ಬೆಂಗಳೂರು/ ಶಿವಮೊಗ್ಗ : ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಭಾರತೀಯ ಹವಾಮಾನ ಇಲಾಖೆ ನಾಳೆ( ಜುಲೈ ೧೮) ವರೆಗೂ ‘ರೆಡ್ ಅಲರ್ಟ್’ ವಿಸ್ತರಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಬುಧವಾರವೂ ಮುಂದುವರೆದಿದ್ದು, ಜಿಲ್ಲೆಯಾಧ್ಯಂತ ಭಾರೀ ಮಳೆ ಸುರಿದಿದೆ.
ಹವಾಮಾನ ಇಲಾಖೆ ಪ್ರಕಾರ ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಆಗುಂಬೆಯಲ್ಲಿ ಅತಿ ಹೆಚ್ಚು 210 ಮಿ.ಮೀ. ಮಳೆಯಾಗಿದೆ. ಬಹುತೇಕ ಕಡೆಗಳಲ್ಲಿ ಜಲಾವೃತ್ತ ಸೃಷ್ಟಿಯಾಗಿದೆ.
ಇನ್ನೂ ದಕ್ಷಿಣ ಒಳನಾಡಿನಲ್ಲಿ ಮಳೆಯ ತೀವ್ರತೆ ಕಡಿಮೆಯಾದ ಕಾರಣ ಈ ಪ್ರದೇಶಕ್ಕೆ ಘೋಷಿಸಲಾಗಿದ್ದ ”ರೆಡ್ ಅಲರ್ಟ್’ ಹಿಂತೆಗೆದುಕೊಂಡಿದ್ದು, ಜುಲೈ 20 ರವರೆಗೆ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 19 ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ.
ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾರವಾರ ತಾಲೂಕಿನಲ್ಲಿ ಆರು, ಕುಮಟಾ ತಾಲೂಕಿನಲ್ಲಿ 6, ಹೊನ್ನಾವರ ತಾಲೂಕಿನಲ್ಲಿ 14 ಸೇರಿದಂತೆ 26 ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದ್ದು, 2,368 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕಾರವಾರ ತಾಲೂಕಿನಲ್ಲಿ ಮನೆ ಕುಸಿದು ಮೂರು ಮನೆಗಳು ಸಂಪೂರ್ಣ ಹಾನಿಯಾಗಿವೆ. ಒಂದು ಮನೆ ತೀವ್ರ ಹಾಗೂ 18 ಭಾಗಶಃ ಹಾನಿಯಾಗಿದ್ದು, ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಜಿಲ್ಲಾಡಳಿತದ ತುರ್ತು ಸಹಾಯವಾಣಿ ಸಂಖ್ಯೆ 1077 ಹಾಗೂ ವಾಟ್ಸಾಪ್ ಸಂಖ್ಯೆ 94835 11015 ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಶೃಂಗೇರಿ ದೇವಸ್ಥಾನಕ್ಕೆ ಹೋಗುವ ರಸ್ತೆಗಳು ಜಲಾವೃತವಾಗಿದ್ದು, ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ.