ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿಯನ್ನು ಪೊಲೀಸರು ಬೆಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಇಂದು (ಗುರುವಾರ) ಸಲ್ಲಿಸಿದ್ದಾರೆ.
ಯಡಿಯೂರಪ್ಪ ಅವರಿಂದ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತ ಬಾಲಕಿ ತಾಯಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧದ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.
ಫೆ. 2ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ಈ ಸಂಬಂಧ ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಪರವಾಗಿ ವಕಾಲತ್ತು ವಹಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅಶೋಕ್ ಎನ್.ನಾಯಕ್ ಅವರನ್ನು ನೇಮಿಸಿದೆ.
ಈ ಪ್ರಕರಣದಲ್ಲಿ 75 ಮಂದಿಯನ್ನ ಸಾಕ್ಷಿಗಳಾಗಿ ಪರಿಗಣಿಸಿ ಪ್ರಕರಣದ ತನಿಖೆ ಮುಕ್ತಾಯ ಮಾಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಮಾಹಿತಿ ತಿಳಿದುಬಂದಿದೆ.