ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಸತತ 25 ವರ್ಷಗಳ ಬಳಿಕ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಕಳೆದ 25 ವರ್ಷಗಳ ನಂತರ ಸುಶಿಕ್ಷಿತ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವ ಹಂಬಲವಿರುವ ವ್ಯಕ್ತಿಯನ್ನು ದಾವಣಗೆರೆ ಜನತೆ ಆಯ್ಕೆ ಮಾಡಿದ್ದು, ಇನ್ಮುಂದೆ ಕ್ಷೇತ್ರದಲ್ಲಿ ಅಭಿವೃದ್ಧಿಗಳು ನಾಗಾಲೋಟದಲ್ಲಿ ನಡೆಯಲಿವೆ ಎಂದು ಹೇಳಿದರು.
ತ್ರಿಬಲ್ ಇಂಜಿನ್ ಸರ್ಕಾರ ಈಗ ದಾವಣಗೆರೆಯಲ್ಲಿ ರಚನೆಯಾಗಿದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜತೆಗೆ ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸದೆಯಾಗಿ ಆಯ್ಕೆಯಾಗಿದ್ದು, ಈ ಮೂರು ಶಕ್ತಿಗಳು ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿವೆ ಎಂದು ಭವಿಷ್ಯ ನುಡಿದರು.
ನಮ್ಮ ನೂತನ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸುಶಿಕ್ಷಿತರಾಗಿದ್ದು, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಅವಶ್ಯವಿರುವ ಐಟಿ, ಬಿಟಿ ಮತ್ತು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳನ್ನು ಹೋರಾಟ ಮಾಡಿ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಬಹಳಷ್ಟು ಹಿನ್ನಡೆಯಾಗಿದೆ. ಅವರೀಗ ಅತಂತ್ರ ಸ್ಥಿತಿಯಲ್ಲಿ ಸರ್ಕಾರ ರಚನೆ ಮಾಡುತ್ತಿದ್ದಾರೆ. ನಿತೀಶ್‍ಕುಮಾರ್, ಚಂದ್ರಬಾಬು ನಾಯ್ಡು ಅವರ ಸಂಯುಕ್ತದಲ್ಲಿ ಸರ್ಕಾರ ತರಲು ಹೊರಟಿದ್ದು, ಇವರೆಲ್ಲ ಮೋದಿ ಯೋಜನೆಗಳಿಗೆ
ಅಡ್ಡಗಾಲು ಹಾಕುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದೊಂದು ಸ್ಥಿತರತೆಯಿಲ್ಲದ ದುರ್ಬಲ ಸರ್ಕಾರವಾಗಲಿದೆ ಎಂದು ಭವಿಷ್ಯ ನುಡಿದರು.
ಪಾಲಿಕೆ ಸದಸ್ಯ ಅಬ್ಧುಲ್ ಲತೀಫ್ ಮಾತನಾಡಿ, ಬಿಜೆಪಿಯವರು ಗೆದ್ದು ಬೀಗುತ್ತೇವೆ ಎಂದು ಕನಸು ಕಂಡಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅವರ ಕನಸನ್ನು ನುಚ್ಚುನೂರು ಮಾಡಿ, ಮೋದಿ ಹವಾ ಎಲ್ಲಿಯೂ ಇಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಕಳೆದ 25 ವರ್ಷಗಳಿಂದ ಕೇಂದ್ರದ
ಅನುದಾನದಲ್ಲಿ ಅಭಿವೃದ್ಧಿಯನ್ನು ಕಾಣದ ದಾವಣಗೆರೆ ಕ್ಷೇತ್ರಕ್ಕೆ ಪ್ರಭಾ ಮಲ್ಲಿಕಾರ್ಜುನ್ ಅನುದಾನ ತಂದು ಅಭಿವೃದ್ಧಿಗೊಳಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಸಂಭ್ರಮಾಚರಣೆಯಲ್ಲಿ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಸದಸ್ಯರಾದ ಕೆ. ಚಮನ್‍ಸಾಬ್, ಸವಿತಾ ಹುಲ್ಲುಮನೆ, ಮುಖಂಡರಾದ ಹುಲ್ಲುಮನಿ ಗಣೇಶ್, ನರೇಂದ್ರಕುಮಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.