ಕಾಂಗ್ರೆಸ್ ಜಾತಿ-ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ : ಬಿ.ಎಲ್.ಸಂತೋಷ್

ಶಿವಮೊಗ್ಗ : ಜಾತಿ, ನೀರು, ಧರ್ಮದ ಹೆಸರಿನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಇತಿಹಾಸವೇ ಅಂತಹುದಾಗಿದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದು ವರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ಜಿಲ್ಲಾ ಬಿಜೆಪಿ ವತಿಯಿಂದ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ಶಕ್ತಿ ಕೇಂದ್ರದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಜನತೆ ದಡ್ಡರಲ್ಲ. ಹಿಂದಿನ ಬಿಜೆಪಿ ಸರ್ಕಾ ರದಲ್ಲಿನ ಮೂವರು ಮುಖ್ಯಮಂತ್ರಿಗಳು ಜನತೆಗೆ ನೀಡಿದ ಕೊಡುಗೆಯನ್ನು ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ಸ್ಮರಿಸಲಾಗುತ್ತಿದೆ. ೫ ವರ್ಷಗಳ ನಂತರವೂ ಅದರ ನೆನಪಿದೆ ಎಂದರೆ ಸರ್ಕಾರ ಎಂತಹ ಕೆಲಸ ಮಾಡಿತ್ತು ಎಂದು ಅರಿತುಕೊಳ್ಳಬಹುದು. ಅದಕ್ಕಾಗಿಯೇ ಪುನಃ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶ ಹೊಸ ದಾರಿಯಲ್ಲಿದೆ. ಕರ್ನಾಟಕ ಕೂಡ ಆ ದಾರಿಯಲ್ಲಿ ಸೇರ್ಪಡೆ ಆಗಬೇಕು. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕು ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಏನೇ ಮಾಡಲು ಹೊರಟರೂ ಅದನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಅನುಸರಣೆ ಮಾಡಲು ಹೊರಡುತ್ತಿವೆ. ಮನೆ ಮನೆಗೆ ಕಾಂಗ್ರೆಸ್, ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.
ನಮ್ಮ ಪರಿವರ್ತನ ಯಾತ್ರೆ ಸತತ ೮೩ ದಿನಗಳ ಕಾಲ ಸಂಚರಿಸಿ ಸಮಾಪ್ತಿಗೊಂಡಿದೆ. ಆದರೆ ಕಾಂಗ್ರೆಸ್‌ನಲ್ಲಿ ಗೆದ್ದ ಶಾಸಕರು ಇರುವಲ್ಲಿ ಮುಖ್ಯಮಂತ್ರಿ ಯಾತ್ರೆ, ಸೋತ ಶಾಸಕರು ಇರುವಲ್ಲಿ ಕೆಪಿಸಿಸಿ ಅಧ್ಯಕ್ಷರ ಯಾತ್ರೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಯಾತ್ರೆ ೨೭-೧೮ ಕಡೆ ಸುತ್ತಾಡಿ ನಿಂತಿದೆ. ಯಾತ್ರೆ ಮುಂದುವರಿಯದಂತೆ ನೋಡಿಕೊಳ್ಳುವ ಜನ ಕೂಡ ಕಾಂಗ್ರೆಸ್‌ನಲ್ಲೇ ಇರುವುದರಿಂದ ಅದು ನಿಂತಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ರುದ್ರೇಗೌಡ ಮಾತನಾಡಿ, ಶಕ್ತಿ ಕೇಂದ್ರದ ಸ್ವರೂಪವನ್ನೇ ಈಗ ಬದಲಾಯಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖರನ್ನು ಗುರುತಿಸಿ ಜವಾಬ್ದಾರಿ ನೀಡಲಾಗಿದೆ. ಈ ಬಾರಿಯ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳುವ ಹಾಗಿಲ್ಲ. ರಾಜ್ಯದಲ್ಲಿ ಅವರದೇ ಸರ್ಕಾರವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಮಾವೇಶಗಳಲ್ಲಿ ಸುಳ್ಳು ಹೇಳುವ ಮೂಲಕ ಮುಗ್ಧ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಕೇರಳ ರಾಜ್ಯದ ಎಸ್‌ಸಿ ಮೋರ್ಚಾ ಅಧ್ಯಕ್ಷ ಸುಧೀರ್, ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಶಾಸಕ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಆರ್.ಕೆ.ಸಿದ್ದರಾಮಣ್ಣ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಗಜಾನನರಾವ್, ಗಿರೀಶ್ ಪಟೇಲ್, ದತ್ತಾತ್ರಿ, ಡಿ.ಎಸ್.ಅರುಣ್, ಗುರುಮೂರ್ತಿ, ಚೆನ್ನಬಸಪ್ಪ, ಮೇಘರಾಜ್ ಇನ್ನಿತರರು ಹಾಜರಿದ್ದರು.

SHARE
Previous article27 JANUARY 2018
Next article30 JAN 2018

LEAVE A REPLY

Please enter your comment!
Please enter your name here