Tuesday, November 5, 2024
Google search engine
Homeಇ-ಪತ್ರಿಕೆವಯನಾಡ್ ಭೂಕುಸಿತ: ಮೃತರ ಸಂಖ್ಯೆ 89ಕ್ಕೆ ಏರಿಕೆ; ಕೊಚ್ಚಿ ಹೋದ 200 ಮನೆಗಳು

ವಯನಾಡ್ ಭೂಕುಸಿತ: ಮೃತರ ಸಂಖ್ಯೆ 89ಕ್ಕೆ ಏರಿಕೆ; ಕೊಚ್ಚಿ ಹೋದ 200 ಮನೆಗಳು

ತಿರುವನಂತಪುರಂ: ಕೇರಳದ ವಯನಾಡಿನ ಮುಂಡಕೈ ಮತ್ತು ಚೂರಲ್ಮಲ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಗುಡ್ಡ ಕುಸಿತದಲ್ಲಿ 89ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ನಿಲಂಬೂರ್ ಪೋತುಕಲ್ ಪ್ರದೇಶದ ನದಿಯಲ್ಲಿನ ವಿವಿಧ ಸ್ಥಳಗಳಲ್ಲಿ ಮೃತದೇಹಗಳು ಪತ್ತೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂಡಕೈ ಮತ್ತು ಚೂರಲ್ಮಲ ಪ್ರದೇಶದಲ್ಲಿ ಮುಂಜಾನೆ 1:30 ಮತ್ತು 4 ಗಂಟೆಗೆ ಎರಡು ಬಾರಿ ಗುಡ್ಡ ಕುಸಿತ ಸಂಭವಿಸಿದೆ. 200ಕ್ಕೂ ಹೆಚ್ಚು ಮನೆಗಳು ಈ ದುರಂತದಿಂದಾಗಿ ಕೊಚ್ಚಿ ಹೋಗಿವೆ.

ವಯನಾಡ್ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಲ ಮತ್ತು ನೂಲ್ಪುಳದ ಕುಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಮಣ್ಣು, ಮರಗಳು ಮತ್ತು ಬಂಡೆಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ತಮ್ಮ ಪ್ರೀತಿಪಾತ್ರರ ರಕ್ಷಣೆಗಾಗಿ ಜನರ ಆಕ್ರಂದನವು ಮುಗಿಲುಮುಟ್ಟಿದೆ.

ಮುಂಡಕ್ಕೈ ಪ್ರದೇಶದಲ್ಲಿ ಸೇತುವೆ ಕೊಚ್ಚಿಹೋಗಿದ್ದು ಈವರೆಗೆ ಎಷ್ಟು ಮಂದಿಗೆ ಹಾನಿಯಾಗಿದೆ ಎಂಬ ಬಗ್ಗೆ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿಲ್ಲ. 90 ಕಿಮೀ ದೂರದಲ್ಲಿರುವ ನೆರೆಯ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಪ್ರದೇಶದಲ್ಲಿ ಚಾಲಿಯಾರ್ ನದಿಯ ಕೆಳಭಾಗದಲ್ಲಿ ಹಲವಾರು ಮೃತದೇಹಗಳನ್ನು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್ ಸಂಸದ ಕೆ.ಸುರೇಶ್ ಸುದ್ದಿಗಾರರೊಂದಿಗೆ ಮಾತನಾಡಿ, “ವಯನಾಡಿನಲ್ಲಿ ಪರಿಸ್ಥಿತಿ ಕಲ್ಪನೆಗೂ ಮೀರಿದೆ. ಮೊದಲ ಮಾಹಿತಿಯ ಪ್ರಕಾರ, 11 ಜನರು ಸಾವನ್ನಪ್ಪಿದ್ದಾರೆ. ಆದರೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಸೇತುವೆ ಕುಸಿದಿದೆ ಮತ್ತು ನೀರು ಹರಿಯುತ್ತಿದೆ. ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಒಂದು ಗ್ರಾಮವು ಸಂಪೂರ್ಣವಾಗಿ ಪ್ರತ್ಯೇಕವಾಗಿ, ಕೊಚ್ಚಿಹೋಗಿದೆ. ಕೇರಳ ಸರ್ಕಾರ ಈಗಾಗಲೇ ಪರಿಹಾರ ಕ್ರಮಗಳನ್ನು ಪ್ರಾರಂಭಿಸಿದೆ. ಎನ್ಡಿಆರ್ಎಫ್ ಮತ್ತು ವಾಯುಪಡೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ” ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ ಪಿಎಂಎನ್ಆರ್ಎಫ್ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ಗಾಯಾಳುಗಳಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿರುವ ಸುದ್ದಿ ಕೇಳಿ ಎದೆ ನಲುಗಿತು. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments