ಹಾಸನ: ಕೌಟಿಂಬಕ ಕಲಹ ಹಿನ್ನೆಲೆಯಲ್ಲಿ ದೂರು ನೀಡಲು ಬಂದ ಪತ್ನಿಯನ್ನು ಪೊಲೀಸ್ ಪೇದೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಪೊಲೀಸ್ ಪೇದೆ ಲೋಕನಾಥ್ ಕೊಲೆಗೈದ ಆರೋಪಿ. ಮಮತಾ ಮೃತ ದುರ್ದೈವಿ. ಆರೋಪಿಯನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ ಲೋಕನಾಥ್ ಮತ್ತು ಮಮತಾ ಮಧ್ಯೆ 4-5 ದಿನಗಳಿಂದ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಎಸ್‌ಪಿ ಕಚೇರಿಗೆ ಪತ್ನಿ ಮಮತಾ ಬಂದಿದ್ದಾರೆ. ಪತ್ನಿ ಎಸ್ ಪಿ ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಅಕೆಯನ್ನು ಮನಸೋ ಇಚ್ಛೆ ಇರಿದಿದ್ದಾನೆ. ಈ ವೇಳೆ ಮಮತಾರ ಹೊಟ್ಟೆ ಮತ್ತು ಎದೆಗೆ ಇರಿತವಾಗಿದೆ. ಗಂಭೀರವಾಗಿ ಗಾಯಗೊಂಡ ಮಮತಾ ಅವರನ್ನು ಎಸ್ಪಿ ಕಚೇರಿ ಸಮೀಪವಿರುವ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಆಕೆ ಕೊನೆಯುಸಿರೆಳೆದಿದ್ದಾರೆ.
ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದ ಲೋಕನಾಥ್ ನನ್ನು ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಎಸ್ಪಿ ಮಹಮ್ಮದ್ ಸುಜೀತಾ ತಿಳಿಸಿದ್ದಾರೆ.
ಈ ದಂಪತಿ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಮುದ್ದಾದ ಮಕ್ಕಳಿದ್ದಾರೆ.