ಶಿವಮೊಗ್ಗ: ಜೀವನಾಡಿ ನದಿ ತುಂಗಾ ನದಿಯ ಶುದ್ಧೀಕರಣಕ್ಕಾಗಿ ಅಭಿಯಾನ ಆರಂಭಿಸಿರುವ ನಟ ಅನಿರುದ್ದ ಜತ್ಕರ್ ಅವರು ಗುರುವಾರ ಇಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ತುಂಗಾ ನದಿ ಶುದ್ದಿಕರಣಕ್ಕಾಗಿ ಅವರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ನದಿ ಶುದ್ದಿಕರಣಕ್ಕೆ ಮನವಿ ಮಾಡಿಕೊಂಡು ಮನವಿ ಸಲ್ಲಿಸಿದ್ದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನದಿ ಸ್ವಚ್ಚತೆಗೆ ಕ್ರಮ ಕೈಗೊಳ್ಳುವಂತೆ ಕರ್ನಟಕ ನೀರಾವರಿ ನಿಗಮಕ್ಕೆ ಸೂಚನೆ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲೇ ನಟ ಅನಿರುದ್ದ ಜತ್ಕರ್ ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ ಅವರು ಮಾತನಾಡಿ, ಕಲುಷಿತ ನೀರು ನದಿ ಸೇರುವುದನ್ನು ನಿಯಂತ್ರಿಸಲು ಸ್ಥಳೀಯವಾಗಿ ಸಾಧ್ಯವಾಗಬಹುದಾದ ತಂತ್ರಜ್ಞಾನ ಹಾಗೂ ಪರ್ಯಾಯ ಕ್ರಮಗಳನ್ನು ಬಳಸುವುದು ಸೂಕ್ತವಾಗಿದೆ ಎಂದರು.
ನಟ ಅನಿರುದ್ಧ ಜತ್ಕರ್ ಮಾತನಾಡಿ, ನದಿಯ ಮಾಲಿನ್ಯ ನಿಯಂತ್ರಿಸುವುದರ ಜೊತೆಗೆ ನವೆಂಬರ್ ೧ರಂದು ತುಂಗೆಯನ್ನು ಎಲ್ಲರನ್ನು ಒಪ್ಪುವ ಹಾಗೂ ಅಪ್ಪಿಕೊಳ್ಳುವ ಹಾಗೂ ಗಂಗಾರತಿಯಂತೆ ಪ್ರತಿದಿನ ತುಂಗಾರತಿ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟಿಸುವ ಆಶಯ ಹೊಂದಿರುವುದಾಗಿ ತಿಳಿಸಿದ ಅವರು, ಈ ಮಹತ್ವದ ಕಾರ್ಯದಲ್ಲಿ ಜಿಲ್ಲಾಡಳಿತ ಸೇರಿದಂತೆ ಎಲ್ಲರ ಸಹಕಾರ ಬಯಸುವುದಾಗಿ ಅವರು ತಿಳಿಸಿದರು.
ಕೊಳಚೆ ನೀರು ನದಿ ಸೇರುವುದನ್ನು ನಿಯಂತ್ರಿಸುವುದು, ಕಾರ್ಖಾನೆಗಳ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ, ನದಿ ಪಾತ್ರದಲ್ಲಿ ತುಂಬಿರುವ ಕಳೆ ಕಿತ್ತು ನೀರನ್ನು ಶುದ್ಧಗೊಳಿಸುವ ಅತ್ಯಂತ ತುರ್ತು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರತಿಕ್ರಿಯೆ ನೀಡಿ, ಜಿಲ್ಲೆಯ ಜನರ ಜೀವಜಲದ ಮೂಲವಾಗಿರುವ ತುಂಗಾನದಿ ಮಲಿನವಾಗುವುದನ್ನು ನಿಯಂತ್ರಿಸುವಲ್ಲಿ ಸರ್ಕಾರ, ಸರ್ಕಾರೇತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಿದರು.
ನದಿ ನೀರು ಕಲುಷಿತಗೊಳ್ಳುವುದನ್ನು ನಿಯಂತ್ರಿಸಿ, ಜನಸಾಮಾನ್ಯರ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ಪ್ರಮುಖವಾಗಿ ಮಾನವ ಬಳಕೆ ಹಾಗೂ ಕೈಗಾರಿಕೆಗಳ ಬಳಕೆಯಿಂದ ನೀರು ಮಲಿನಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನದಿಗೆ ಮಲಿನ ನೀರು ಸೇರುವ ಸ್ಥಳಗಳನ್ನು ಗುರಿತಿಸಿ, ಅದನ್ನು ಸಂಸ್ಕರಿಸಿ, ಬಳಕೆಗೆ ಯೋಗ್ಯವಾಗುವಂತೆ ಮಾಡಿ, ನದಿಗೆ ಪುನರ್ ಸೇರ್ಪಡೆಗೊಳಿಸುವಂತಾಗಬೇಕು ಎಂದರು.
ತುಂಗಾನದಿಗೆ ಶಿವಮೊಗ್ಗ ನಗರ ಮಾತ್ರವಲ್ಲದೇ ತೀರ್ಥಹಳ್ಳಿ ಪಟ್ಟಣ ಹಾಗೂ ಗ್ರಾಮಾಂತರ ವಸತಿ ಪ್ರದೇಶಗಳ ತ್ಯಾಜ್ಯವೂ ಸೇರಿಕೊಳ್ಳುತ್ತಿದೆ. ಇದರ ನಿಯಂತ್ರಣಕ್ಕಾಗಿ ತೀರ್ಥಹಳ್ಳಿಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಆಯಾ ಗ್ರಾಮಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರ ಪಡೆಯಲಾಗುವುದು ಎಂದರು.
ನದಿಯ ನಿರಂತರ ಉಸ್ತುವಾರಿ ಹಾಗೂ ನಿರ್ವಹಣೆಗಾಗಿ ಸರ್ಕಾರದ ಮಟ್ಟದಲ್ಲಿ ಸಮಿತಿಯನ್ನು ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಪಾಲಿಕೆ ಹಾಗೂ ನದಿ ಪಾತ್ರದ ಪಂಚಾಯಿತಿಗಳ ಹಂತದಲ್ಲಿ ಜನಜಾಗೃತಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.