ಅ.೨೩ ರಂದು ವಿಜ್ಹನ್-೨೦೨೫ ಕಾರ್ಯಾಗಾರ : ಡಿಸಿ

ಶಿವಮೊಗ್ಗ : ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಳ್ಳ ಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚಿಂತನ ಮಂಥನ ನಡೆಸುವ ವಿಜ್ಹನ್-೨೦೨೫ ಕಾರ್ಯಾಗಾರ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಅ.೨೩ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ತಿಳಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಜ್ಹನ್-೨೦೨೫ ಕಾರ್ಯಗಾರ ಸಿದ್ಧತೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒಟ್ಟು ೧೩ವಲಯಗಳನ್ನು ಗುರುತಿಸಲಾಗಿದ್ದು, ಆಯಾ ಕ್ಷೇತ್ರದ ತಜ್ಞರು, ಚಿಂತಕರು, ಫಲಾನುಭವಿ ಗಳನ್ನು ಆಹ್ವಾನಿಸಿ ಸಂವಾದ ನಡೆಸಲಾಗುವುದು. ಈ ಸಂವಾದದ ಆಧಾರದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ವಿಜ್ಹನ್-೨೦೨೫ ಡಾಕ್ಯುಮೆಂಟ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.
೧೩ಕ್ಷೇತ್ರಗಳನ್ನು ಐದು ವಿಭಾಗಗಳಾಗಿ ವಿಂಗಡಿಸಿ ಸಂವಾದಕ್ಕೆ ಅವಕಾಶ ನೀಡಲಾ ಗುವುದು. ಪ್ರತಿ ವಿಭಾಗದಲ್ಲಿ ೨೫-೩೦ರಷ್ಟು ಆಹ್ವಾನಿತರು ಭಾಗವಹಿಸಿ ತಮ್ಮ ಅಭಿಪ್ರಾಯ ಸಲಹೆ ಸೂಚನೆಗಳನ್ನು ಮಂಡಿಸುವರು. ಕೊನೆಯಲ್ಲಿ ತಜ್ಞರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಆಯಾ ಕ್ಷೇತ್ರದ ವಿಜ್ಹನ್-೨೦೨೫ ಕುರಿತು ವಿಚಾರವನ್ನು ಮಂಡಿಸಲಾಗುವುದು ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ದೃಷ್ಟಿಕೋನ ಹೊಂದಿರುವ, ಆಯಾ ಕ್ಷೇತ್ರದಲ್ಲಿ ವಿದ್ವತ್ ಜ್ಞಾನ ಹೊಂದಿರುವ ತಜ್ಞರನ್ನು ಸಂವಾದಕ್ಕೆ ಆಹ್ವಾನಿಸಬೇಕು. ಇದೇ ರೀತಿ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಪ್ರಗತಿಪರ ರೈತರು, ಶಿಕ್ಷಣ ತಜ್ಞರು, ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು, ವಿದ್ಯಾರ್ಥಿಗಳನ್ನು ಸಹ ಸಂವಾದಕ್ಕೆ ಆಹ್ವಾನಿಸಬಹುದಾಗಿದೆ. ಎಲ್ಲರ ಸಲಹೆ ಸೂಚನೆಗಳನ್ನು ವಿಡಿಯೊಗ್ರಫಿ ಮಾಡಿ ಕ್ರೋಡೀಕರಿಸಲಾಗುವುದು. ಕಾರ್ಯಾಗಾರಕ್ಕೆ ಪೂರ್ವಭಾವಿಯಾಗಿ ಚರ್ಚಿಸಬಹುದಾದ ವಿಷಯಗಳ ಬಗ್ಗೆ ಸಂವಾದದಲ್ಲಿ ಭಾಗವಹಿಸು ವವರಿಗೆ ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಅನುಷ್ಟಾನಗೊಳಿಸಬಹುದಾದ ಯೋಜನೆಗಳ ರೂಪುರೇಶೆ ಕಾರ್ಯಾಗಾರದ ಮೂಲಕ ಮೂಡಿಬರಬೇಕು. ಪ್ರಾಯೋಗಿಕವಾದ ಮತ್ತು ವಾಸ್ತವಕ್ಕೆ ಹತ್ತಿರವಾದ ಸಲಹೆ ಸೂಚನೆಗಳು ಇರಬೇಕು. ಜಿಲ್ಲೆಯ ಭೌಗೋಳಿಕ, ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುವಂತಿರಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಈ ರೀತಿಯ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಜಿಲ್ಲೆಗಳ ಅಭಿವೃದ್ಧಿ ಕುರಿತು ತಳಮಟ್ಟದಿಂದ ರೂಪುರೇಶೆ ಸಿದ್ಧಪಡಿಸುವ ಉದ್ದೇಶದಿಂದ ಸರ್ಕಾರ ಕಾರ್ಯಾಗಾರವನ್ನು ಎಲ್ಲಾ ಜಿಲ್ಲೆಯಲ್ಲಿ ಆಯೋಜಿಸುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

SHARE
Previous article13 OCT 2017
Next article14 OCT 2017

LEAVE A REPLY

Please enter your comment!
Please enter your name here