ಶಿಹಿಮೊಗ್ಗೆಯ ಸಿಹಿ ಯಾರಿಗೆ ?: ಲೋಕಸಭೆಯ ಫಲಿತಾಂಶಕ್ಕೆ ಕೌಂಟ್ಡೌನ್‌

ಮಲೆನಾಡಿನ ಜಿಲ್ಲೆಯ ಜನರ ಚಿತ್ತ, ಶಿವಮೊಗ್ಗದ  ಸಹ್ಯಾದ್ರಿ ಕಾಲೇಜಿನತ್ತ

ಶಿವಮೊಗ್ಗ : ಬಹು ದಿನದ ಕುತೂಹಲಕ್ಕೆ ತೆರೆ ಬೀಳುವ ಕಾಲ ಸನಿಹಿತವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ವಿಜಯ ಮಾಲೆಗೆ ಯಾರಿಗೆನ್ನುವ ಸಂಗತಿ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಬಹಿರಂಗ ಆಗಲಿದೆ. ನಾಳೆ ( ಮಂಗಳವಾರ) ಬೆಳಗ್ಗೆ ೮ ಗಂಟೆಯಿಂದ  ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಶುರುವಾಗಲಿದೆ.  ಅದಕ್ಕಂತಲೇ ಜಿಲ್ಲಾಡಳಿತ ಭಾರೀ ಸಕಲ ಸಿದ್ದತೆ ಮಾಡಿಕೊಂಡಿದೆ.  ಆ ಮೂಲಕ ಮತದಾರರ ಕುತೂಹಲ, ರಾಜಕೀಯ ಪಕ್ಷಗಳ  ಕಾರ್ಯಕರ್ತರ ಕಾತರಕ್ಕೆ ಇಷ್ಟರಲ್ಲಿಯೇ ತೆರೆ ಬೀಳಲಿದೆ.

ಮೇ  ೭ ರಂದು  ನಡೆದಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ  ಚುನಾವಣೆ ಕಣದಲ್ಲಿ 23 ಅಭ್ಯರ್ಥಿಗಳಿದ್ದರು. ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿ ಹಾಗೂ  ಹಾಲಿ ಸಂಸದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ನ  ಗೀತಾ ಶಿವರಾಜಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು. ಮತದಾನ ಪೂರ್ವದಲ್ಲಿ ತ್ರಿಕೋನ ಹಣಾಹಣಿ ಲೆಕ್ಕಾಚಾರವಿತ್ತು. ಒಂದಷ್ಟು ದಿನ ಬಿಜೆಪಿ-ಕಾಂಗ್ರೆಸ್‌ ನಡುವೆಯೇ ಜಿದ್ದಾಜಿದ್ದಿ ಎನ್ನುತ್ತಿದ್ದ ವಾತಾವರಣವೇ ಆಮೇಲೆ ತ್ರಿಕೋನ ಕದನದ ಸುಳಿವುದು ನೀಡಿತು. ಆದರೂ,ಮತದಾನದ ನಂತರ  ಅದು ಎರಡೇ ರಾಷ್ಟ್ರೀಯ ಪಕ್ಷಗಳ ಸಮರವಾಗಿ ಕಾಣಿಸಿದ್ದು ಬಹಿರಂಗೊಂಡಿತು.ಈಗ ಇವರಲ್ಲಿ  ಮತದಾರರ ಒಲವು ಯಾರಿಗಿದೆ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಲಿದೆ.

ಈಗಾಗಲೇ ಮತದಾನೋತ್ತರ ಸಮೀಕ್ಷೆಗಳು  ಶಿವಮೊಗ್ಗಲೋಕಸಭಾ ಕ್ಷೇತ್ರದಲ್ಲಿ ವಿಜಯದ ಮಾಲೆ ಯಾರಿಗೆ ಎನ್ನುವುದರ ಕುರಿತು ಅವರದ್ದೇಯಾದ  ಭವಿಷ್ಯ ನುಡಿದಿವೆ. ಕಾಂಗ್ರೆಸ್‌ ನಾಯಕರು ಇದೆಲ್ಲ ಬಿಜೆಪಿ ಮಾಡಿಸಿದ ಸಮೀಕ್ಷೆಗಳು ಎಂದು ಟೀಕೆ ಮಾಡಿದ್ದಾರೆ.  ಇಷ್ಟಾಗಿಯೂ  ಜನರ ಲೆಕ್ಕಚಾರ ಏನೀದೆ ಅನ್ನೋದು ಮತಗಟ್ಟೆಯಲ್ಲಿ ಭದ್ರವಾಗಿದೆ. ಚುನಾವಣೆ ಅಂದ್ಮೇಲೆ ಒಬ್ಬರು ಗೆಲ್ಲಬೇಕು, ಉಳಿದವರು ಸೋಲಬೇಕು, ಅಂದ್ರೆ ಇಲ್ಲಿ ಸೋಲು-ಗೆಲುವು ಸಹಜ.  ಆದೂ ಗೆಲುವನ್ನು ಎಲ್ಲರೂ ಅತೀವ ಪ್ರತಿಷ್ಟೆಯ ಪ್ರಶ್ನೆಯಾಗಿಯೇ ತೆಗೆದುಕೊಂಡು ಚುನಾವಣೆ ಎದುರಿಸಿದ್ದಾರೆ. ಯಾಕೆಂದರೆ ಇಲ್ಲಿನ ಅಭ್ಯರ್ಥಿಗಳ ಸೋಲು – ಗೆಲುವು, ಎರಡು ಪಕ್ಷಗಳ ಪ್ರಮುಖ ನಾಯಕರುಗಳ ಭವಿಷ್ಯದ ರಾಜಕೀಯದ ಮೇಲೆ ಪರಿಣಾಮ ಬೀರುವುದು ನಿಶ್ಚಿತ . ಹಾಗಾಗಿ  ಈ ಚುನಾವಣೆ ದೊಡ್ಡ ಯುದ್ದದಂತೆಯೇ ನಡೆದು ಹೋಗಿದೆ.

ಬಿಜೆಪಿಗೆ  ಗೆಲುವು ಅತೀ ಮುಖ್ಯ.,ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬವು  ಶಿವಮೊಗ್ಗ ಕ್ಷೇತ್ರದ ಗೆಲುವನ್ನು ತುಂಬಾನೆ ಪ್ರತಿಷ್ಟೆಯಾಗಿ ತೆಗೆದುಕೊಂಡಿದೆ. ಇಲ್ಲಿನ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಮಾಜಿ ಸಿಎಂ  ಬಿ.ಎಸ್.‌ ಯಡಿಯೂರಪ್ಪ ಪುತ್ರ ಎನ್ನುವುದರ ಜತೆಗೆ   ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಹೋದರ ಎನ್ನವುದು ಕೂಡ ಇದಕ್ಕೆ ಕಾರಣ. ಇದರ ಜತೆಗೆ ಅವರ ಕುಟುಂಬದ ವಿರುದ್ದವೇ ಮುನಿಸಿಕೊಂಡು ಪಕ್ಷದ ವಿರುದ್ದವೇ ಬಂಡಾಯ ಸಾರುವ ಮೂಲಕ ʼ ಅಪ್ಪ -ಮಕ್ಕಳನ್ನು ಮುಗಿಸುತ್ತೇನೆʼ ಎಂದು ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕೂಡ ಇದಕ್ಕೆ ಕಾರಣ.

 ಇನ್ನು ಕಾಂಗ್ರೆಸ್‌ ಪಕ್ಷಕ್ಕೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಗೆಲುವು ಪ್ರತಿಷ್ಟೆಯ ಪ್ರಶ್ನೆಯೇ ಆಗಿದೆ.  ಜಿಲ್ಲಾ ಉಸ್ತುವಾರಿ ಸಚಿವ ಎಸ್.‌ ಮಧು ಬಂಗಾರಪ್ಪ ಅವರು ತಮ್ಮ ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ತೀವ್ರ ಒತ್ತಡದ ಮೂಲಕವೇ ಇಲ್ಲಿಗೆ ಕರೆತಂದು ಅಭ್ಯರ್ಥಿಯಾಗಿಸಿದ್ದು ಒಂದೆಡೆಯಾದರೆ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್.‌ ಮಧು ಬಂಗಾರಪ್ಪ ಅವರಿಗೆ ತಮ್ಮ ವರ್ಚಸ್ಸು ಉಳಿಸಿಕೊಳ್ಳುವುದಕ್ಕೂ ಇಲ್ಲಿ ಕಾಂಗ್ರೆಸ್‌ ಗೆಲ್ಲಬೇಕಿದೆ.  ಒಂದು ವೇಳೆ ಕಾಂಗ್ರೆಸ್‌ ಗೆದ್ದರೆ,   ಪಕ್ಷದಲ್ಲಿ ಮಧು ಬಂಗಾರಪ್ಪ  ಅವರ ವರ್ಚಸ್ಸು,  ಶಿವಮೊಗ್ಗ ಕಾಂಗ್ರೆಸ್ ಪಾಳೇಯದಲ್ಲಿನ ಅವರ ಹಿಡಿತ ಮತ್ತಷ್ಟು ಬಿಗಿಯಾಗಲಿದೆ. ಹಾಗೆಯೇ ಸಚಿವ ಸ್ಥಾನವೂ ಮುಂದುವರಿಯಲಿದೆ.

 ಒಂದು ವೇಳೆ ಪರಾಭವಗೊಂಡರೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ. ಹಾಗೆಯೇ ಜಿಲ್ಲೆಯ ಕಾಂಗ್ರೆಸ್ ಪಾಳೇಯದಲ್ಲಿನ ಅವರ ಹಿಡಿತದ ಮೇಲೆಯೂ ಪರಿಣಾಮ ಬೀರುವ ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿದೆ. ಅದೇ ಕಾರಣಕ್ಕೆ ಅವರು ಈ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎನ್ನುವ ತರಹ ಎದುರಿಸಿದ್ದಾರೆ. ಶಿವರಾಜಕುಮಾರ್ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ.  ಆ ಕಾರಣಕ್ಕೆ  ಗೀತಾ ಶಿವರಾಜಕುಮಾರ್ ಗೆಲುವು  ಜಿಲ್ಲಾ ಕಾಂಗ್ರೆಸ್‌ ಸಮಿತಿಗಿಂತ, ಸಚಿವ ಎಸ್.‌ ಮಧು ಬಂಗಾರಪ್ಪ ಅವರಿಗೆ ಇಲ್ಲಿನ ಗೆಲುವು ಪ್ರತಿಷ್ಟೆಯೇ ಆಗಿರುವುದು ಗಮನಾರ್ಹ.

ಪಕ್ಷೇತರ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಅವರಿಗೂ ಈ ಚುನಾವಣೆ ಪ್ರತಿಷ್ಟೆಯೇ ಆಗಿದೆ. ಹಾವೇರಿ ಯಲ್ಲಿ ತಮ್ಮ ಪುತ್ರನಿಗೆ ಪಕ್ಷ ಟಿಕೆಟ್‌ ನೀಡಲಿಲ್ಲ ಎನ್ನುವ ಕಾರಣಕ್ಕೆ ಬೇಸರಿಸಿಕೊಂಡು ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರವಾಗಿ ಕಣಕ್ಕಳಿದಿದ್ದ ಈಶ್ವರಪ್ಪ ಅವರು, ಅಪ್ಪ ಮಕ್ಕಳನ್ನು ಸೋಲಿಸವುದೇ ತಮ್ಮ ಗುರಿ ಅಂತಲೇಚುನಾವಣೆ ಎದುರಿಸಿದ್ದರು. ರಾಷ್ಟ್ರ ಭಕ್ತ ಬಳಗವನ್ನು ಕಟ್ಟುಕೊಂಡು ಕ್ಷೇತ್ರ ದ ಉದ್ದಕ್ಕೂ ತಿರುಗಾಡಿದ್ದರು. ಹಾಗಾಗಿ ಅವರು ತಾವೇ ಗೆಲ್ಲುವುದು ಎನ್ನುವ ಬಹುದೊಡ್ಡ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ತಮ್ಮ ಗೆಲುವು ಹಿಂದೂಗಳ ಗೆಲುವು ಅಂತಲೇ ಹೇಳಿದ್ದರು. ಆ ಕಾರಣಕ್ಕೆ ಅವರಿಗೆ ಈ ಗೆಲುವು ಪ್ರತಿಷ್ಟೆಯೇ ಆಗಿದೆ.

ಇನ್ನು ಕಾಂಗ್ರೆಸ್‌, ಬಿಜೆಪಿ ಸೇರಿ ಕಣದಲ್ಲಿದ್ದವರೆಲ್ಲರೂ ಜನರ ಸಮಸ್ಯೆಗಳು, ಅಭಿವೃದ್ದಿ ವಿಚಾರಗಳಿಗಿಂತ ವೈಯಕ್ತಿಕ ನೆಲೆಗಟ್ಟಿನ ಮೇಲೆ ಮತಯಾಚನೆ ಮಾಡಿದ್ದಾರೆ. ಬಿಜೆಪ ಅಭ್ಯರ್ಥಿ, ಪ್ರಧಾನಿ ಮೋದಿ ಮತ್ತು ಅಭಿವೃದ್ದಿಯ ಸಾಧನೆಗಳನ್ನು ಮುಂದಿಟ್ಟು ಕೊಂಡು ಜನರ ಬಳಿಗೆ ಹೋಗಿ ಮತ ಪಡೆಯುವ ಯತ್ನ ನಡೆಸಿದ್ದರೆ, ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಗ್ಯಾರೆಂಟಿ ಯೋಜನೆಗಳನ್ನೇ ಹೆಚ್ಚಾಗಿ ನಂಬಿಕೊಂಡು ಚುನಾವಣೆ ಎದುರಿಸಿದೆ. ಇನ್ನು ಪಕ್ಷೇತರ ಅಭ್ಯರ್ಥಿ ಕೆ.ಎಸ್.‌ ಈಶ್ವರಪ್ಪ ಬಿಜೆಪಿಯನ್ನು ಕುಟುಂಬದಿಂದ ಮುಕ್ತ ಮಾಡುತ್ತೇನೆನ್ನುವುದರ ಜತೆಗೆ, ಹಿಂದೂಗಳ ರಕ್ಷಣೆ ಹೆಸರಲ್ಲಿ ಮತಯಾಚನೆ ಮಾಡಿದ್ದಾರೆ. ಅಂತಿಮವಾಗಿ ಜನರು ಯಾರನ್ನು ಬೆಂಬಲಿಸಿದ್ದಾರೆನ್ನುವುದಕ್ಕೆ ಈಗ ಕ್ಷಣಗಣನೆ ಎದುರಾಗಿದೆ. ಅದು ಗೊತ್ತಾಗುವುದಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ.
……………………………
ಬಿಜೆಪಿಗಿರುವ ಕಾನ್ಪೆಡೆನ್ಸ್‌
೧  ಪ್ರಧಾನಿ ಮೋದಿ ಅವರ ವರ್ಚಸ್ಸು
೨  ಹತ್ತು ವರ್ಷಗಳ ಕಾಲದ ಅಭಿವೃದ್ದಿ ಯೋಜನೆಗಳು
೩ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯಲ್ಲಿ ಮಾಡಿದ ಅಭಿವೃದ್ದಿ ಯೋಜನೆಗಳು
೪ ಮೋದಿ ಅವರ ಬಗೆಗೆ ಜನರಲ್ಲಿರುವ ಅಭಿಮಾನ
೫ ಸಂಸದ ಬಿ.ವೈ. ರಾಘವೇಂದ್ರ ಅವರ ಜನ ಸಂಪರ್ಕ

……………………………
ಕಾಂಗ್ರೆಸ್‌ ಗ್ಯಾರೆಂಟಿ ಬಲ
೧  ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು.
೨ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದು.
೩ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ನಿಲುವು
೪ ʼನಮ್ಮ ಬೂತು ನಮ್ಮ ಜವಾಬ್ದಾರಿʼ ಯಡಿ ನಿಷ್ಟೆಯಿಂದ ಕೆಲಸ ಮಾಡಿದ್ದು.
೫ ಕಾಂಗ್ರೆಸ್‌ ಅಧಿಕಾರದಲ್ಲಿರುವ ಪಕ್ಷ ಎನ್ನುವ ನಂಬಿಕೆ
…………………………..

ಈಶ್ವರಪ್ಪ ನಂಬಿಕೊಂಡಿದ್ದು
೧ ಬಿಜೆಪಿ ಪಕ್ಷವೂ ಕುಟುಂಬ ರಾಜಕಾರಣಕ್ಕೆ ಸಿಲುಕಿತ್ತೆನ್ನುವುದು
೨ ಹಿರಿಯ ಮುಖಂಡನಿಗೆ ಬಿಜೆಪಿ ಅನ್ಯಾಯ ಮಾಡಿತೆನ್ನುವುದು
೩ ಹಿಂದೂ ರಕ್ಷಕರಿಗೆ ಬಿಜೆಪಿಯಲ್ಲೂ ಗೌರವ ಇಲ್ಲ ಎನ್ನುವುದು
೪  ಈಶ್ವರಪ್ಪ ಜನರ ಕೈಗೆ ಸುಲಭವಾಗಿ ಸಿಗುತ್ತಾರೆನ್ನುವುದು.
೫  ಈಶ್ವರಪ್ಪ ಅವರಿಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನ