ಅ.೨೧ ರಿಂದ ಅಹೋರಾತ್ರಿ ಧರಣಿ, ಸಂಘಟನೆಗಳ ಸಂಯುಕ್ತ ವೇದಿಕೆ ತೀರ್ಮಾನ
ಶಿವಮೊಗ್ಗ : ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಬಗೆಗಿನ ಸರ್ಕಾರಗಳ ನಿರ್ಲಕ್ಷ್ಯದ ಧೋರಣೆಗಳ ವಿರುದ್ದ ಇದೇ ಮೊದಲು ಮಲೆನಾಡಿನಲ್ಲೂ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿದೆ. ಚಕ್ರ, ಸಾವೇಹಕ್ಲು, ಶರಾವತಿ, ಲಿಂಗನಮಕ್ಕಿ ,ತುಂಗಾ ಹಾಗೂ ಭದ್ರಾ ಅಣೆಕಟ್ಟಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರದ ಧೋರಣೆ ವಿರುದ್ದ ಸಿಡಿದೆದ್ದಿರುವ ಮಲೆನಾಡಿನ ವಿವಿಧ ಸಂಘಟನೆಗಳು ಬುಧವಾರ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಲೆನಾಡು ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟಿವೆ.
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮುಳುಗಡೆ ಸಂತ್ರಸ್ತರ ಬೇಡಿಕೆಗಳನ್ನು ನವೆಂಬರ್ ೧ ರೊಳಗೆ ಈಡೇರಿಸಲು ಮುಂದಾಗಿದ್ದರೆ ಕನ್ನಡ ರಾಜ್ಯೋತ್ಸವದಿಂದಲೇ ಶಿವಮೊಗ್ಗ, ಉತ್ತರ ಕನ್ನಡ, ಕೊಡಗು , ಬೆಳಗಾವಿ ಸೇರಿದಂತೆ ಮಲೆನಾಡು ವ್ಯಾಪ್ತಿಯ ೧೨ ಜಿಲ್ಲೆಗಳನ್ನೊಳಗೊಂಡಂತೆ ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆ ಮುಂದಿಟ್ಟು ಹೋರಾಟ ಆರಂಭಿಸುವುದಾಗಿ ರೈತ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಡಾ.ಹೆಚ್.ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ, ಜಿಲ್ಲಾ ವಂಚಿತರ ಭೂಹಕ್ಕು ವಂಚಿತರು, ಮುಳುಗಡೆ ಸಂತ್ರಸ್ತರ ಪರ ಹೋರಾಡುತ್ತಿರುವ ಸಂಘಟನೆಗಳೆಲ್ಲ ಸೇರಿ ಸಂಯುಕ್ತವಾಗಿ ರಚಿಸಿಕೊಂಡಿರುವ ವಿವಿಧ ಸಂಘಟನೆಗಳ ವೇದಿಕೆಯೂ ಹಲವು ಬೇಡಿಕೆ ಇಟ್ಟುಕೊಂಡು ಅ.21ರಂದು ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಬೃಹತ್ ಅನಿರ್ದಿಷ್ಟ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.
ಪ್ರತ್ಯೇಕ ರಾಜ್ಯದ ಬೇಡಿಕೆಯ ಹಿಂದಿನ ಕಾರಣ ಮತ್ತು ವೇದಿಕೆಯ ಮುಂದಿನ ಹೋರಾಟದ ರೂಪುರೇಷೆ ಕುರಿತು ಇಂದು ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಅವರು ಮಾಹಿತಿ ನೀಡಿದರು. ಮುಳುಗಡೆ ಸಂತ್ರಸ್ಥರ ಬಗೆಗಿನ ಸರ್ಕಾರದ ಧೋರಣೆಗಳು ತೀರಾ ಬೇಸರ ತರಿಸಿವೆ. ಬೆಳಕು ಕೊಟ್ಟವರನ್ನು ನಿರಂತರವಾಗಿ ಕತ್ತಲಲ್ಲಿ ಇಡಲಾಗಿದೆ. ಇಲ್ಲಿನಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ – ರಾಜ್ಯ ಸರ್ಕಾರಗಳು ಎಂದಿಗೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ಹಕ್ಕುಪತ್ರಗಳನ್ನು ವಜಾ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವ ಆದೇಶ ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಲ್ಲಂದೂರು ಗ್ರಾಮದ ಹಕ್ಕುಪತ್ರ ನೀಡದಂತೆ ಸೂಚನೆ ಮಾಡಲಾಗಿದೆ. ಇದನ್ನ ವಜಾಗೊಳಿಸಿ 80 ಸಾವಿರ ಅರ್ಜಿಯನ್ನ ಪುನರ್ ಪರಿಶೀಲಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅ.21ರಂದು ಸಾಗರ ಉಪವಿಭಾಗಾಧಿಕಾರಿ ಕಚೇರಿ ಎದುರು ಬೃಹತ್ ಅನಿರ್ದಿಷ್ಟ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಅರಣ್ಯ ಭೂಮಿ ಸಾಗುವಳಿದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ 10 ಆದೇಶವಿದ್ದು ಅದನ್ನ ಸಮರ್ಪಕವಾಗಿ ಜಾರಿಗೊಳಿಸಿ ರೈತರಿಗೆ ಹಕ್ಕುಪತ್ರ ನೀಡಬೇಕು. ಕುಂಚೇನಹಳ್ಳಿ, ಹಾಲ ಲಕ್ಕವಳ್ಳಿ, ಲಕ್ಕಿನಕೊಪ್ಪ ಮತ್ತು ಭದ್ರಾವತಿ ತಾಲೂಕಿನ ದುಲ್ಲಿಶೇನಹಳ್ಳಿಯಲ್ಲಿ 30 ರಿಂದ 50 ವರ್ಷಗಳ ಹಿಂದೆಯೇ ನೀಡಿದ ಸಾವಿರಾರು ಹಕ್ಕುಪತ್ರಗಳ ವಜಾ ಮಾಡು ನೋಟೀಸ್ ನೀಡಿದೆ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಹೋರಾಟಕ್ಕೆ ಬೆಂಬಲಿಸಿರುವ ಸಾಮಾಜಿಕ ಸೇವಾ ಕಾರ್ಯಕರ್ತ ವಿಜಿ ಶ್ರೀಕರ್ ಮಾತನಾಡಿ, ಸಾಗರ ತಾಲೂಕು, ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಹಾಗೂ ನಗರ ಹೋಬಳಿಯಲ್ಲಿ 15 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕೆಪಿಸಿ ಭೂಮಿಯಲ್ಲಿ ಮನೆಕಟ್ಟಲು ವಾಸಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಈ ಎಲ್ಲಾ ಜಮೀನನ್ನು ರೈತರಿಗೆ ವಾಪಾಸ್ ನೀಡಲು ಆದೇಶಿಸಿದ್ದರು. ಇದನ್ನು ತಕ್ಷಣ ರೈತರಿಗೆ ವಾಪಾಸ್ ನೀಡಬೇಕು ಹಾಗೂ 14 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ವೇಳೆ ಬೇಡಿಕೆ ಈಡೇರದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು 9 ರೈತರ ಸಂಘಟನೆಗಳು ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಿವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತ ಸಂಘಟನೆ ಮುಖಂಡದಿನೇಶ್ ಶಿರವಾಳ ಮಾತನಾಡಿ, ಅ. ೨೧ ರಂದು ಸಾಗರದ ಪಟ್ಟಣ ಗಣಪತಿ ದೇವಸ್ಥಾನದಿಂದ ಕಾಲ್ನಡಿಗೆ ಮೆರವಣಿಗೆ ಮೂಲ ಧರಣಿ ಸ್ಥಳಕ್ಕೆ ತೆರಳಲಿದ್ದೇವೆ. ಈ ಸಭೆಗೆ ಗಣ್ಯಾತಿಗಣ್ಯರೂ, ರಾಜ್ಯ ಮಟ್ಟದ ಹೋರಾಟಗಾರರು, ವಿವಿಧ ಮಠಪತಿಗಳು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದರು. ಸುದ್ದಿ ಗೋಷ್ಟಿ ಯಲ್ಲಿ
ರೈತ ಮುಖಂಡರಾದ ಶಿವಾನಂದ ಕುಗ್ವೆ, ಮಂಜುನಾಥ್, ಹೆಚ್. ಎಂ. ರಾಘವೇಂದ್ರ, ಹೆಚ್. ಕೆ.ಸ್ವಾಮಿ, ರಾಜೇಶ್ ಶೆಟ್ಟಿ. ಆರ್ಮುಗಂ ದಂಡಪಾಣಿ ಇನ್ನಿತರರು ಹಾಜರಿದ್ದರು.