ಸಮಸ್ಯೆಗಳ ಆಗರ ಗಾಂಧಿ ಪಾರ್ಕ್…

ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಅತ್ಯಂತ ದೊಡ್ಡ ಹಾಗೂ ಕಾಲೇಜು ವಿದ್ಯಾರ್ಥಿಗಳ, ಮಕ್ಕಳ, ಜನಸಾಮಾನ್ಯರ ನೆಚ್ಚಿನ ಸ್ಥಳ ಗಾಂಧಿಪಾರ್ಕ್. ಹಲವು ವರ್ಷಗಳ ಹಿಂದೆ ಈ ಪಾರ್ಕ್ ವನ್ಯಜೀವಿಗಳ ಸಂಗ್ರಹಾಲಯವಾಗಿದ್ದು, ಶಿವಮೊಗ್ಗ ಅಭಿವೃದ್ಧಿಯಾಗತೊಡಗುತ್ತಿದ್ದಂತೆ ಇಲ್ಲಿನ ಪ್ರಾಣಿಗಳನ್ನು ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಸ್ಥಳಾಂತರಿಸಿ, ಆ ಸ್ಥಳದಲ್ಲಿ ಸುಂದರ, ಸುಸಜ್ಜಿತ ಪಾರ್ಕ್ ನಿರ್ಮಾಣ ಮಾಡಲಾಯಿತು. ಇಲ್ಲಿ ಮಕ್ಕಳ ಮನರಂಜನೆಗಾಗಿ ಆಟದ ಸಾಮಾಗ್ರಿಗಳು, ಈಜುಕೊಳ, ಉಗಿಬಂಡಿ (ರೈಲು) ಆರಂಭಿಸಿದ್ದು, ನಂತರದ ದಿನಗಳಲ್ಲಿ ಪರಿಸರ ಕಾಳಜಿಯಿಂದ ಸುತ್ತಲೂ ಗಿಡ, ಮರಗಳನ್ನು ನೆಟ್ಟು ಸಾರ್ವಜನಿಕರಿಗೆ ದಿನಂಬೆಳಿಗ್ಗೆ ವಾಯುವಿಹಾರಕ್ಕಾಗಿ ಅವಕಾಶ ಸಹ ನೀಡಲಾಯಿತು.
ಪ್ರಸ್ತುತ ದಿನಗಳಲ್ಲಿ ಗಾಂಧಿಪಾರ್ಕ್‌ನ ಚಿತ್ರಣವೇ ಬದಲಾಗಿದೆ. ಪಾರ್ಕಿನ ನಿರ್ವಹಣೆ ಇಲ್ಲದೆ, ಎಲ್ಲೆಂದರಲ್ಲಿ ಕಸದ ರಾಶಿಗಳಿಂದ ಕೂಡಿದ್ದು, ಪ್ರತಿದಿನ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ.
ಇಲ್ಲಿರುವ ಮಕ್ಕಳ ಅಟದ ಸಾಮಾಗ್ರಿಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಮಕ್ಕಳು ಆಟವಾಡುವ ಸಮಯದಲ್ಲಿ ಯಾವಾಗ ಯಾವ ಮಗುವಿಗೆ ಹಾನಿ ಉಂಟಾಗುತ್ತದೋ ಎಂಬ ಚಿಂತೆ ಇಲ್ಲಿಗೆ ಆಟ ಅಡಲು ಕಳುಹಿಸುವ ಪೋಷಕರದು. ಮಕ್ಕಳು ಅಟ ಆಡುವ ಜಾರುಬಂಡಿ, ಉಯ್ಯಾಲೆ ಎಲ್ಲವೂ ಮುರಿದು ಹೋಗಿದೆ. ಈಜುಕೊಳದ ಸ್ಥಿತಿಯಂತೂ ಹೇಳತೀರದಾಗಿದೆ. ಇನ್ನು ಇಲ್ಲಿ ನಿರ್ಮಾಣವಾಗಿರುವ ನಮ್ಮ ರಾಷ್ಟ್ರಧ್ವಜಕ್ಕೆ ಸರಿಯಾದ ಬೆಳಕಿನ ವ್ಯವಸ್ದೆ ಕೂಡ ಇಲ್ಲ. ನಮ್ಮ ರಾಷ್ಟ್ರಧ್ವಜವನ್ನು ಕತ್ತಲಲ್ಲಿ ಹಾರಿಸುವಂತಿಲ್ಲ, ಸರಿಯಾದ ಬೆಳಕಿನ ವ್ಯವಸ್ದೆ ಮಾಡಬೇಕು ಎಂಬ ಕಾನೂನು ಇದೆ. ಅದರೆ ನಮ್ಮ ರಾಷ್ಟ್ರಧ್ವಜ ಕೆಲವು ದಿನ ಕತ್ತಲಲ್ಲಿತ್ತು. ಅದನ್ನು ಕಂಡ ಕೆಲ ಸಂಸ್ಥೆಗಳು ಹಾಗೂ ಯುವಕರು ಪಾರ್ಕಿನಲ್ಲಿ ಪ್ರತಿಭಟನೆ ಮಾಡಿ, ಟಾರ್ಚ್‌ನಿಂದ ಬೆಳಕು ಬಿಟ್ಟ ಘಟನೆಗಳೂ ಸಹ ನಡೆದಿವೆ.
ಇನ್ನು ಪಾರ್ಕ್‌ನ್ನು ಗುತ್ತಿಗೆ ಪಡೆದ ಸುಹಾಸ್‌ರವರನ್ನು ಪ್ರಶ್ನಿಸಿದರೆ, ಮಹಾನಗರಪಾಲಿಕೆಯಿಂದ ೧೫ ಲಕ್ಷ ರೂ. ಬಿಡ್ ಮಾಡಿ, ಈ ಪಾರ್ಕ್‌ನ್ನು ಗುತ್ತಿಗೆ ಪಡೆದಿದ್ದೇವೆ. ಈ ಪಾರ್ಕ್ ಗುತ್ತಿಗೆ ಪಡೆಯುವ ಸಂದರ್ಭದಲ್ಲಿಯೇ ಈ ಸ್ಥಿತಿಯಲ್ಲಿತ್ತು. ಮಕ್ಕಳ ಅಟಿಕೆಗಳು ಮುರಿದು ಹೋಗಿತ್ತು. ಸಾಕಷ್ಟು ವ್ಯವಸ್ಥೆಯಲ್ಲಿ ದೋಷವಿತ್ತು. ಸರಿಪಡಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದೀವಿ. ಆದರೆ ಏನು ಪ್ರಯೋಜನ ಆಗಿಲ್ಲ. ಪಾರ್ಕಿನ ಒಳಗೆ ಫುಡ್‌ಕೋರ್ಟ್‌ನ್ನು ಆರಂಭಿಸಬೇಕಿತ್ತು. ಆದರೆ ಇಲ್ಲಿಯವರೆಗೂ ಆರಂಭಿಸಿಲ್ಲ ಎಂಬುದು ಇವರ ಆರೋಪ.
ಗಾಂಧಿ ಪಾರ್ಕ್ ಇರುವುದು ಮಹಾನಗರ ಪಾಲಿಕೆಯ ಮುಂಭಾಗವೇ ಆದರೂ ಸಹ ಈ ಎಲ್ಲಾ ಅವ್ಯವಸ್ಥೆಗಳು ನಮ್ಮ ಜನಪ್ರತಿನಿಧಿಗಳಿಗೆ ಕಾಣಿಸುತ್ತಿಲ್ಲವೇ..? ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಶಯ….
ಚೈತ್ರ ಸಜ್ಜನ್