ಶಿವಮೊಗ್ಗ: ನಗರದ ಗಾಂಧಿ ಬಜಾರ್ ನ ರಸ್ತೆ ಬದಿಯಲ್ಲಿ ತಳ್ಳುವ ಗಾಡಿ ಮೇಲೆ ಶೇಂಗಾ-ಜೋಳ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಮೇಲೆ ಟ್ರಾಫಿಕ್ ಪೊಲೀಸರು ಹಲ್ಲೆ ನಡೆಸಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ಅಲ್ಲದೆ, ಈ ಘಟನೆ ಖಂಡಿಸಿ ಸೋಮವಾರ ಗಾಂಧಿಬಜಾರ್‌ನ ವರ್ತಕರು ಪ್ರತಿಭಟನೆ ಮಾಡಿದ ಘಟನೆ ನಡೆಯಿತು. ಒಂದು ಹಂತಕ್ಕೆ ಪ್ರತಿಭಟನಕಾರರು ಎಸ್ಪಿ ಬರಬೇಕೆಂದು ಪಟ್ಟು ಹಿಡಿದ ಕಾರಣಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವರ್ತಕರ ಅಹವಾಲು ಆಲಿಸಿದರು. ಆನಂತರ ಪ್ರತಿಭಟನೆ ವಾಪಾಸ್ ಪಡೆಯಲಾಯಿತು.
ಸೋಮವಾರ ಗಾಂಧಿ ಬಜಾರ್ ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆ ಮೇಲೆ ವ್ಯಾಪಾರ ಮಾಡುತ್ತಿದ್ದ ತಳ್ಳುವ ಗಾಡಿಯವರಿಗೆ ಅವುಗಳನ್ನು ಅಲ್ಲಿಂದ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಈ ವೇಳೆ ತಳ್ಳುವ ಗಾಡಿಯ ವ್ಯಾಪಾರಿಯೊಬ್ಬರು ಅಲ್ಲಿಂದ ಗಾಡಿಯನ್ನು ತೆರವುಗೊಳಿಸುವುದಕ್ಕೆ ಕೊಂಚ ತಡಡವಾಗಿದ್ದಕ್ಕೆ, ಟ್ರಾಫಿಕ್ ಪೊಲೀಸರು ವ್ಯಾಪಾರಿಗೆ ಜೋರು ಮಾಡಿದರು ಎನ್ನಲಾಗಿದೆ. ಈ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಹಂತದಲ್ಲಿ ತಾಳ್ಮೆ ಕಡೆದುಕೊಂಡ ಟ್ರಾಫಿಕ್ ಪೇದೆಯೂ, ಶೇಂಗಾ ಅಳತೆ ಮಾಡಿ ಕೊಡುವ ಸೇರಿನಿಂದ ಗಾಡಿಯ ಮಾಲೀಕನಿಗೆ ಹೊಡೆದರು ಎನ್ನಲಾಗಿದೆ.
ಮಧ್ಯಾಹ್ನದಿಂದಲೂ ಸೂಚನೆ ನೀಡಿದರೂ ಅಂಗಡಿಯವನು ತೆಗೆಯದ ಕಾರಣ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸೇರನ್ನು ಕಿತ್ತುಕೊಳ್ಳುವಾಗ ಅಚನಾಕ್ಕಾಗಿ ಆತನ ತಲೆಗೆ ಹೊಡೆತ ಬಿದ್ದಿದೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ಈ ಘಟನೆಯಿಂದ ಸ್ಥಳೀಯರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ವ್ಯಾಪಾರಿಯನ್ನ ಗಾಯಗೊಳಿಸಿದ ಪೊಲೀಸರ ವಿರುದ್ಧ ಕಾನೂನಿನಂತೆ ದೂರ ದಾಖಲಿಸುವಂತೆ ಪಟ್ಟು ಹಿಡಿದಿದ್ದರು.ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ಬಾಬು ಆಂಜನಪ್ಪ, ದೊಡ್ಡಪೇಟೆ ಪಿಐ ರವಿ ಸಂಗನ ಗೌಡ ಮೊದಲಾದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಸಿಸಿ ಟಿವಿ ಫೂಟೇಜ್ ಇದ್ದು ಘಟನೆ ಪರಿಶೀಲಿಸಿ ಪೋಲಿಸರು ತಪ್ಪಿತಸ್ಥರಾದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸ್ಪಿ ನೀಡಿದರು. ಆ ಬಳಿಕ ಸ್ಥಳೀಯ ವರ್ತಕರು ಪ್ರತಿಭಟನೆ ಹಿಂಪಡೆದರು.
ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳು ತಪ್ಪಿತಸ್ಥ ಟ್ರಾಫಿಕ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಾದರೂ, ಬೀದಿ ಬದಿ ವ್ಯಾಪಾರಿ ಮೇಲೆ ಟ್ರಾಫಿಕ್ ಪೊಲೀಸ್ ನಡೆಸಿದ್ದ ಹಲ್ಲೆಯಿಂದ ಆತ ಗಂಭೀರವಾಗಿ ಗಾಯಗೊಂಡುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಬ್ಬ ಪೊಲೀಸ್ ಸಿಬ್ಬಂದಿ ತಳ್ಳುವ ಗಾಡಿ ತೆರವುಗೊಳಿಸುವ ನೆಪದಲ್ಲಿ ವ್ಯಾಪಾರಿ ಮೇಲೆ ಮಟ್ಟದ ಹಲ್ಲೆ ಮಾಡಿದ್ದೇಕೆ ಎನ್ನುವ ಪ್ರಶ್ನೆ ಅಲ್ಲಿ ವರ್ತಕರದ್ದು. ಈ ಬಗ್ಗೆ ಅಲ್ಲಿನ ವರ್ತಕರೊಬ್ಬರು ತೀವ್ರ ಆಕ್ರೋಶ ಹೊರ ಹಾಕಿದ್ದು, ಇಲ್ಲಿ ಟ್ರಾಫಿಕ್ ನವರು ನೆಪ ಮಾತ್ರಕ್ಕೆ ಕಾನೂನು ಪಾಲನೆ ಮಾಡುವುದಾಗಿ ಹೇಳುತ್ತಾರೆ. ಆದರೆ ಕೆಲವರಿಗೆ ಇಲ್‌ಲಿ ನಿತ್ಯವೂ ನಾವು ಮಾಮೂಲಿ ಕೊಡಲೇಬೇಕು. ಕೊಡಲು ಹೆಚ್ಚು ಕಡಿಮೆ ಆದಾಗ ಈ ರೀತಿ ಅವರು ತಮ್ಮ ಉಗ್ರ ರೂಪ ತೋರಿಸುತ್ತಾರೆ.ಅದೇ ಕಾರಣಕ್ಕೆ ಮೊನ್ನೆಯೂ ಹಾಗೆಯೇ ಆಯಿತು ಎಂದು ದೂರಿದರು.