ಶಿವಮೊಗ್ಗ : ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಆರೋಗ್ಯಕರ ತೂಕದೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರುವುದು ಮತ್ತು ಸದೃಢರಾಗಿರುವುದು ಹೇಗೆ ಅವಶ್ಯಕ ಎನ್ನುವ ಹಿನ್ನೆಲೆಯಲ್ಲಿ ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈಧಾನದಲ್ಲಿ ಭಾನುವಾರ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರಕ್ಕೆ ಜೂನ್೨೩ ರಂದು ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಚಾಲನೆ ನೀಡಿದರು. ಹಿರಿಯ ಯೋಗ ಶಿಕ್ಷಕ ಅನಂತ ಗುರೂಜಿ, ಯೋಗ ವಿಸ್ಮಯ ಟ್ರಸ್ಟ್ ಕುಮುದ, ಯೋಗ ಶಿಕ್ಷಕ ಮೋಹನ್ ಕುಮಾರ್ ಎಸ್. ಡಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಯೋಗಾಭ್ಯಾಸ ನೀಡಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಡವಾಗಿಟ್ಟುಕೊಳ್ಳಲು ಯೋಗ, ಧ್ಯಾನ ಮತ್ತು ವ್ಯಾಯಾಮ ಸಹಕಾರಿಯಾಗಲಿದ್ದು, ಈ ಕಾರ್ಯಾಗಾರದಲ್ಲಿ ಹೇಳಿಕೊಟ್ಟಂತಹ ಆರೋಗ್ಯಕರ ಹವ್ಯಾಸಗಳನ್ನುಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ಶೈಲಿಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗಿರುತ್ತದೆ ಎಂದು ಮಾಹಿತಿ ನೀಡಿಲಾಯಿತು.
ದಿನ ನಿತ್ಯದ ಜೀವನದಲ್ಲಿ ನಿಯಮಿತ ಯೋಗ, ಧ್ಯಾನ, ವ್ಯಾಯಾಮ, ಕ್ರೀಡೆ, ನಡಿಗೆ, ಓಟ ಮತ್ತು ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡಾಗ ಮಾತ್ರ *ಆರೋಗ್ಯದಿಂದಿರಲು ಸಾಧ್ಯವಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಿ ದಿನದಲ್ಲಿ ಒಂದು ಗಂಟೆಯಾದರೂ ಅದಕ್ಕಾಗಿ ಮುಡಿಪಿಟ್ಟು ಆರೋಗ್ಯ ಸಮಸ್ಯೆಗಳಿಂದ ದೂರ ಇರಿ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಪೊಲೀಸ್ ಉಪಾಧಿಕ್ಷಕರಾದ ಕೃಷ್ಣ ಮೂರ್ತಿ, ಸುರೇಶ್ ಎಂ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.