ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆ: ಕೆಜಿ ಗಟ್ಟಲೆ ಒಡವೆ, ಕಂತೆ ಕಂತೆ ನಗದು ವಶ
ಶಿವಮೊಗ್ಗ: ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಜಿ.ಎನ್. ಪ್ರಕಾಶ್ ಅವರ ಬೇಜವ್ದಾರಿ ಕರ್ತವ್ಯ ನಿರ್ವಹಣೆಯ ಜತೆಗೆ ಭ್ರಷ್ಟಚಾರದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದರ ನಡುವೆಯೇ ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ನಗರದ ಅವರ ನಿವಾಸ ಸೇರಿದಂತೆ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ಮಾಡಿ, ಭಾರೀ ಪ್ರಮಾಣದ ನಗದು, ಬಂಗಾರದ ಒಡವೆ ಮತ್ತು ನಿವೇಶನಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಜುಲೈ ೧೯ ರಿಂದಲೇ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಪ್ರಕಾಶ್ ಅವರ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ನಡೆಸಿದ್ದರು. ಜುಲೈ 19 ರಂದು ನಡೆದಿದ್ದ ದಾಳಿ ವೇಳೆ ಪ್ರಕಾಶ್ ಅವರಿಗೆ ಸಂಬಂಧಿಸಿದ್ದ 1 ಖಾಲಿ ನಿವೇಶನ, 2 ಮನೆಗಳು, 2.8 ಎಕರೆ ಕೃಷಿ ಜಮೀನಿಗೆ ಸಂಬಂಧಿಸಿದಂತೆ ದಾಖಲೆ ವಶಕ್ಕೆ ಪಡೆದ ವಿಚಾರಣೆ ನಡೆಸಿದ್ದ ವೇಳೆ,
ಸುಮಾರು 1 ಕೋಟಿ 57 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಪ್ರಕಾಶ್ ಅವರು ಅಕ್ರಮವಾಗಿ ಸಂಪಾದನೆ ಮಾಡಿದ್ದು ಕಂಡು ಬಂದಿತ್ತು.
ಅಲ್ಲದೆ, ಅವರ ವಾಸದ ಮನೆಯಲ್ಲಿ ರೂ 38,32,630 ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು, ಅಂದಾಜು 5,20,000 ರೂ. ಮೌಲ್ಯದ ವಾಹನಗಳು, ಹಾಗೆಯೇ ಅಂದಾಜು 11,30,000 ರೂ ಮೌಲ್ಯದ ಗೃಹಪಯೋಗಿ ವಸ್ತುಗಳು ಮತ್ತು ರೂ 12,86,500 ನಗದು ಹಣ ಪತ್ತೆಯಾಗಿದೆ. ತನಿಖೆಯನ್ನು ಮುಂದುವರೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಜುಲೈ ೨೦ ರಂದು ಕೂಡ ಮತ್ತೆ ದಾಳಿ ನಡೆಸಿ ಶೋಧನೆ ನಡೆಸಿದ್ದಾಗ, ಉಪ ನಿರ್ದೇಶಕ ಜಿ.ಎನ್. ಪ್ರಕಾಶ್ ಅವರ ಪತ್ನಿ ಹೆಸರಿನಲ್ಲಿದ್ದ ಬ್ಯಾಂಕ್ ಲಾಕರ್ 32,06,000 ನಗದು ಹಣ ಮತ್ತು ಅಂದಾಜು ರೂ 18,48,200 ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ.
ಲೋಕಾಯುಕ್ತ ಅಧಿಕಾರಿಗಳ ಶೋಧನೆಯ ವೇಳೆ ಪತ್ತೆಯಾದ ಒಟ್ಟು ಆಸ್ತಿ-ಪಾಸ್ತಿಗಳ ದಾಖಲೆಗಳನ್ನು ವಿಚಾರಣೆ ನಡೆಸಿದ ವೇಳೆ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಜಿ.ಎನ್. ಪ್ರಕಾಶ್ ಅವರು ಅಂದಾಜು 2,05,23,330 ರೂ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದು ತನಿಖೆಯಿಂದ ಕಂಡು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪ್ರಕಾಶ್ ಅವರ ಮನೆ ಮತ್ತು ಲಾಕರ್ ನಲ್ಲಿ ಪತ್ತೆಯಾದ ನಗದು ರೂ 44,06,000 ರೂ.ಗಳನ್ನು ತನಿಖೆ ಸಂಬಂಧ ಅಮಾನತ್ತುಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಜಿ.ಎನ್. ಪ್ರಕಾಶ್ ಅವರ ಅಕ್ರಮ ಆಸ್ತಿ ಸಂಪಾದನೆ ವಿರುದ್ದ ಶಿವಮೊಗ್ಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಹೆಚ್. ಮಂಜುನಾಥ್ ಚೌದರಿ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ನಿರೀಕ್ಷಕ ಹೆಚ್.ಎಸ್.ಸುರೇಶ್ ತನಿಖೆಯನ್ನು ಮುಂದುವರೆಸಿದ್ದಾರೆ. ದಾಳಿ ವೇಳೆ, ಶಿವಮೊಗ್ಗ ಹಾಗೂ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.