Saturday, October 12, 2024
Google search engine
Homeಲೇಖನಗಳುಕಥೆಅನಿವಾರ್ಯತೆಯ ಆಕ್ರಂದನ

ಅನಿವಾರ್ಯತೆಯ ಆಕ್ರಂದನ

ಅನಿವಾರ್ಯತೆಯ ಆಕ್ರಂದನ

ಲೇಖನ: ಸೌಮ್ಯ ಗಿರೀಶ್

ಬಟಾ ಬಯಲಿನಲ್ಲಿ ಬಣ್ಣ ಮಾಸಿದ ಸೀರೆಗಳ ಹಂದರ, ಅಂದೆಂದೋ ಮತ್ತೊಬ್ಬರ ಅಂದ ಹೆಚ್ಚಿಸಿದ ಅರವಿ ಇಂದು ಮತ್ತಾರಿಗೋ ಸೂರಾಗಿ ನಿಂತಿದೆ. ಬಿಸಿಲಿಗೆ ಬಣ್ಣ ಮಾಸುತ್ತಾ, ತೂರುವ ಗಾಳಿಯಲ್ಲಿ ಹಾರುತ್ತಾ-ಹರೆಯುತ್ತಾ, ಮಳೆಯಲ್ಲಿ ನೆನೆಯುತ್ತಿದ್ದರೂ ತನ್ನ ಹರಕು ಹಂದರದಿಂದಲೇ ಅದೆಷ್ಟೋ ಜನರಿಗೆ ನೆಲೆಯಾಗಿದೆ. ಈ ಬಣ್ಣ ಮಾಸಿದ ಹಂದರದ ಕೆಳಗಿವೆ ಮತ್ತಷ್ಟು ಬಣ್ಣ ಮಾಸಿದ ಬದುಕುಗಳು, ಬತ್ತಿದ ದೇಹಗಳು, ಒಣಗಿದ ಕಣ್ಣುಗಳು, ಹಸಿವಿನಿಂದ ತತ್ತರಿಸಿರುವ ಜೀವಗಳು.

ಅಲೆಮಾರಿ ಬದುಕಿನ ಬವಣೆ ಅರಿಯುವುದು ಸುಲಭವಲ್ಲ. ಇಂತಹ ದುಸ್ಥಿತಿಯಲ್ಲಿ ಸುಸ್ಥಿರ ಬದುಕನ್ನು ಕಂಡುಕೊಳ್ಳಲು ಹಂಬಲಿಸುವ ಅದೆಷ್ಟೋ ಜೀವಗಳ ಹಪಹಪಿಸುವಿಕೆ ನೋಡುವವರಿಗೆ ತುಚ್ಛ ಎನಿಸುವ ಎಷ್ಟೋ ನಿದರ್ಶನಗಳು… ಇಂತಹ ಸಂಕೋಲೆಗಳ ನಡುವೆ ಒಂದು ಹೆಣ್ಣಿನ ಜೀವನ ಅದು ಹೇಗೆ ಇರಬಹುದು ಯೋಚಿಸಿ. ಸೂರಲ್ಲದ ಸೂರಿನಡಿ ಒಂದು ತಾಯಿ ತನ್ನ ಮಗುವನ್ನು ಹೊತ್ತು, ಹೆತ್ತು ಬೆಳೆಸುವುದೇ ಬದುಕಿನ ಒಂದು ಯುದ್ಧ ಗೆದ್ದಂತೆ ಎಂದರೆ ಅತಿಶಯೋಕ್ತಿಯಲ್ಲ. ಆ ಬದುಕಿನ ಚಿತ್ರಣದ ಒಂದು ತುಣುಕು ಆ ಹೆಣ್ಣು ಎದುರಿಸುವ ಸವಾಲುಗಳಿಗೆ ಹಿಡಿದ ಕನ್ನಡಿಯಂತೆ.

ಅದೊಂದು ದಿನ ಹರಕು ಸೀರೆಯ ಜೋಲಿಯಲ್ಲಿ ರೋದಿಸುತ್ತಿರುವ ಕಂದಮ್ಮ, ಬಿರು ಬಿಸಿಲಿನಲ್ಲಿ ತಲೆಗೆ ತನ್ನ ಹರುಕು ಸೀರೆಯನ್ನು ಕಟ್ಟಿಕೊಂಡು, ಕೈಯಲ್ಲಿ ಸುತ್ತಿ ಹಿಡಿದು ಕಲ್ಲನ್ನು ಬಡಿಯುತ್ತಿರುವ ಅಮ್ಮ, ಮಗುವಿನ ರೋದನ ಕೇಳಿದ ಆ ತಾಯಿ ತನ್ನ ಸೆರಗಿನಿಂದ ಬೆವರು ಒರೆಸಿಕೊಳ್ಳುತ್ತಾ ಆ ಕಂದಮ್ಮನ ಬಳಿಗೆ ಓಡಿದಳು. ಅಪ್ಪಿ ಮುದ್ದಾಡುತ್ತಾ ಕಂದಮ್ಮನನ್ನು ಮಡಿಲಿಗೆ ಹಾಕಿಕೊಂಡು ಕೂತಳು, ಆ ಕಂದನ ಹಸಿವೆ ನೀಗಿಸುವ ಸಮಯ, ಇನ್ನೇನು ಕಂದನಿಗೆ ಹಾಲುಣಿಸಬೇಕು, ಅಲ್ಲೆಲ್ಲೋ ಬೀಡಿಯ ಹೊಗೆಯ ಮಧ್ಯದಿಂದ ಆರು ಕಣ್ಣುಗಳು ಕೆಕ್ಕರಿಸಿ ನೋಡುತ್ತಿವೆ, ಮತ್ತೊಂದು ಪೊದೆಯ ಸಂದಿಯಿಂದ ತನ್ನ ಕಾಮತೃಷೆ ಇಂಗಿಸಿಕೊಳ್ಳಲು ಕಾಯುತ್ತಿರುವ ಮತ್ತೆರಡು ಕಣ್ಣುಗಳು. ಒಂದೆಡೆ ಹಸಿದ ಹೊಟ್ಟೆಯನ್ನು ತಣಿಸಿದರೆ ಸಾಕೆಂಬ ಹಂಬಲ, ಮತ್ತೊಂದೆಡೆ ತನ್ನ ಮಾನದ ಪ್ರಶ್ನೆ. ಆ ಹರಕು ಸೆರಗು ಒಂದೆಡೆ ಕೂಸನ್ನು ಬಿಸಿಲ ಬೇಗೆಯಿಂದ ರಕ್ಷಿಸುತ್ತಿದೆ, ಇತ್ತ ತನ್ನ ಮಾನ ಉಳಿಸಿಕೊಳ್ಳಲು ಮಗುವಿನ ಮೇಲಿನ ಸೆರಗನ್ನು ಎಳೆಯಲು ಆ ಹೆತ್ತ ಕರಳು ಒಪ್ಪುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಅವಳ ಅನಿವಾರ್ಯತೆಯ ಆಕ್ರಂದನ ಕೇಳುವವರಾರು..? ತಾಯಿ ಮೊಲೆಯುಣಿಸುವುದನ್ನೂ ಸಹ ಕಾಕದೃಷ್ಟಿಯಿಂದ ನೋಡುವ ಕಾಮುಕ ಕಣ್ಣುಗಳು ಇನ್ನು ಬಯಲು ಶೌಚಕ್ಕೆ ಹೋಗುವ ಹೆಣ್ಣನ್ನು ಇನ್ನೆಷ್ಟು ಕೀಳುದೃಷ್ಟಿಯಿಂದ ನೋಡಬಹುದು? ಇಂತಹ ಕಾಮುಕ ಸಮಾಜದ ನಡುವೆ ಬದುಕಿರುವ ಹೆಣ್ಣಿನ ಸುರಕ್ಷತೆ ಯಾರ ಜವಾಬ್ದಾರಿ?
ಹಾಗಾದರೆ ಇಂತಹ ಅನಿವಾರ್ಯತೆಯ ಆಕ್ರಂದನ ಕೆಳವರ್ಗದಲ್ಲಿ ಮಾತ್ರವೇ, ಸುಶಿಕ್ಷಿತರು ಎನಿಸಿಕೊಳ್ಳುವವರ ಸಮಾಜದಲ್ಲಿ ಇಲ್ಲವೇ, ಖಂಡಿತವಾಗಿಯೂ ಇದೆ. ಎಸಿ ಕಚೇರಿಯೊಳಗೆ ಕುಳಿತು ಕೆಲಸ ಮಾಡುವವರಲ್ಲಿ ಈ ಆಕ್ರಂದನ ಕೇಳುವುದಿಲ್ಲ ಎಂದುಕೊಂಡಿದ್ದರೆ ಅದು ಅಕ್ಷರಶಃ ಸುಳ್ಳು. ಹೀಗೊಂದು ಘಟನೆ, ಸಂಜೆಯ ಕತ್ತಲು ಆವರಿಸುತ್ತಿದೆ, ಮೂರು ತಿಂಗಳ ಹಸುಗೂಸು ಅಮ್ಮನ ಮಡಿಲಲ್ಲಿ ಆಡುತ್ತಿದೆ, ಗಡಿಯಾರದ ಮುಳ್ಳು ಮುಂದೆ ಹೋದಂತೆಲ್ಲಾ ತಾಯಿಯ ಎದೆ ಬಡಿತ ಹೆಚ್ಚಾಗುತ್ತಿದೆ, ಕತ್ತಲಾಗುತ್ತಿದ್ದಂತೆ ಮಗುವನ್ನು ಅಗಲಿ ಹೋಗಬೇಕಲ್ಲಾ ಎಂಬ ತವಕ. ರಾತ್ರಿಯಾಗಿದೆ, ಹಾಲು ಕುಡಿದ ತುಟಿಯನ್ನು ಒರಸಿ, ಕಂದನನ್ನು ಎದೆಗಪ್ಪಿ, ತನ್ನ ಒಡಲ ಶಾಖದಿಂದ ಮಗುವನ್ನು ಬೆಚ್ಚಗೆ ಮಲಗಿಸಬೇಕಾದ ಸಮಯ, ಆ ಹೊತ್ತಿಗೆ ಸರಿಯಾಗಿ ಕೆಳೆಗೆ ಬಂದಿರುವ ಕ್ಯಾಬ್(ಕಾರು)ನ ಹಾರ್ನ್ ಶಬ್ಧವು ಕರ್ಣಕಠೋರವೆನಿಸುತ್ತಿದೆ, ತನ್ನ ಬಟ್ಟೆಯನ್ನು ಕಂದಮ್ಮ ಗಟ್ಟಿಯಾಗಿ ಹಿಡಿದು ಗಾಢ ನಿದ್ರೆ ಮಾಡುತ್ತಿದೆ, ಆ ಹಿಡಿತದಿಂದ ಬಟ್ಟೆಯನ್ನು ಬಿಡಿಸಿಕೊಳ್ಳುವಾಗ ಆ ತಾಯಿಯ ಮನಸ್ಸಿನಲ್ಲಿ ಅದೇನೋ ದುಗುಡ, ಇರುವ ಹಂಬಲ ಆದರೆ ಹೋಗದೆ ವಿಧಿಯಿಲ್ಲ. ತೊಟ್ಟಿಲ ಹಸುಗೂಸನ್ನು ಬಿಟ್ಟು ಆ ಸರಿ ರಾತ್ರಿಯಲ್ಲಿ ಹೋಗುವಂತಹದ್ದೇನು ಕೆಲಸ? ಹೀಗೆ ನಿತ್ಯ ಕಾರು ಬಂದು ಮನೆಯ ಮುಂದೆ ನಿಲ್ಲುತ್ತದೆ, ರಾತ್ರಿಯಿಡೀ ಎಲ್ಲಿ ಹೋಗುತ್ತಾಳೋ ಏನೋ? ಅವಳ ಉಡುಗೆಯ ರೀತಿ ನೋಡಿದ್ದೀರಾ? ಮಗುವಿಗಿಂತ ಹೆಚ್ಚೇ ಇವಳ ಈ ಕತ್ತಲೆ ಕೆಲಸ? ಹೀಗೆ ಹತ್ತು ಹಲವು ಟೀಕೆಗಳು ಆ ತಾಯಿಯ ಕಿವಿಗೆ ಬೀಳುವುದು ನಿತ್ಯದ ಸುಪ್ರಭಾತದಂತೆ ಆಗಿದೆ, ಆದರೆ ಅವಳು ಆ ಕ್ಯಾಬ್ ಹತ್ತದೆ ವಿಧಿಯಿಲ್ಲ, ಆ ಕ್ಯಾಬ್ ಹೊರಟು ನಿಂತದ್ದು ಒಂದು ಪ್ರತಿಷ್ಟಿತ ಕಾಲ್ ಸೆಂಟರ್ ಮುಂದೆ.

ಹೌದು, ಆಕೆ ಕಾಲ್‌ಸೆಂಟರ್ ಉದ್ಯೋಗಿ, ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾದಂತಹ ದೇಶಗಳ ಉತ್ಪನ್ನ ಮತ್ತು ಸೇವೆಗಳ ಕಾಲ್‌ಸೆಂಟರ್ ಅದು, ಹಾಗಾಗಿ ನಮ್ಮ ರಾತ್ರಿ ಅವರಿಗೆ ಬೆಳಗು. ಅವಳು ದುಡಿಯದಿದ್ದರೆ ಮನೆ ನಡೆಯುವುದು ಹೇಗೆ? ಆ ಎಸಿ ಕಚೇರಿಯಲ್ಲಾದರೂ ಅವಳು ನೆಮ್ಮದಿಯಿಂದ ಕೆಲಸ ಮಾಡುವಳೇ, ಇಲ್ಲ, ಅಲ್ಲಿ ನೇರ ಕಾಕದೃಷಿಯಾದರೆ ಇಲ್ಲಿ ಡೇಟಿಂಗ್, ಚಾಟಿಂಗ್ ಹೆಸರಿನಲ್ಲಿ ಮತ್ತೊಂದು ರೀತಿಯ ಕಾಮಾಂಧರ ಕೂಟ. ಆ ರಾತ್ರಿ ಪಾಳಿಯ ಮತ್ತೊಂದು ಮುಖ ಇನ್ನಷ್ಟು ವಿಚಿತ್ರ, ಒಂದು ಪಾಳಿಯಲ್ಲಿ ಮೂರೇ ಬ್ರೇಕ್, ಹದಿನೈದು ನಿಮಿಷದ ಎರಡು ಬ್ರೇಕ್ ಮತ್ತು ಮೂವತ್ತು ನಿಮಿಷದ ಒಂದು ಬ್ರೇಕ್, ಮಧ್ಯದಲ್ಲಿ ನಿನ್ನ ನೈಸರ್ಗಿಕ ಕ್ರಿಯೆಗೂ ಬ್ರೇಕ್ ದೊರೆಯದ ಗುಲಾಮಗಿರಿಗೆ ಸಮನಾದ ಕೆಲಸವದು. ಹದಿನೈದು ನಿಮಿಷದ ಒಂದು ಬ್ರೇಕ್ ಒಂದೆರಡು ನಿಮಿಷ ಮೀರಿದರೆ ಮುಂದಿನ ಬ್ರೇಕ್‌ಗೆ ಕತ್ತರಿ ಖಾಯಂ. ಆ ಹಾಲುಣಿಸುವ ತಾಯಿಯ ಅದೆಷ್ಟೋ ಸಂಕಷ್ಟಗಳು ಅಲ್ಲಿ ಹೇಳಿಕೊಳ್ಳಲಾಗದ ಪರಿಸ್ಥಿತಿ, ಕೊಟ್ಟ ಬ್ರೇಕ್‌ನಲ್ಲಿ ಇತರರು ಕೊರೆವ ಚಳಿಗೆ ಕಾಫಿ-ಟೀ ಮೊರೆ ಹೊಕ್ಕರೆ ಈಕೆ ಓಡುವುದು ಟಾಯ್ಲೆಟ್‌ನತ್ತ, ತನ್ನ ಕಂದಮ್ಮನ ಒಡಲು ಸೇರಬೇಕಾದ ಹಾಲನ್ನು ಬಚ್ಚಲಿಗೆ ಎರಚುವಾಗ ಆ ತಾಯಿಯ ಅನಿವಾರ್ಯತೆಯ ಆಕ್ರಂದನ ಕೇಳುವವರಾರು? ನೋಡುವ ಸಮಾಜ ಮಾತಾನಾಡುವುದೇ ಬೇರೆ, ನೈಜ ಸ್ಥಿತಿಯೇ ಬೇರೆ.
ಇಂತಹ ಅನಿವಾರ್ಯತೆಯ ಆಕ್ರಂದನಗಳು ಅವೆಷ್ಟೋ ಆದರೆ ಆ ಆಕ್ರಂದನಗಳನ್ನು ಮೀರಿ ಬೆಳೆಯುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಅಂತಹ ಹೆಣ್ಣನ್ನು ಗೌರವಿಸುವುದು, ಅವಳಿಗೊಂದು ಸುರಕ್ಷಿತ ಸಮಾಜ ನಿರ್ಮಿಸುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿಯಲ್ಲವೇ? ಉತ್ತರ ದೊರೆಯುವವರೆಗೂ ಇದು ಪ್ರಶ್ನಾರ್ಥಕವೇ ಆಗಿ ಉಳಿಯಲಿದೆ.

RELATED ARTICLES
- Advertisment -
Google search engine

Most Popular

Recent Comments