ಇಲಾಖೆಗಳಿಗೆ ಚುರುಕು ಮುಟ್ಟಿಸುತ್ತಿರುವ ಜಿಲ್ಲಾಧಿಕಾರಿ

ಶಿವಮೊಗ್ಗ : ಜಿಲ್ಲೆಯ ಆಡಳಿತವನ್ನು ಚುರುಕುಗೊಳಿಸುವ ಮತ್ತು ಬಡಿದೆಬ್ಬಿಸುವ ಕಾರ್ಯವನ್ನು ಜಿಲ್ಲೆಯ ಜಿಲ್ಲಾಧಿಕಾರಿ ಡಾ|| ಎಂ.ಲೋಕೇಶ್ ಆರಂಭಿಸಿದ್ದಾರೆ.
ಜಿಲ್ಲೆಯ ಎಲ್ಲಾ ಇಲಾಖೆಗಳ ಮೂಲಕ ಸರ್ಕಾರ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗಾಗಿ ರೂಪಿಸುತ್ತದೆ. ಆದರೆ ಅದನ್ನು ಶ್ರೀ ಸಾಮಾನ್ಯನಿಗೆ ತಲುಪಿಸುವ ಕೆಲಸ ಆಯಾ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ. ಇಲಾಖಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಜಡ್ಡು ಹಿಡಿದ ರೀತಿಯಲ್ಲಿ ವರ್ತಿಸುತ್ತಿದ್ದು, ಇದರಿಂದಾಗಿಯೇ ಅನೇಕ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ.
ಜಡ್ಡು ಹಿಡಿದಿರುವ ವ್ಯವಸ್ಥೆಯನ್ನು ಸರಿ ದಾರಿಗೆ ತರಬೇಕಾದರೆ ಜಿಲ್ಲೆಯ ದೊರೆ ಎನಿಸಿಕೊಂಡವರು ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಎಚ್ಚರಿಸುವಂತಹ ಕಾರ್ಯ ಮಾಡಬೇಕಾಗುತ್ತದೆ. ಅಂತಹ ಕಾರ್ಯವನ್ನು ಈಗಿನ ಜಿಲ್ಲಾಧಿಕಾರಿ ಡಾ|| ಎಂ.ಲೋಕೇಶ್ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ಅದು ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ತಲುಪತ್ತಿಲ್ಲ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಆರೋಪ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅನಿರೀಕ್ಷಿತವಾಗಿ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಲೋಪ ದೋಷಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸರಿದಾರಿಗೆ ತರುವ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಲ್ಲಿ ಮುಂದಾಗಿದ್ದಾರೆ.
ಗ್ರಾ.ಪಂ.ಗಳಿಗೆ, ಸರ್ಕಾರಿ ಆಸ್ಪತ್ರೆಗಳಿಗೆ, ವಿವಿಧ ಇಲಾಖೆ ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡುವ ಮೂಲಕ ಇಲಾಖಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಚುರುಕು ಮುಟ್ಟಿಸುವ ಕಾರ್ಯವನ್ನು ಅತ್ಯಂತ ಚಾಣಾ ಕ್ಷತನದಿಂದ ಮಾಡುತ್ತಿದ್ದು, ಇದರಿಂದಾಗಿ ಇಡೀ ಜಿಲ್ಲೆಯಲ್ಲಿನ ಎಲ್ಲಾ ಇಲಾಖೆಗಳ ಹಾಗೂ ಸಿಬ್ಬಂದಿ ವರ್ಗ ದವರು ಪ್ರತಿನಿತ್ಯವೂ ಕೂಡಾ ಜಾಗ್ರತೆಯಿಂದ ಕೆಲಸ ಮಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಬಹುದು.
ತಮ್ಮ ದೈನಂದಿನ ಕಛೇರಿ ಕೆಲಸದ ನಡುವೆಯೂ ಕೂಡಾ ಅನಿರೀಕ್ಷಿತ ಭೇಟಿಯನ್ನು ವಾರದಲ್ಲಿ ೪ ರಿಂದ ೫ ಬಾರಿ ಮಾಡುತ್ತಿದ್ದಾರೆ. ಅಲ್ಲದೆ, ಕೆರೆಗಳ ಒತ್ತುವರಿ, ಜಿಲ್ಲೆಯ ವಿವಿಧೆಡೆ ಕೇಳಿಬರುತ್ತಿರುವ ಸಮಸ್ಯೆಗಳ ಕಡೆ ಹೆಚ್ಚಿನ ಗಮನ ನೀಡುವುದರ ಜೊತೆಗೆ ಜನಸಾಮಾನ್ಯ ರಿಂದ ಬರುವಂತಹ ಅಹವಾಲುಗಳನ್ನೂ ಆಲಿಸುವ ಮೂಲಕ ಅದಕ್ಕೆ ಪರಿಹಾರ ಕೂಡಾ ಸೂಚಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಸರ್ಕಾರದ ಯೋಜನೆಗಳು ಮತ್ತು ಆಡಳಿತ ಜನರಿಗೆ ತಲುಪಬೇಕಾದರೆ ಜಿಲ್ಲಾಡಳಿತ ಅತೀ ಅವಶ್ಯಕವಾ ಗಿರುತ್ತದೆ. ಅಲ್ಲದೆ, ಇದು ಅತ್ಯಂತ ಚಟುವಟಿಕೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳು ಹಾಗೂ ಆಡಳಿತ ತಲುಪಲು ಸಾಧ್ಯವಾಗುತ್ತದೆ. ಇದನ್ನು ಈಗಿನ ಜಿಲ್ಲಾಧಿಕಾರಿಗಳು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿಯ ನಡು ವೆಯೂ ಕೂಡಾ ಇಲಾಖೆಯಲ್ಲಿನ ಸಿಬ್ಬಂದಿ ವರ್ಗದವರು ಇನ್ನೂ ಕೂಡಾ ಜಾಗ್ರತೆಗೊಂಡವರಂತೆ ಕಾಣುತ್ತಿಲ್ಲ. ಶಿವಮೊಗ್ಗ ನಗರದ ಹಲವು ಇಲಾಖೆಯಲ್ಲೂ ಕೂಡಾ ಕಛೇರಿ ಕೆಲಸಗಳು ನಿಗಧಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಂತಹ ಇಲಾಖೆ ಗಳನ್ನು ಗುರುತಿಸಿ, ಅಲ್ಲಿನ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗಕ್ಕೆ ಚುರುಕು ಮುಟ್ಟಿಸುವಂತಹ ಕಾರ್ಯಕ್ಕೆ ಜಿಲ್ಲಾಧಿಕಾರಿಗಳು ಮಾಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ತಹಶೀಲ್ದಾರ್‌ಗಳು, ತಾ.ಪಂ. ಇಓಗಳ ಸಭೆಯಲ್ಲಿ ನೀವು ಇದುವರೆಗೂ ಎಷ್ಟು ಹಾಸ್ಟೆಲ್‌ಗಳಿಗೆ, ಸರ್ಕಾರಿ ಶಾಲೆಗಳಿಗೆ, ಆಸ್ಪತ್ರೆಗಳಿಗೆ ಇತರೇ ಇಲಾಖೆಗಳಿಗೆ ಭೇಟಿ ನೀಡಿದ್ದೀರಿ ? ಅಲ್ಲಿನ ಪ್ರಗತಿ ಏನು? ಎಂಬ ಮಾಹಿತಿ ಇದೆಯೇ ಎಂದು ತರಾಟೆಗೆ ತೆಗೆದುಕೊಂಡ ಘಟನೆಯೂ ಕೂಡಾ ಇತ್ತೀಚಿನ ಸಭೆಗಳಲ್ಲಿ ನಡೆದಿದೆ. ನಿಮ್ಮ ವ್ಯಾಪ್ತಿಯಲ್ಲಿನ ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಅದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ನ್ಯೂನ್ಯತೆ ಇದ್ದರೆ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡಬೇಕೆಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆನ್ನಲಾಗಿದೆ.
ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ನಿಂತಿದ್ದ ಖಾಸಗಿ ಅಂಬ್ಯುಲೆನ್ಸ್‌ಗಳನ್ನು ಜಪ್ತಿ ಮಾಡುವ ಮೂಲಕ ದಿಟ್ಟ ಕ್ರಮವನ್ನು ಕೈಗೊಂಡಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ರೀತಿಯಾಗಬಾರದು ಎಂಬ ಎಚ್ಚರಿಕೆ ಕೂಡಾ ಮೆಗ್ಗಾನ್‌ನ ವೈದ್ಯರಿಗೆ ಸೂಚನೆ ನೀಡಿದ್ದಾರೆ.
ಒಟ್ಟಾರೆ ಈಗಿನ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತಕ್ಕೆ ಕಾಯಕಲ್ಪ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯ ಆಡಳಿತವನ್ನು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ತಮ್ಮ ಅಧೀನದಲ್ಲಿರುವ ಅಧಿಕಾರಿಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಕಾರ್ಯ ಮಾಡಲಿ ಎಂಬ ಆಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

                                                                                                    -ಜಿ.ಸಿ.ಸೋಮಶೇಖರ್

LEAVE A REPLY

Please enter your comment!
Please enter your name here