ಸೊರಬ: ರೈತನೊಬ್ಬ ಕಾಡು ಹಂದಿ ಬೇಟೆಯಾಡಲು ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಹೊಸಬಾಳೆ ವೃತ್ತದ ಮೇಲಿನ ಕಿರುಗುಣಸೆಯಲ್ಲಿ ಇಂದು ನಡೆದಿದೆ.
ಉರುಳಿಗೆ ಸಿಲುಕಿ ಜೋರು ಶಬ್ದದೊಂದಿಗೆ ಒದ್ದಾಡುತ್ತಿದ್ದ ಚಿರತೆಯನ್ನು ನೋಡಿದ ರೈತರೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅರಣ್ಯ ಇಲಾಖೆಯವರು ಅರವಳಿಕೆ ತಜ್ಞರೊಂದಿಗೆ ಆಗಮಿಸಿ ಉರುಳಿಗೆ ಸಿಲುಕಿದ್ದ ಚಿರತೆಗೆ ಚಿಕಿತ್ಸೆ ನೀಡಿ, ಉಪಚರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿರತೆ ಸಾವನ್ನಪ್ಪಿದೆ.
ಮೃತಪಟ್ಟ ಚಿರತೆಗೆ 4 ವರ್ಷ ವಯಸ್ಸಾಗಿತ್ತೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್. ಪರಶುರಾಮ್, ಉಪವಲಯ ಅರಣಯಾಧಿಕಾರಿ ಜಿ. ಪರಶುರಾಮ್, ರಾಮಪ್ಪ, ಗಸ್ತು ಅರಣ್ಯಪಾಲಕ ಹರೀಶ್, ಆನಂದ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.