ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ “ಅಮೃತ ಸರೋವರ” ದಂಡೆಯ ಮೇಲೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬುಧವಾರ ಸಸಿ ನೆಡುವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಎಸ್.ಜೆ.ಸೋಮಶೇಖರ್ ಅವರು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅಮೃತ ಸರೋವರದ ದಂಡೆಯ ಮೇಲೆ ಸಸಿನೆಟ್ಟು, ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಿದರು. ಜೊತೆಗೆ ಪರಿಸರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಪ್ರತಿ ವರ್ಷ ಜೂನ್ 5ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನ ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದರು.
ಮಾನವ ಹಾಗೂ ಇತರೆ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನು ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರ ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರ ಹಾಳು ಮಾಡುತ್ತಿದ್ದಾನೆ ಎಂದು ಬೇಸರಿಸಿದರು.
ಶುದ್ಧ ಜಲ ಪರಿಸರ ವ್ಯವಸ್ಥೆಯ ಜಲಚಕ್ರ ಭೂಮಿ ಫಲವತ್ತತೆ ಕಾಪಾಡುತ್ತದೆ. ಮಾಲಿನ್ಯದ ಮೂಲ ಪತ್ತೆ ಮತ್ತು ಶುದ್ಧ ಜಲ ಪರಿಸರ ವ್ಯವಸ್ಥೆ ನಿರ್ವಹಣೆ ಮಾಡಬೇಕಿದೆ. ಪ್ರತಿಯೊಂದು ಜೀವ ಸಂಕುಲ ತನ್ನ ಅಸ್ತಿತ್ವಕ್ಕಾಗಿ ಪರಿಸರದ ಮೇಲೆ ಅವಲಂಬಿತವಾಗಿದೆ. ಈ ಆಧುನಿಕ ಪ್ರಪಂಚದ ಪರಿಸರ ವಿಪತ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ಸುಸ್ಥಿರ ಜೀವನವನ್ನು ಸಾಗಿಸಿ ಪರಿಸರ ಕಾಪಾಡುವುದನ್ನು ಪ್ರೋತ್ಸಾಹಿಸುವುದು ಈ ದಿನದ ಮಹತ್ವವಾಗಿದೆ. ಹಾಗೆ ಈ ಜಾಗದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಪ್ರಬಂಧ ಸ್ವರ್ಧೆ ಏರ್ಪಡಿಸಿ ಬಹುಮಾನ ನೀಡಿರುವುದು ತುಂಬಾ ಸಂತೋಷವಾಯಿತು. ಇಂದಿನ ಮಕ್ಕಳು ದೇಶಪೇಮ ಮತ್ತು ಪರಿಸರ ಪ್ರೇಮವನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳಬೇಕು ಇದಕ್ಕೆ ಪೋಷಕರು ಶಾಲಾಶಿಕ್ಷಕರುಗಳು ಮತ್ತು ಸಾರ್ವಜನಿಕರು ಪ್ರೋತ್ಸಾಹಿಸಬೇಕೆಂದರು.
ಇದೇ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಬಗ್ಗೆ ಪ್ರಬಂಧ ಸ್ವರ್ದೆಯಲ್ಲಿ ಪ್ರಥಮ ಸ್ಥಾನ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾದ ದೀಕ್ಷೀತ್ ಪ್ರಥಮ ಸ್ಥಾನ, 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮೋಹನ್ ದ್ವಿತೀಯ ಸ್ಥಾನ ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕಿರಣ್ ರವರಿಗೆ ಬಹುಮಾನ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಿ, ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ತಾ.ಪಂ ಇಒ ಅನಂತರಾಜು, ಜಿ.ಪಂ ಎಡಿಪಿಸಿ ಮೋಹನ್ ಕುಮಾರ್, ಸಹಾಯಕ ಉಪ ಸಂರಕ್ಷಣಾಧಿಕಾರಿ ನಾಗೇಂದ್ರನಾಯ್ಕ್, ವಲಯ ಅರಣ್ಯಾಧಿಕಾರಿ ಅಕ್ಷತಾ, ತಾ.ಪಂ ಸಹಾಯಕ ನಿರ್ದೇಶಕ ಎಚ್.ಯರ್ರಿಸ್ವಾಮಿ, ತಾಲ್ಲೂಕು ಐಇಸಿ ಸಂಯೋಜಕ ಸತ್ಯನಾರಾಯಣ, ತಾಂತ್ರಿಕ (ಒಗ್ಗೂಡಿಸುವಿಕೆ) ಸಂಯೋಜಕ ಶಶಿಧರ್, ಪಿಡಿಒ ಶ್ರೀದೇವಿ, ಡಿವೈಆರ್‍ಎಫ್ ವೀರೇಶ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.