ಶೀಘ್ರದಲ್ಲೇ ಶಿವಮೊಗ್ಗ-ಚೆನ್ನೈ ರೈಲು ಆರಂಭ
ಶಿವಮೊಗ್ಗ: ಲೋಕಸಭೆಯಲ್ಲಿ ಜಿಲ್ಲೆಯ ಮತದಾರರ ಹೆಸರಿನಲ್ಲಿ ನೂತನ ಲೋಕಸಭಾ ಸದಸ್ಯನಾಗಿ ಪ್ರಮಾಣ ಸ್ವೀಕರಿಸಿದ್ದೇನೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿ ಹಲವು ಯೋಜನೆಗಳ ಕುರಿತು ಕೆಲ ಕೇಂದ್ರ ಸಚಿವರನ್ನು ಭೇಟಿಯಾಗಿದ್ದು, ಕೇಂದ್ರ ಭೂ ಸಾರಿಗೆ ಸಚಿವಾಲಯದಿಂದ ನಮ್ಮ ವಿಭಾಗಕ್ಕೆ 2623 ರೂ. ಕೋಟಿ ಮಂಜೂರು ಆಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು (ಶುಕ್ರವಾರ) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ಕಲ್ಪನೆ ಇರಿಸಿಕೊಂಡು ಮೋದಿ ಪ್ರಧಾನಿಯಾಗಬೇಕೆಂಬ ನಮ್ಮ ಅಸೆ ಈಡೇರಿದೆ. 4ನೇ ಬಾರಿ ಸಂಸದನಾಗಿ ಆಯ್ಕೆಯಾದ ನಾನು ಯಾವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕೆಂದು ನಮ್ಮ ಪಕ್ಷದ ವಲಯದಲ್ಲಿ ಚರ್ಚಿಸಲಾಯಿತು. ಕೊನೆಗೆ ಜಿಲ್ಲೆಯ ಮತದಾರರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದೆ ಎಂದರು.
ಬರಲಿರುವ ಬಜೆಟ್ ಅದಿವೇಶನಕ್ಕೆ ಸಾಕಷ್ಟು ತಯಾರಿ ನಡೆಸಿದ್ದೇನೆ. ವಿಶೇಷವಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ದಿವಂಗತ ಬಿ.ಎಂ.ಭಾನುಪ್ರಸಾದ್ ಅವರ ಅಸೆಯಾಗಿತ್ತು. ಈ ನಿಟ್ಟಿನಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಮೋದಿಯವರ ನೇತೃತ್ವದಲ್ಲಿ ರಾಜ್ಯ ಸರಕಾರದ ಸಹಕಾರದೊಂದಿಗೆ ಕೆಲಸ ನಿರ್ವಹಿಸಲಿದ್ದೇನೆ. ಇದು ದೇಶದ ಟಿಡಿಪಿಗೆ ಕೊಡುಗೆ ನೀಡುವ ವಿಶ್ವಾಸವಿದೆ ಮತ್ತು ಈ ಸಂಬಂಧ ಹಲವಾರು ಸವಾಲುಗಳಿವೆ ಎಂದು ತಿಳಿಸಿದರು.
ಭದ್ರಾವತಿಯ ಬಿಎಂಪಿ ಕಾರ್ಖಾನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರಿಗೆ 20 ಸಾವಿರ ಹೆಕೇರ್ ಭೂಮಿಯ ಗುತ್ತಿಗೆ ಅವಧಿಯನ್ನು ಇನ್ನೂ 40 ವರ್ಷಗಳಿಗೆ ನವೀಕರಿಸುವಂತೆ ಮನವಿ ಮಾಡಿದ್ದೇನೆ. 2020ರಲ್ಲಿಯೇ ರಾಜ್ಯ ಸರಕಾರ ಗುತ್ತಿಗೆ ಅವಧಿಯನ್ನು40 ವರ್ಷಗಳಿಗೆ ವಿಸ್ತರಿಸಿತ್ತು. ಆದರೆ ಇದಕ್ಕೆ ಕೇಂದ್ರ ಪರಿಸರ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಈ ಆಕ್ಷೇಪಣೆಯನ್ನು ಹಿಂಪಡೆದು ಗುತ್ತಿಗೆ ಅವಧಿ ವಿಸ್ತರಿಸಬೇಕೆಂದು ಮನವಿ ಮಾಡಿದ್ದೇನೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಈ ನಿಟ್ಟಿನ ಭಾಗವಾಗಿ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಂಪಿಎಂ ಕಾರ್ಖಾನೆಗೆ ಭೇಟಿ ನೀಡಿರುವುದು ಅದರ ಮುಂದುವರಿಕೆಯ ಬೆಳವಣಿಗೆಯಾಗಿದೆ. ಹಾಗೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನೀತಿ ಆಯೋಗವು ಈ ಎಲ್ಲಾ ಯೋಜನೆಗಳಿಗೆ ಆದ್ಯತೆ ನೀಡಲು ಮನವಿ ಮಾಡಿದ್ದೇನೆ ಎಂದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಸುಮಾರು 15ರಿಂದ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದೇನೆ. ಶಿವಮೊಗ್ಗ-ಚೆನ್ನೈ ನಡುವೆ ಹೊಸ ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ಅದರ ಸಂಚಾರದ ದಿನವನ್ನು ನಿಗದಿಪಡಿಸಲು 3-4 ದಿನದಲ್ಲಿ ಗೊತ್ತಾಗಲಿದೆ. ಇದು ಶಿವಮೊಗ್ಗದಿಂದ ಸಂಜೆ 4ಕ್ಕೆ ಸಂಚಾರ ಆರಂಭಿಸಿ ಬೆಳಗ್ಗೆ 4:45ಕ್ಕೆ ಚೆನ್ನೈ ತಲುಪಲಿದೆ. ಪುನಃ ಅಂದೇ ರಾತ್ರಿ 11:30ಕ್ಕೆ ಅಲ್ಲಿಂದ ಹೊರಟು ಮಾರನೇ ದಿನ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗವನ್ನು ತಲುಪಲಿದೆ. ಇದು ವಾಯ ಬೆಂಗಳೂರು ಸಂಚರಿಸಲಿದೆ. ಸೆಮಿ ಕೋಚ್ ರೈಲು ಆಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯನ್ನು ಕರೆಯಲಾಗಿದೆ. ಶಿವಮೊಗ್ಗ ಮತ್ತು ಬೀರೂರು ನಡುವಿನ 62 ಕಿ.ಮೀ. ಉದ್ದದ ಡಬಲ್ ಲೈನ್ ವಿಸ್ತರಣೆಗೆ 1258 ಕೋಟಿ ರೂ.ಗಳ ಪ್ರಸ್ತಾಪವನ್ನು ಸಲ್ಲಿಸಿದ್ದೇನೆ. ಶಿವಮೊಗ್ಗ-ಮಂಗಳೂರು ಹೊಸ ರೈಲು ಮಾರ್ಗಕ್ಕಾಗಿ ಸರ್ವೆ ನಡೆಸಲಾಗಿದೆ. ಕಡೂರು ಹತ್ತಿರ ಬೈಪಾಸ್ ಮಾಡಿ, ಕಡೂರು-ಚಿಕ್ಕಮಗಳೂರು-ಬೇಲೂರು-ಸಕಲೇಶಪುರದ ಮೂಲಕ ಮಂಗಳೂರು ರೈಲು ಸಂಚಾರಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ಹೆಚ್ಚುವರಿಯಾಗಿ 70 ಕಿ.ಮೀ. ಉದ್ದದ ಮಾರ್ಗವನ್ನು ನಿರ್ಮಿಸಬೇಕಾಗಿದೆ ಎಂದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿಯವರು ರಸ್ತೆಗಳ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗಾಗಿ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಂಬಂಧದ ಪ್ರಕ್ರಿಯೆ ಒಂದು ತಿಂಗಳಲ್ಲಿ ಮುಕ್ತಾಯವಾಗುತ್ತದೆ. 2024-25 ಸಾಲಿಗೆ ಕೇಂದ್ರದಿಂದ ರಾಜ್ಯಕ್ಕೆ 8006 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯದಲ್ಲಿ 8 ವಿಭಾಗಗಳಿದ್ದು ಶಿವಮೊಗ್ಗ ವಿಭಾಗಕ್ಕೆ 2623 ಕೋಟಿ ರೂ. ಬಿಡುಗಡೆಯಾಗಿದೆ. ಬೈಂದೂರು-ಸಾಗರ ನಡುವಿನ ನೂತನ ಹೆದ್ದಾರಿ ನಿರ್ಮಾಣಕ್ಕೆ 920 ಕೋಟಿ ರೂ. ಮೀಸಲಿರಿಸಲಾಗಿದೆ. ಅಗುಂಬೆ ಘಾಟಿಯ ಹಾಲಿ ಇರುವ ರಸ್ತೆಯ ಬಲವರ್ಧನೆಗಾಗಿ 403 ಕೋಟಿ ರೂ. ಮೀಸಲಿಡಲಾಗಿದ್ದು, ಇದು ಇರುವ ರಸ್ತೆಯನ್ನು ಬಲಪಡಿಸಲು ಮತ್ತು ಸ್ವಲ್ಪ ಅಗಲೀಕರಣ ಮಾಡುವುದಾಗಿದೆ. ಚೂರಿಕಟ್ಟೆ-ಸಾಗರ-ಅನಂದಪುರ ಮಾರ್ಗದ ರಸ್ತೆಯ ಅಗಲೀಕರಣಕ್ಕೆ 400 ಕೋಟಿ ರೂ. ತೆಗೆದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಇನ್ನೊಂದು ಯುದ್ದ ಟ್ಯಾಂಕರ್ ಅನ್ನು ಜಿಲ್ಲೆಗೆ ತರಿಸಲು ಮನವಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ರುದ್ರೆಗೌಡ, ಮಾಲತೇಶ, ಮೋಹನ ರೆಡ್ಡಿ, ಎನ್.ಡಿ.ಸತೀಶ್, ರಮೇಶ್ ಮತ್ತು ಉಪೇಂದ್ರ ಉಪಸ್ಥಿತರಿದ್ದರು.