬುದ್ಧ ರಾಜಕಾರಣಿಯಾಗಿ ಕಾಗೋಡು ಅಂದು ಸಂತೋಷ ಪಟ್ಟಿದ್ದರು ಎಂದರು.
ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ತಾವು ಮಾಡಲಿಲ್ಲ, ಅವರ ಪಕ್ಷವೂ ಮಾಡಲಿಲ್ಲ. ಆದರೂ ಬೇರೆಯವರು ಕೆಲಸ ಮಾಡುತ್ತಿದ್ದಾರೆ ಎಂದಾಗ ಅದನ್ನು ಟೀಕಿಸಿ ಬೇಳೆ ಬೇಯಿಸಿಕೊಳ್ಳುವ ಚಾಳಿ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದರಿದ್ದಾಗ ಏನು ಮಾಡಿದರು? ಜೆ.ಹೆಚ್.ಪಟೇಲರು ಕೂಡ ಸಂಸದರಾಗಿದ್ದರು ಎಂಬುದನ್ನು ಮರೆಯಬಾರದು ಎಂದರು.
ಇನ್ನೂ ರಾಜಕೀಯ ಹಸುಳೆ ಆಗಿರುವ ಅವರು ಯಡಿಯೂರಪ್ಪ ಅವರು ತಾಕತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜಿಲ್ಲೆ ಮತ್ತು ರಾಜ್ಯದ ಪ್ರತಿ ವ್ಯಕ್ತಿಗೂ ಯಡಿಯೂರಪ್ಪ ಅವರ ತಾಕತ್ತು ಗೊತ್ತಿದೆ. ಅವರೊಬ್ಬ ಕ್ರಿಯಾಶೀಲ ರಾಜಕಾರಣಿ. ಯಡಿಯೂರಪ್ಪ ಬಗ್ಗೆ ಸರ್ಟಿಫಿಕೇಟ್ ಕಾಗೋಡು ತಿಮ್ಮಪ್ಪ ಅವರ ಮನೆಯಲ್ಲೇ ಇದೆ. ಜಿಲ್ಲೆಯಲ್ಲಿ ಕೆಲಸ ಆಗಬೇಕು ಅಂದ್ರೆ ಬಿಎಸ್‌ವೈ ತರಹದ ಗಂಡಸು ಇರಬೇಕು ಎಂದು ಕಾಗೋಡು ತಿಮ್ಮಪ್ಪ ಅವರೇ ಹೇಳಿದ್ದರು. ಹಾಗಾಗಿ
ತೀ.ನಾ.ಶ್ರೀನಿವಾಸ್ ಕಾಗೋಡು ಮನೆಗೆ ಹೋಗಿ ತಾಕತ್ತಿನ ಬಗ್ಗೆ ತಿಳಿದುಕೊಳ್ಳಲಿ ಎಂದು ಅಣಕವಾಡಿದರು.
ಅವರಿಗೆ ಕೇಳಲು ಬಹಳ ಪ್ರಶ್ನೆ ನಮ್ಮ ಬಳಿಯೂ ಇದೆ. ಅವರ ಪಕ್ಷ ಮಾಡಿರುವ ಸಾಧನೆ ಬಗ್ಗೆ ಪಟ್ಟಿ ಜೊತೆ ಬರಲಿ. ಇಡೀ ಜಿಲ್ಲೆಯಲ್ಲಿ ಕಾಗೋಡು ಸಹಿತ ಶಾಸಕರನ್ನು ಸೋಲಿಸಿದ ಸಾಧನೆ ಮಾಡಿರುವ ಅಧ್ಯಕ್ಷರು ಅವರು. ಅವರ ಅದ್ಭುತ ಶಕ್ತಿಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವೇ ನಾಶವಾಗದಿದ್ದರೆ ಸಾಕು ಎಂಬಂತಾಗಿದೆ. ಇನ್ನು ಚುನಾವಣೆಯಲ್ಲಿ ಜೆಡಿಎಸ್ ಜತೆ ಸೇರಿ ಸೋಲಿಸುತ್ತೇವೆ ಎಂದು ಅವರೇ ಹೇಳಿದ್ದಾರೆ. ಇದರಲ್ಲೇ ಅವರ ಬ್ಯಾಟರಿ ವೀಕ್ ಎಂಬುದು ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಮುಖರಾದ ಬಿ.ಆರ್.ಮಧುಸೂದನ್, ಅನಿತಾ ರವಿಶಂಕರ್, ಬಸವರಾಜಪ್ಪ, ಶಶಿಧರ್, ಅಣ್ಣಪ್ಪ, ರತ್ನಾಕರ ಶೆಣೈ ಇದ್ದರು.