ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಹೆಲ್ತ್ ನಿಂದ ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಕೇರ್ ಬ್ಲಾಕ್ ಅನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಾರಾಯಣ ಕ್ಯಾನ್ಸರ್ ಕೇರ್ ಬ್ಲಾಕ್ ಅಸ್ಪತ್ರೆ ಸ್ಥಾಪನೆ ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪನವರ ಕನಸು ನನಸಾಗಿದೆ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲಿನ ಜನರ ಆರೋಗ್ಯದ ದೃಷ್ಠಿಯಿಂದ ದೂರದ ನಗರಗಳಾದ ಮಂಗಳೂರು, ಬೆಂಗಳೂರು, ಮುಂಬೈಗಳಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗುವ ಬದಲು ಉತ್ತಮ ಹಾಗೂ ಆತ್ಯಾಧುನಿಕ ವಿಶ್ವ ದರ್ಜೆಯ ಆರೋಗ್ಯ ಸೇವೆಗಳು ಇಲ್ಲಿಯೇ ದೊರೆಯಬೇಕೆಂಬುದು ಅವರ ಕನಸಾಗಿತ್ತು. ಇಂತಹ ಉತ್ತಮ ಆರೋಗ್ಯ ಸೇವೆಗಳು ನಾನು 4ನೇ ಬಾರಿ ಸಂಸದನಾಗಿ ಚುನಾಯಿತನಾದ ನನ್ನ ಶಿವಮೊಗ್ಗ ಕ್ಷೇತ್ರದಲ್ಲಿ ದೊರೆಯುವಂತಾಗಿದ್ದು ಸಂತಸವನ್ನು ಇಮ್ಮುಡಿಗೊಳಿಸಿದೆ. ಆ ನಿಟ್ಟಿನಲ್ಲಿ ನಾರಾಯಣ ಆಸ್ಪತ್ರೆ ಸೇರಿದಂತೆ ನಗರದಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳು ಉತ್ತಮ ಸೇವೆಯನ್ನು ಒದಗಿಸುವಂತಾಗಲಿ ಎಂದರು.
ಶಿವಮೊಗ್ಗದಲ್ಲಿ ನಾರಾಯಣ ಹೆಲ್ತ್ ಕ್ಯಾನ್ಸರ್ ಕೇರ್ ಬ್ಲಾಕ್ ಅನ್ನು ಪ್ರಾರಂಭಿಸಿರುವುದು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ಒದಗಿಸುವುದಾಗಿದೆ. ಈ ನಿಟ್ಟಿನ ನಮ್ಮ ಗುರಿ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ನಾರಾಯಣ ಹೆಲ್ತ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಹೃದಯ ಸಂಬಂಧಿ ಮತ್ತು ಕ್ಯಾನ್ಸರ್ ಸಂಬಂಧಿ ರೋಗಗಳು ಎಲ್ಲರನ್ನು ಚಿಂತೆಗೀಡು ಮಾಡುತ್ತವೆ. ಇದನ್ನು ಹೋಗಲಾಡುಸುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ಒದಗಿಸಲು ನಾವು ಬದ್ದರಾಗಿದ್ದೇವೆ. ಕ್ಯಾನ್ಸರ್ ರೋಗವನ್ನು ಡಯಾಲಿಸಿಸ್ ಮೂಲಕ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಚಿಕಿತ್ಸೆ ಮಾಡುವುದು ನಮ್ಮ ಉದ್ದೇಶ. ಈ ಮೂಲಕ ರೋಗಿಗಳಿಗೆ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಮಧ್ಯಮ ವರ್ಗ ಹೆಚ್ಚು ಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ದುಬಾರಿ ವೆಚ್ಚ ಭರಿಸುವ ಈ ಕ್ಯಾನ್ಸರ್ ಚಿಕಿತ್ಸೆಗೆ ನಾವು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಅದಕ್ಕಾಗಿ ಹೆಲ್ತ್ ಇನ್ಸೂರೆನ್ಸ್ ಅನ್ನು ಪರಿಚಯಿಸುತ್ತಿದ್ದೇವೆ. ಇದು ರೋಗಿಯು ಬೇರೆ ಕಡೆ ಹೋಗಿ ಸಾಲ ಮಾಡುವುದನ್ನು ತಪ್ಪಿಸಬಹುದಾಗಿದೆ. ಇದನ್ನು ಒಂದೆರಡು ವರ್ಷದಲ್ಲಿ ಸಕಾರಮಾಡುತ್ತೇವೆ. ಈ ಮೂಲಕ ಎಲ್ಲರೂ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಬೇಕು ಎಂಬುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. 2-3 ವರ್ಷದಲ್ಲಿ ಈ ಮ್ಯಾಜಿಕ್ ಅನ್ನು ಮಾಡಿ ತೋರಿಸುತ್ತೇವೆ. ಪ್ರಾರಂಭದಲ್ಲಿ ಮೊಬೈಲ್ ದೇಶಕ್ಕೆ ಕಾಲಿಟ್ಟಾಗ ಕರೆಯೊಂದಕ್ಕೆ 25 ರೂ. ಕೊಡಬೇಕಾಗಿತ್ತು. ಆಗ ಕೋಟ್ಯಧಿಪತಿಗಳು ಮಾತ್ರ ಬಳಕೆ ಮಾಡಲು ಮಾತ್ರ ಸಾಧ್ಯವಿತ್ತು. ಈಗ ಜನಸಾಮಾನ್ಯರು ಅದನ್ನು ಅದರ ಬಳಕೆ ಮಾಡುತ್ತಿದ್ದಾರೆ. ಅದೇ ರೀತಿ ಕ್ಯಾನ್ಸರ್ ಚಿಕಿತ್ಸೆ ವಿಭಾಗದಲ್ಲೂ ಮಾಡಿ ತೋರಿಸುತ್ತೇವೆ ಎಂದು ಅವರು ಭರವಸೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ನಾರಾಯಣ ಹೆಲ್ತ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಡಾ. ಇಮ್ಯಾನುಯೆಲ್ ರೂಪರ್ಟ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ನಾರಾಯಣ ಹೆಲ್ತ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೀರೇನ್ ಶೆಟ್ಟಿ ಉಪಸ್ಥಿತರಿದ್ದರು.