ವಾರಾಣಾಸಿ: 9.26 ಕೋಟಿಗೂ ಹೆಚ್ಚು ರೈತರಿಗೆ ಆರ್ಥಿಕ ಬೆಂಬಲ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತನ್ನು ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದರು.
ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಪ್ರತಿನಿಧಿಸಿದ ಲೋಕಸಭಾ ಕ್ಷೇತ್ರಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.
ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ 20,000 ಕೋಟಿ ರೂ. ಬಿಡುಗಡೆಗೆ ಅವರು ಸಹಿ ಹಾಕಿದ್ದರು.
ಮೋದಿ ಅವರು ಡಿಬಿಟಿ ಮೂಲಕ 9.26 ಕೋಟಿ ರೈತರಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಿದರು.
ಈ ಸಮಾರಂಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.