ಸಾಗರ: ಸೋಮವಾರ ಬೆಳಗ್ಗೆ ಸಾಗರ ಟೌನ್ ಎಳ್ಳಾರೆ ಕ್ರಾಸ್ ನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಷ್ಕರ್ಮಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗೋಪಾಲ ಕೃಷ್ಣ ಟಿ ನಾಯಕ್, ಹಾಗೂ ಸಾಗರ ಪೇಟೆ ಪೊಲೀಸ್ ಠಾಣೆಯ ಸೀತಾರಾಂ ರವರ ಮೇಲ್ವಿಚಾರಣೆಯಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯ , ಪಿ.ಎಸ್.ಐ ನಾಗರಾಜ್ ಟಿ. ಎಂ ನೇತೃತ್ವದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದೆ. ಗಾಂಜಾ ಜೊತೆ ಆರೋಪಿಗಳನ್ನು ಬಂಧಿಸಿದೆ.
ಕಟ್ಟಿನಕಾರು ಗ್ರಾಮದ ರಾಘವೇಂದ್ರ(42), ಹೊಸೂರು ಮರಾಠಿ ಗ್ರಾಮದ ರಮೇಶ(20) ಮತ್ತು ಕದರೂರು ಗ್ರಾಮದ ಪ್ರವೀಣ(26) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಅಂದಾಜು ಮೌಲ್ಯ 23,000 ರೂ.ಗಳ 790 ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.