ಶಿವಮೊಗ್ಗ : ರಾಜ್ಯದಲ್ಲಿ ಖಾಸಗೀ ವೈದ್ಯ ಸಂಸ್ಥೆಗಳ ಪ್ರತಿಬಂಧಕ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ವಿಶೇಷ ಅಧಿವೇಶನ ಕರೆದು ಮಂಡಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಹೇಳಿದರು.
ಇಂದು ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ಆರು ಜಿಲ್ಲೆಗಳ ಡಿಹೆಚ್‌ಓ ಹಾಗೂ ಆರೋಗ್ಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿನ ಖಾಸಗೀ ವೈದ್ಯ ಸಂಸ್ಥೆಗಳ ಪ್ರತಿಬಂಧಕ ತಿದ್ದುಪಡಿಗೆ ಸಂಬಂಧಿಸಿದಂತೆ ರಾಜಣ್ಣ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅವರು ನೀಡಿದ ವರದಿ ಅನು ಸಾರ, ವಿಶೇಷ ಅಧಿವೇಶನದಲ್ಲಿ ತಿದ್ದುಪಡಿ ಮಂಡಿಸಲಾಗುವುದು ಎಂದರು.
ಈ ತಿದ್ದುಪಡಿ ಮಸೂದೆಯಿಂದಾಗಿ ರಾಜ್ಯದ ೧೪೦ ಕೋಟಿ ಕುಟುಂಬಗಳಿಗೆ ಸರ್ಕಾರಿ ಆಸ್ಪತ್ರೆಗಳ ಸೇವೆ ಸಿಗುವಂತಾಗುತ್ತದೆ ಎಂದ ಅವರು, ರಾಜ್ಯದ ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ, ಮುಂದಾಗಿದೆ ಎಂದು ತಿಳಿಸಿದರು.
ಈಗಾಗಲೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರನ್ನು ನಿಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿದೆ. ವೈದ್ಯರ ಕೊರತೆ ಹಾಗೂ ತಜ್ಞ ವೈದ್ಯರ ಕೊರತೆ ಯಾಗದಂತೆಯೂ ಸಹ ಕ್ರಮ ವಹಿಸಿದ್ದು, ತಜ್ಞ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಮೂಲಕ ನಡೆಸಿದ ನೇಮಕಾತಿ ಪ್ರಕ್ರಿಯೆ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಹರಾಜಿನ ಮುಖಾಂತರ ತಜ್ಞ ವೈದ್ಯರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ ಎಂದರು.
ಹರಾಜಿನ ಪ್ರಕ್ರಿಯೆಯಿಂದಾಗಿ ಶೇ. ೩೦ ರಿಂದ ೪೦ ರಷ್ಟು ತಜ್ಞ ವೈದ್ಯರ ನೇಮಕಾತಿ ಆದಂತಾ ಗಿದೆ. ಉಳಿದ ಹುದ್ದೆಗಳಿಗೂ ಸಹ ನೇಮಕಾತಿ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ತಜ್ಞ ವೈದ್ಯರು ಕೂಡಾ ಖಾಸಗಿ ವೈದ್ಯ ಸಂಸ್ಥೆಗಳ ಮುಖ ಮಾಡದೆ, ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಮೂಲಕ ರಾಜ್ಯದ ಜನರ ಸೇವೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕೆಂದರು.
ಜನರಿಕ್ ಮೆಡಿಕಲ್‌ಶಾಪ್‌ಗಳಿಂದಾಗಿ ಶೇ. ೬೦ ರಿಂದ ೮೦ರಷ್ಟು ಕಡಿಮೆ ದರದಲ್ಲಿ ರೋಗಿಗಳಿಗೆ ಔಷಧಿ ಲಭ್ಯವಾಗುತ್ತದೆ. ಈ ಬಗ್ಗೆ ಸರ್ಕಾರಿ ವೈದ್ಯರು ಜನರಿಕ್ ಔಷಧಿ ಮಳಿಗೆಗಳ ಉಪಯೋಗ ಪಡೆದುಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ನಿರ್ದೇಶಕ ನಟರಾಜ್, ಹೆಚ್ಚುವರಿ ನಿರ್ದೇಶಕ ರತ್ನಾಕರ್, ಜಿಲ್ಲಾಧಿಕಾರಿ ಎಂ. ಲೋಕೇಶ್, ಸಿಇಓ ರಾಕೇಶ್‌ಕುಮಾರ್, ಜ್ಯೋತಿ ಎಸ್.ಕುಮಾರ್ ಮೊದಲಾದವರಿದ್ದರು.