ಶಿವಮೊಗ್ಗ : ನಗರದ ದುರ್ಗಿಗುಡಿ ಬಡಾವಣೆಯ ಮಲ್ಲಿಕಾರ್ಜುನ ಚಿತ್ರಮಂದಿರ ಮುಂಭಾಗ ಇರುವ ನಿವೇಶನ ಮಹಾನಗರ ಪಾಲಿಕೆಗೆ ಸೇರಿದ್ದು ಎಂದು ಪೌರಾಡಳಿತ ನಿರ್ದೇಶನಾಲಯ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ನಿವೇಶನವನ್ನು ಚಂದ್ರಪ್ರಭಾ ಹೆಸರಿಗೆ ವರ್ಗಾ ವಣೆಯಾಗಿದ್ದು, ಈ ಖಾತೆಯನ್ನು ಪೌರಾಡಳಿತ ನಿರ್ದೇಶನಾ ಲಯ ರದ್ದುಗೊಳಿಸಿ, ಆದೇಶ ಹೊರಡಿಸಿದೆ.
ವಾರ್ಡ್ ನಂ. ೨೯ರಲ್ಲಿ ಬರುವ ದುರ್ಗಿಗುಡಿ ಬಡಾವಣೆಯ ಮಲ್ಲಿಕಾರ್ಜುನ ಚಿತ್ರಮಂದಿರದ ಮುಂಭಾಗದಲ್ಲಿರುವ ಖಾತೆ ಸಂ. ೫೦೧/೨-೬೬೯-೧ರ ಅಳತೆಯ ೪೦ ೮೦ ನಿವೇಶನವನ್ನು ಚಂದ್ರಪ್ರಭಾ ಹೆಸರಿಗೆ ಕಳೆದ ೨೦೧೧ರ ಅ.೧೦ರಂದು ಖಾತೆ ಮಾಡಿ ಕೊಡಲಾಗಿತ್ತು. ಈಗಿರುವ ಮೇಯರ್ ಎಸ್.ಕೆ. ಮರಿಯಪ್ಪನವರ ಮಕ್ಕಳಾದ ಎಸ್.ಎಂ. ಶರತ್ ಮತ್ತು ಎಸ್.ಎಂ.ಅಭಿ ಲಾಷ್ ಅವರು ಖರೀದಿಸಿ, ನಂತರ ಇವರ ಹೆಸರಿಗೆ ಖಾತೆಯನ್ನು ಮಾಡಿಕೊಡಲಾಗಿತ್ತು.
ಈ ನಿವೇಶನ ಮಹಾನಗರಪಾಲಿ ಕೆಯ ಸ್ವತ್ತಾಗಿದ್ದು, ಅಕ್ರಮ ಖಾತೆ ಮಾಡಿ, ಮಕ್ಕಳ ಹೆಸರಿಗೆ ಪರಭಾರೆ ಮಾಡಿಕೊಳ್ಳಲಾಗಿದೆ. ಈ ರೀತಿ ಪರಭಾರೆ ಮಾಡಿಕೊಳ್ಳುವಲ್ಲಿ ಪಾಲಿಕೆಯ ಸಿಬ್ಬಂದಿ ವರ್ಗದವರು ತಮ್ಮ ಕರ್ತವ್ಯ ಲೋಪ ಎಸಗಿದ್ದಾರೆ. ಅಲ್ಲದೇ ಮೇಯರ್ ಎಸ್.ಕೆ. ಮರಿಯಪ್ಪನವರ ಪಾತ್ರವೂ ಮುಖ್ಯ ವಾಗಿದೆ ಎಂದು ನಾಗರೀಕ ಹಿತರಕ್ಷಣಾ ವೇದಿಕೆಯವರು ಕಳೆದ ಮೂರು ವರ್ಷಗಳ ಕಾಲ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರು. ವೇದಿಕೆಯ ಒಕ್ಕೂಟ ಈ ವಿಷಯಕ್ಕೆ ಸಂಬಂಧಿಸಿದಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮತ್ತು ದೂರನ್ನು ದಾಖಲಿಸಿತ್ತು. ಹೈಕೋರ್ಟ್‌ನಲ್ಲಿ ಕೂಡಾ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಒಕ್ಕೂಟದ ದೂರನ್ನು ಸ್ವೀಕರಿಸಿದ ಪೌರಾಡಳಿತ ನಿರ್ದೇಶನಾಲಯ ಈ ಕುರಿತು ವಿವಿಧ ಹಂತದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಜಿಲ್ಲಾಡಳಿತ ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಯನ್ನು ನಡೆಸಿ, ಈ ಸ್ವತ್ತು ಪಾಲಿಕೆಗೆ ಸೇರಿದ್ದು ಎಂಬ ವರದಿ ಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ನೀಡಿತ್ತು.
ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿ, ಪೌರಾಡಳಿತ ನಿರ್ದೇಶನಾಲಯ ಚಂದ್ರಪ್ರಭಾ ಹೆಸರಿನಲ್ಲಿ ಪಾಲಿಕೆ ವ್ಯಾಪ್ತಿಯ ಖಾತೆ ಸಂ.:೫೦೧/೨-೬೬೯ರ ಖಾತೆ ವರ್ಗಾವಣೆಯನ್ನು ಕರ್ನಾಟಕ ಮಹಾನಗರಪಾಲಿಕೆ ಅಧಿನಿಯಮ ೧೯೭೬ರ ಕಲಂ ೧೬೨ರ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇದರಿಂದಾಗಿ ನಾಗರೀಕ ಹಿತರಕ್ಷಣಾ ವೇದಿಕೆ ಕಳೆದ ಮೂರು ವರ್ಷಗಳಿಂದ ನಿಂತರವಾಗಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.