ವಿಶ್ವಮಾನ್ಯರಾದ ‘ಸುಕೃಷಿ’ಕ ಎಚ್.ಆರ್. ಜಯರಾಮ್

ಲೇಖನ: ಸೌಮ್ಯ ಗಿರೀಶ್

ಎಲ್ಲೆಡೆ ಬರ, ಭೀಕರತೆ, ಅಂತರ್ಜಲ ಮಟ್ಟದ ಕುಸಿತ, ಭೂಮಿ ಫಲವತ್ತತೆ ಕಳೆದುಕೊಂಡ ಮಾತುಗಳನ್ನೇ ಕೇಳಿ ಬೇಸತ್ತಿರುವ ಕಿವಿಗಳಿಗೆ ತಂಪೆರೆಯುವ ಹಲವು ವಿಷಯಗಳು ಮತ್ತು ಆಶ್ಚರ್ಯ ಮೂಡಿಸುವ ಕೃಷಿ ವಿಧಾನ, ಸಾವಯವ ಕೃಷಿಗೊಂದು ಹೊಸ ಆಯಾಮ ಮತ್ತು ಅದರಿಂದಲೇ ರೂಪುಗೊಂಡ ಹೊಸ ದೊಂದು ಉದ್ಯಮದ ಬಗೆಗಿಷ್ಟು ಮಾಹಿತಿ ಇಲ್ಲಿದೆ. ಇದೆಲ್ಲದರ ರೂವಾರಿ ಎಚ್.ಆರ್. ಜಯರಾಮ್‌ರವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಕೃಷಿಯಿಂದಲೇ ಮನ್ನಣೆ ಪಡೆದಿದ್ದಾರೆ. ಎಲ್ಲರೂ ನಿಬ್ಬೆರಗಾಗುವಂತೆ ಮಾಡಿರುವ ಇವರ ಯಶೋಗಾಥೆಯ ಪರಿಚಯ ಮತ್ತು ರೈತರಿಗೆ ಮಾತ್ರವಲ್ಲದೆ ಜನಸಾಮಾನ್ಯರಲ್ಲೂ ಸ್ಫೂರ್ತಿ ಹಾಗೂ ಅರಿವನ್ನು ಮೂಡಿಸುವ ಸಣ್ಣ ಪ್ರಯತ್ನ ಇಲ್ಲಿದೆ.
ಕರ್ನಾಟಕದ ಕಟ್ಟಕಡೆಯ ಹಳ್ಳಿಯಲ್ಲಿ ಹುಟ್ಟಿದ ಜಯರಾಮ್‌ರವರು ಮೂಲತಃ ಕೃಷಿಕ ಕುಟುಂಬದಿಂದ ಬಂದವರು. ಹಳ್ಳಿಯಲ್ಲಿ ಅವರು ಚಿಕ್ಕ ವಯಸ್ಸಿನಲ್ಲಿ ಕಂಡದ್ದೆಲ್ಲಾ ಅಮ್ಮ ಮಾಡುತ್ತಿದ್ದ ಸಾವ ಯವ ಕೃಷಿಯೇ. ಶಿಕ್ಷಣ ಪಡೆದ ನಂತರ ಜಯರಾಮ್ ವಕೀಲ ವೃತ್ತಿ ಪ್ರಾರಂಭಿಸಿದರು.
ವೃತ್ತಿಯಲ್ಲಿ ಬಂದ ಒಂದಿಷ್ಟು ಹಣದಿಂದ ನೆಲಮಂಗಲದಲ್ಲಿ ಒಂದು ಜಮೀನನ್ನು ಖರೀದಿಸಿ ತಮ್ಮ ಪ್ರವೃತ್ತಿಯಾದ ಕೃಷಿಯನ್ನು ಪ್ರಾರಂಭಿಸಿದರು. ೧೯೯೮-೯೯ರ ಸಾಲಿನಲ್ಲಿ ಇವರು ರಾಸಾಯನಿಕ ಕೃಷಿ ಮಾಡಿದರು. ಬಾಲ್ಯದಲ್ಲೇ ಸಾವಯವದ ಶುದ್ಧತೆ ಮತ್ತು ಸರಳತೆ ಕಂಡಿದ್ದ ಇವರಿಗೆ ರಾಸಾಯನಿಕ ಕೃಷಿಯ ಭಯಾನಕತೆ ದಿಗ್ಭ್ರಮೆ ಮೂಡಿಸಿದ್ದು ಸುಳ್ಳಲ್ಲ. ಆಷ್ಟು ಹೊತ್ತಿಗಾಗಲೇ ಕೆಮಿಕಲ್ ಇಂಡಸ್ಟ್ರಿಗಳ ಶ್ರೇಯೋಭಿವೃದ್ಧಿಗಾಗಿ ನಮ್ಮ ಕೃಷಿ ಭೂಮಿ, ಇಳುವರಿ, ತಿನ್ನುವ ಆಹಾರ ಎಲ್ಲವನ್ನೂ ಪಣಕ್ಕಿಡುವ ಅವಶ್ಯಕತೆ ಖಂಡಿತ ಇಲ್ಲ ಎಂಬ ನಿರ್ಧಾರಕ್ಕೆ ಇವರು ಬಂದಾಗಿತ್ತು. ಹಾಗಾಗಿ ೨೦೦೦ದ ಇಸವಿಯಿಂದ ಇವರು ಸಂಪೂರ್ಣ ಸಾವಯವ ಕೃಷಿಯತ್ತ ವಾಲಿದರು, ಅದನ್ನು ತಪಸ್ಸಿನಂತೆ ಪರಿಪಾಲಿಸಿದರು. ಇಲ್ಲಿಂದ ಆರಂಭವಾದ ಸಾವಯವ ಕೃಷಿಯ ಯಾತ್ರೆ ಇಂದು ‘ಸುಕೃಷಿ’ ಫಾರಂ ಆಗಿ, ‘ದ ಗ್ರೀನ್ ಪಾಥ್’ ಎಂಬ ಪರಿಸರ ಸ್ನೇಹಿ ಸರ್ವಿಸ್ ಅಪಾರ್ಟ್‌ಮೆಂಟ್ ಮತ್ತು ಸಂಪೂರ್ಣ ಸಾವಯವ ಮತ್ತು ಸತ್ವಯುಕ್ತ ಆಹಾರಗಳನ್ನು ನೀಡುವ ಹೋಟೆಲ್ ಆಗಿ ಬೆಳೆದಿದೆ. ಅಷ್ಟೇ ಅಲ್ಲದೆ ಸಾವಯವ ಕೃಷಿಯಿಂದಲೇ ಕಾಫಿ ಬೆಳೆಯನ್ನೂ ಬೆಳೆಯುತ್ತಿರುವ ಜಯರಾಮ್ ರವರು ಕೊಡಗಿನ  ಗ್ರೀನ್ ಪಾಥ್ ಇಕೊ ರೆಟ್ರೀಟ್‌ನ ಮಾಲೀಕರೂ ಆಗಿದ್ದಾರೆ.
ಸಾಮಾನ್ಯ ರೈತನ ಮಗನಾಗಿ ಹುಟ್ಟಿ, ಉಚಿತ ಶಿಕ್ಷಣದಲ್ಲೇ ಓದಿ, ಸಿರಿತನದ ಅರಿವೂ ಇಲ್ಲದೆ ಬೆಳೆದ ಇವರು ಇಂದು ವಕೀಲ ವೃತ್ತಿಯನ್ನೂ ತ್ಯಜಿಸಿ ಸಂಪೂರ್ಣ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅದರಿಂದಲೇ ದೊಡ್ಡ ಉದ್ಯಮವೊಂದನ್ನು ಹುಟ್ಟುಹಾಕಿದ್ದಾರೆ. ಇವರ ಕೃಷಿಯ ವಿಶೇಷತೆಗಳ ಮಾಹಿತಿ ಹೀಗಿದೆ.
ಅಂತರ್ಜಲ ಬಳಸದೆ ಕೃಷಿ:
ಬೋರ್ ವೆಲ್ ಅಥವಾ ಅಂತರ್ಜಲ ಬಳಸದೆ ಬೆಳೆ ಬೆಳೆಯುತ್ತಿರುವುದು ಇವರ  ಸುಕೃಷಿ ಫಾರಂನ ವಿಶೇಷ. ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ನಡೆಸುತ್ತಿದ್ದು, ಗೊಬ್ಬರವೂ ಸಹ ಇವರ ಹೊಟೇಲ್‌ನಿಂದ ಬರುವ ಕಸದಿಂದ ತಯಾರಾಗುತ್ತದೆ. ಬಯೋಗ್ಯಾಸ್ ಮತ್ತು ಸೌರಶಕ್ತಿ (ಸೋಲಾರ್) ಬಳಸಿ ಇಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದೆ.  ಇನ್ನು ಅಂತರ್ಜಲವಿಲ್ಲದೆ, ನದಿಯ ನೀರೂ ಇಲ್ಲದ ಊರಿನಲ್ಲಿ ಹೇಗೆ ಕೃಷಿ ಎಂಬ ಪ್ರಶ್ನೆ ಮೂಡುವುದು ಸಹಜ, ಅದಕ್ಕೆ ಉತ್ತರ ಮಳೆಯ ನೀರು. ಒಮ್ಮೆ ಬರಡು ಭೂಮಿಯಾಗಿ ನೀಲಗಿರಿ ತೋಪಾಗಿದ್ದ ನೆಲಮಂಗಲದ ಜಮೀನನ್ನು ಮಳೆ ಕುಯಿಲು ಪದ್ಧತಿಯಿಂದಲೇ ಸಿರಿ ಬೆಳೆಯುವ ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಆಶ್ಚರ್ಯವಾದರೂ ಇದು ನಿಜ. ಜಯರಾಮ್ ರವರು ಹೇಳುವ ಪ್ರಕಾರ ಒಂದು ದಿನದ ಮಳೆಯ ನೀರನ್ನು ಶೇಖರಿಸಿದರೆ ೨೨ ದಿನದ ಕೃಷಿ ಚಟುವಟಿಕೆಗೆ ಅದು ಭರಪೂರವಾಗುತ್ತದೆ. ಊಹಿಸಿ ನೋಡಿ ಶಿವಮೊಗ್ಗದಂತಹ ಊರಿನಲ್ಲಿ ನಾವೆಷ್ಟು ಮಳೆ ನೀರನ್ನು ಹಾಗೆಯೇ ಹರಿದು ಹೋಗಲು ಬಿಟ್ಟು, ನದಿಯ ನೀರಿನ ಮೇಲೆ ಅವಲಂಬಿತವಾಗುತ್ತಿದ್ದೇವೆ ಎಂದು. ಒಂದು ದಿನದ ಮಳೆಯ ನೀರು ಈ ಮಟ್ಟದ ಪ್ರಯೋಜನಕಾರಿಯಾದರೆ ಇನ್ನು ಇಡೀ ವರ್ಷದ ಮಳೆಯ ನೀರನ್ನು ಶೇಖರಿಸುವ ಮತ್ತು ಉಪಯೋಗಿಸುವ ಪ್ರಕ್ರಿಯೆ ಎಲ್ಲರೂ ಅವಲಂಬಿಸಿದರೆ ಬರಡು ಭೂಮಿಗಳೆಲ್ಲಾ ಹಸಿರಾಗುವುದರಲ್ಲಿ ಸಂದೇಹವಿಲ್ಲ. ಇವರ ಈ ಅಂತರ್ಜಲರಹಿತ ಕೃಷಿಗಾಗಿ ಸರ್ಕಾರವು ಇವರ  ಸುಕೃಷಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ೪೦ ಎಕರೆಯ ಇವರ ತೋಟದಲ್ಲಿ ಬರಿ ಬೆಳೆಬೆಳೆಯುವುದು ಮಾತ್ರವಲ್ಲದೆ ಕೃಷಿಯ ಬಗ್ಗೆ ತಿಳಿಯಬೇಕೆಂದಿರುವವರಿಗೆ ಮತ್ತು ಸಾವಯವ ಕೃಷಿಯ ಜ್ಞಾನಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.
ಮರೆಯಾಗದಿರಲಿ ಸಿರಿ ತರುವ ಸಿರಿ ಧಾನ್ಯಗಳು:
ರಾಗಿ, ಜೋಳ, ನವಣೆ, ಸಜ್ಜೆ, ಸಾಮೆ  ಮತ್ತಿತರೇ  ಸಿರಿಧಾನ್ಯಗಳನ್ನು ಜನರು ಮರೆಯುತ್ತಿರುವುದು ದುರದೃಷ್ಟಕರ ಆದರೆ ಸಿರಿಧಾನ್ಯಗಳು ಆರೋಗ್ಯಕ್ಕೆ ಮಾತ್ರವಲ್ಲ ಕಿಸೆಗೂ ಸಿರಿ ತುಂಬುವಂತಹದ್ದು. ಹಾಗಾಗೇ  ಸುಕೃಷಿಯು ಸಿರಿಧಾನ್ಯಗಳ ಬೆಳೆಗೆ ಬೆಂಬಲ ಸೂಚಿಸುತ್ತಿದೆ. ಅಲ್ಲದೆ ಸಿರಿಧಾನ್ಯಗಳಿಗೆ ಮಾರುಕಟ್ಟೆ ಕಲ್ಪಿಸುವುದಕ್ಕಾಗೇ ಸಿರಿಧಾನ್ಯಗಳ ಮೇಳವನ್ನು  ದಿ ಗ್ರೀನ್ ಪಾಥ್  ವತಿಯಿಂದ ನಡೆಸುತ್ತಾರೆ.
ಜೀವನವೇ ಜೈವಿಕ: ಜೈವಿಕ ಕೃಷಿಕ್ ಸೊಸೈಟಿಯ ಸಂಸ್ಥಾಪಕರೂ ಆದ ಜಯರಾಮ್‌ರವರು  ಎರಾ ಆರ್ಗಾನಿಕ್ ಎಂಬ ಭಾರತದ ಪ್ರಪ್ರಥಮ ಜೈವಿಕ ಆಹಾರ ಮಳಿಗೆಯ ಸ್ಥಾಪಕರೂ ಹೌದು. ನಂತರದ ದಿನಗಳಲ್ಲಿ  ಎರಾ ಆರ್ಗಾನಿಕ್ ಸಾವಯವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಟ್ಟಿದ್ದೂ ಸಹ ಒಂದು ಯಶೋಗಾಥೆ. ಜ಼ೀರೋ ವೇಸ್ಟೇಜ್ ಸೂತ್ರ ಪಾಲಿಸುತ್ತಿರುವ ಹೋಟೆಲ್:
ಇವರ ಹೋಟೆಲ್‌ನಲ್ಲಿ ಬಳಕೆಯಾಗುವುದು ಸಾವಯವ ಉತ್ಪನ್ನಗಳು. ದೊರೆಯುವ ಆಹಾರದ ಹೆಸರೇ ‘ಫರ್‌ಗಾಟನ್ ಫುಟ್’ (ಮರೆತುಹೋದ ಆಹಾರಗಳು). ಹಳೆಯ ತಿಂಡಿಗಳಾದ ರಾಗಿ ರೊಟ್ಟಿ, ಸಜ್ಜೆ ರೊಟ್ಟಿ, ಹೀಗೆ ಹತ್ತು ಹಲವು ಸಿರಿಧಾನ್ಯಗಳ ಆರೋಗ್ಯಕರ ಅಡುಗೆ ಇವರ ಹೊಟೇಲ್‌ನ ವಿಶೇಷ. ಹಾಗಾದಾರೆ ರುಚಿ, ಪಿಜ಼್ಜಾ, ಬರ್ಗರ್, ಕೇಕ್ ಎಲ್ಲವೂ ದೊರೆಯುತ್ತದೆ ಆದರೆ ವಿಶೇಷವೆಂದರೆ ಇವೆಲ್ಲವೂ ಆರೋಗ್ಯಕರ, ಅಚ್ಚರಿಪಡಬೇಡಿ ಇವೆಲ್ಲವೂ ಸಿರಿಧಾನ್ಯಗಳಿಂದಲೇ ಮಾಡಲ್ಪಡುತ್ತವೆ ಎನ್ನುವುದು ವಿಶೇಷ. ಹೊಟೇಲ್‌ನಲ್ಲಿ ಬಳಸಿ ಉಳಿದ ಹಸಿ ತ್ಯಾಜ್ಯ ‘ಸುಕೃಷಿ’ಗೆ ಗೊಬ್ಬರವಾಗುತ್ತದೆ, ಬಯೋಗ್ಯಾಸ್ ಆಗುತ್ತದೆ. ಹೊಟೇಲ್ ರಚನೆ ಕೂಡ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ.  ಉಳಿದ ತ್ಯಾಜ್ಯವು ಮರುಬಳಕೆ (ರೀಸೈಕಲಿಂಗ್)ಗಾಗಿ ಪಾಲಿಕೆ ಪಾಲಾಗುತ್ತದೆ.  ಹಾಗಾಗಿ ವೆಸ್ಟೇಜ್ ಮುಕ್ತ ಇವರ ಹೋಟೆಲ್. ಪರಿಸರವನ್ನು ಅರ್ಥ ಮಾಡಿಕೊಳ್ಳಲು ಮತ್ತು ಮಾದರಿ ಮನೆಗಳನ್ನು ಕಟ್ಟಲೂ ಕೂಡ ಇವರ ‘ದ ಗ್ರೀನ್ ಪಾಥ್’ ಸ್ಫೂರ್ತಿ.
ಆತಿಥ್ಯದಲ್ಲೂ ಪರಿಸರ ಕಾಳಜಿ:
ಸುಂದರ ಪರಿಸರದ ಅನುಭವ ಪಡೆಯಲೆಂದು ‘ದ ಗ್ರೀನ್ ಪಾಥ್’ಗೆ ತೆರಳಿದ್ದ ನಮ್ಮ ಸಂಪಾದಕರಾದ ಕೆ.ವಿ.ಶಿವಕುಮಾರ್‌ರವರಿಗೆ ಪ್ರತಿಹಂತದಲ್ಲೂ ಅಲ್ಲಿನ ಪರಿಸರ ಸ್ನೇಹಿ ವಾತಾವರಣ ಅಚ್ಚರಿ ಮೂಡಿಸಿತ್ತಲ್ಲದೆ ಪ್ರೇರಣೆಯನ್ನೂ ನೀಡಿತ್ತು. ‘ಇಂತಹದ್ದೊಂದು ಪರಿಕಲ್ಪನೆ ಪ್ರತಿ ಜಿಲ್ಲೆಗೂ ಹರಡಬೇಕು, ಇದರಿಂದ ಪ್ರಾಂತ್ಯವಾರು ಸಾವಯವ ಕೃಷಿಕರಿಗೆ ಒಂದು ಉತ್ತಮ ಮಾರುಕಟ್ಟೆ ದೊರೆಯುವುದರೊಂದಿಗೆ ಒಂದು ಒಳ್ಳೆಯ ಸ್ಫೂರ್ತಿ ದೊರೆಯುತ್ತದೆ. ರಾಸಾಯನಿಕ ಕೃಷಿಯಿಂದ ತಾನು ಬೆಳೆದ ಆಹಾರವನ್ನು ತಾನೇ ತಿನ್ನಲಾಗದ ಪರಿಸ್ಥಿತಿ ತಲುಪಿರುವ ನಮ್ಮ ರೈತ ಆರೋಗ್ಯಕರ ಮತ್ತು ಲಾಭದಾಯಕ ಕೃಷಿಯತ್ತ ಮುಖ ಮಾಡುವ ಸುದಿನಗಳು ಬರುತ್ತವೆ’ ಎಂದರು. ನಟ ಶರಣ್ ಮತ್ತು ದಿನಿ ಸಿನಿ ಕ್ರಿಯೇಷನ್ಸ್‌ನ ದಿನೇಶ್‌ರವರೂ ಕೂಡ ಅಲ್ಲಿ ಉಪಸ್ಥಿತರಿದ್ದು ರೈತರಿಗೆ ಇದೊಂದು ಮಾದರಿ ಉದ್ಯಮ, ಸಾವಯವ ಬರಿ  ಕೃಷಿಯಲ್ಲ ಉದ್ಯಮವೂ ಆಗಬಹುದು ಎನ್ನುವುದು ಅವರ ಅನಿಸಿಕೆಯೂ ಆಗಿತ್ತು. ಬೀಳ್ಕೊಡುಗೆಯಲ್ಲೂ ತುಳಸಿ ಸಸಿಯನ್ನು ನೆನಪಿನಕಾಣಿಕೆಯಾಗಿ ನೀಡುವ ಮೂಲಕ ಹಸಿರ ಸಿರಿಯ ಮಹತ್ವ ಸಾರುತ್ತಿದ್ದಾರೆ ಎಚ್.ಆರ್. ಜಯರಾಮ್.

ಪರಿಸರ ರಕ್ಷಣೆಯ ಜೊತೆಗೆ ಬರವನ್ನು ಎದುರಿಸುವ ಶಕ್ತಿ, ಉತ್ತಮ ಬೆಳೆ, ಆರೋಗ್ಯಕರ ಆಹಾರ, ನಿವ್ವಳ ಲಾಭ, ಎಲ್ಲಾ ದೃಷ್ಟಿಯಿಂದಲೂ ಸಾವಯವ ಕೃಷಿ ಇಂದು ಬಹಳ ಮಹತ್ವಪೂರ್ಣ. ಇದರ ಬೆಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಲಿ, ವಿಷಯುಕ್ತ ಆಹಾರಕ್ಕಿಂತ ಸತ್ವಯುಕ್ತ ಆಹಾರ ಮತ್ತು ಪರಿಸರದತ್ತ ಜನರನ್ನು ಆಕರ್ಷಿಸುವಲ್ಲಿ ನಮ್ಮದೊಂದು ಅಳಿಲು ಸೇವೆ, ಇದರಿಂದ ಒಂದಿಬ್ಬರಿಗೆ ಸ್ಫೂರ್ತಿಯಾದರೂ ಆದೇ ಸಾರ್ಥಕ ಸುಗ್ಗಿ.