ಬೆಂಗಳೂರು : ಒಂದು ವರ್ಷಕ್ಕೆ ಮುನ್ನವೇ ರಾಜ್ಯದಲ್ಲಿ ಚುನಾವಣೆ ಸಂಬಂಧ ಮೂರು ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಟಿಕೆಟ್ ಹಂಚಿಕೆ ಸಂಬಂಧ ಒತ್ತಡ ನಿವಾರಿಸಿಕೊಳ್ಳಲು ಉಪಾಯ ಕಂಡುಕೊಂಡಿದ್ದು, ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲಾಗುವುದೆಂಬ ಸಂದೇಶ ರವಾನಿಸುವ ಮೂಲಕ ಒಟ್ಟಿಗೆ ಭಿನ್ನಮತ ಒತ್ತಡ ನಿವಾರಣೆಯ ತಂತ್ರ ರೂಪಿಸಿಕೊಂಡಿರುವುದು ಒಂದು ರೀತಿಯಲ್ಲಿ ರಕ್ಷಣಾತ್ಮಕ ಪ್ರಕ್ರಿಯೆ ಎನ್ನಬುದು.
ಮೈಸೂರಿನಲ್ಲಿ ಎರಡು ದಿನಗಳಕಾಲ ನಡೆದ ಬಿಜೆಪಿ ಕಾರ‍್ಯ ಕಾರೀಣಿಯ ಅಂತ್ಯದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟಿಕೆಟ್ ಹಂಚಿಕೆ ತಮ್ಮದಲ್ಲ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.
ಈ ಮೂಲಕ ತಮ್ಮ ಮೇಲಿನ ಒತ್ತಡ ನಿವಾರಿಸಿಕೊಳ್ಳುವ ಜೊತೆಗೆ ಭಿನ್ನಮತ ಹೊಂದಿದವರಿಗೂ ಅವರ ಹೇಳಿಕೆ ತೃಪ್ತಿ ತಂದಿರಬಹುದು.
ಅಷ್ಟೇ ಅಲ್ಲದೆ ಯಾರೂ ಕೂಡಾ ತಾವು ಅಭ್ಯರ್ಥಿ ಎಂದು ಕ್ಷೇತ್ರಗಳಲ್ಲಿ ಬಿಂಬಿಸಿಕೊಳ್ಳದೆ ಕ್ಷೇತ್ರದಲ್ಲಿ ಕೆಲಸಮಾಡಿ ೩-೪ ಸಂಭವನೀಯರ ಪಟ್ಟಿ ತಯಾರಿಸಿ ಹೈಕಮಾಂಡ್‌ಗೆ ರವಾನಿಸಲಾಗುತ್ತದೆ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಯನ್ನು ನಿರ್ಧರಿಸುತ್ತದೆ ಎಂದಿದ್ದಾರೆ.
ಬಹುಮುಖ್ಯವಾಗಿ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳು ಕಾರ‍್ಯಕರ್ತರ ಜಪ ಮಾಡತೊಡಗಿವೆ. ಕಾಂಗ್ರೆಸ್, ಜೆಡಿಎಸ್‌ಗೆ ಹೋಲಿಸಿದರೆ ಬಿಜೆಪಿ ಬೇರು ಮಟ್ಟದ (ಕೇಡರ್) ಕಾರ‍್ಯಕರ್ತರನ್ನು ಹೊಂದಿರುವ ಪಕ್ಷ, ಈ ಕಾರಣಕ್ಕಾಗಿಯೇ ಕೇಡರ್ ಮಂದಿ ಅರ್ಥಾತ್ ಮೂಲ ಬಿಜೆಪಿಗರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಯಡಿಯೂರಪ್ಪ ಅವರ ವಿರುದ್ಧ ದೂರುತ್ತಿದ್ದರು.
ಇದೀಗ ಮೈಸೂರಿನ ಕಾರ‍್ಯಕಾರಿಣಿಯಲ್ಲಿ ವರಿಷ್ಠರ ಸಂದೇಶದಂತೆ ಮೂಲ ಕಾರ‍್ಯಕರ್ತರನ್ನು ಜೊತೆಯಲ್ಲಿ ಕರೆದೊಯ್ಯುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ.
ಅಂತೆಯೇ ಈಶ್ವರಪ್ಪ ಪದೇ ಪದೇ ರಾಯಣ್ಣ ಬ್ರಿಗೇಡ್ ಮಂತ್ರ ಜಪಿಸುವುದಕ್ಕೆ ಕಡಿವಾಣ ಹಾಕಲಾಗಿದೆ. ಅಲ್ಲದೆ ೧೫೦ ಮಿಷನ್‌ನತ್ತ ಚಿತ್ತ ಹರಿಸಲಿದ್ದು, ಕಾರ‍್ಯಕರ್ತರು ಸಮರ ಸನ್ನದ್ಧರಾಗಲು ಸೂಚಿಸಲಾಗಿದೆ.
ಇನ್ನೊಂದೆಡೆ ಆಡಳಿತರೂಢ ಕಾಂಗ್ರೆಸ್ ಶತಮಾನಕ್ಕೂ ಅಧಿಕ ಇತಿಹಾಸವುಳ್ಳ ಪಕ್ಷವಾರೂ ಬಿಜೆಪಿ ಮಾದರಿ ಅಕ್ರಮಣಶೀಲ ಕಾರ‍್ಯಕರ್ತರಿಲ್ಲ ಎನ್ನಬಹುದು. ಬಿಜೆಪಿಯಲ್ಲಿ ಬಲಾಢ್ಯ ಹಾಗೂ ಸುಸಜ್ಜಿತ ಕಾರ‍್ಯ ಪಡೆ ಇದ್ದುದರಿಂದಲೇ ಮೋದಿಯವರನ್ನು ಅಧಿಕಾರಕ್ಕೆ ತರುವ ಕಾರ‍್ಯಯೋಜನೆ ಸಾಧ್ಯವಾಯಿತು.
ಕಾಂಗ್ರೆಸ್ ಕಾರ‍್ಯಕರ್ತರಿಗೆ ಬರವಿಲ್ಲವಾದರೂ ಅವರೆಲ್ಲ ಬಿಜೆಪಿ ರೀತಿ ಶಿಸ್ತಿಗೊಳಪಡುವುದಿಲ್ಲ. ಅಲ್ಲದೆ ಸಮರೋಪಾದಿಯಲ್ಲಿ ಕಾರ‍್ಯನಿರ್ವಹಿಸುವ ತಂತ್ರಗಾರಿಕೆಯಾಗಲೀ ಸರ್ಕಾರದ ಜನಪರ ಕಾರ‍್ಯಕ್ರಮಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಕಾರ‍್ಯಪಡೆ ಇಲ್ಲ.
ಆದರೂ ಕಾಂಗ್ರೆಸ್ ಪಕ್ಷ ಹೆಸರಿನ ಅಲೆ ಹಾಗೂ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡು ಈ ಹಿಂದೆ ಅಭ್ಯರ್ಥಿಗಳನ್ನು ಹೂಡಲಾಗುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ನಲ್ಲೂ ಆಂತರಿಕ ಸಮೀಕ್ಷೆ ಆರಂಭಿಸಲಾಗಿದ್ದು, ಕ್ರಿಮಿನಲ್ ಹಿನ್ನಲೆ ಇಲ್ಲದ ಜನಪರಕಾಳಜಿ ಹೊಂದಿರುವ ಹಾಗೂ ಜನರ ವಿಶ್ವಾಸ ಹೊಂದಿರುವ, ಮತ ಸೆಳೆಯುವ ಅರ್ಹತೆ ಅಧರಿಸಿ ಟಿಕೆಟ್ ನೀಡಲು ವಿಶಿಷ್ಠ ಕಾರ‍್ಯಯೋಜನೆ ರೂಪಿಸುತ್ತಿರುವುದು ಕಾಂಗ್ರೆಸ್ ಸಂಸ್ಕೃತಿಗೆ ವಿರುದ್ಧವಾದರೂ ಪಕ್ಷದಲ್ಲಿ ಆರೋಗ್ಯಕರ ಬೆಳವಣಿಗೆಯಾಗುತ್ತಿದೆ.
ಜೊತೆಗೆ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕಾತಿ, ರಾಜ್ಯ ಉಸ್ತುವಾರಿ ದಕ್ಷರ ನೇಮಕದೊಂದಿಗೆ ಕಾಂಗ್ರೆಸ್ ಕೂಡಾ ಚುನಾವಣಾ ಕುರಿತಂತೆ ಭರ್ಜರಿ ತಯಾರಿ ನಡೆಸಿದೆ.
ಅಂತೆಯೇ ಸದಾ ಕಿಂಗ್ ಮೇಕರ್ ಭ್ರಮೆಯಲ್ಲೇ ಚುನಾವಣೆಗೆ ಹೋಗುತ್ತಿದ್ದ ಜೆಡಿಎಸ್ ಕೂಡಾ ಈಗ ತಾನೇ ಕಿಂಗ್ ಆಗಬೇಕೆಂಬ ಹೆಬ್ಬಯಕೆ ಹೊಂದಿದಂತಿದೆ. ಆದ್ದರಿಂದಲೇ ಕುಮಾರಸ್ವಾಮಿ ಯಾರೊಂದಿಗೂ ಮೈತ್ರಿ ಇಲ್ಲ ಎನ್ನುತ್ತಿದ್ದಾರೆ.
ಅಲ್ಲದೆ ಇತರೆ ಪಕ್ಷಗಳಿಗಿಂತ ಮುಂಚಿತವಾಗಿಯೇ ಅಭ್ಯರ್ಥಿಗಳ ಆಯ್ಕೆ ಕುರಿತು ಪಟ್ಟಿ ಸಿದ್ಧಪಡಿಸಿ ಸ್ಪಷ್ಟ ನಿಲುವು ಹೊಂದಿದ್ದ ಜೆಡಿಎಸ್ ಕೂಡಾ ಪಕ್ಷ ಸಂಘಟನೆ ಕುರಿತಂತೆ ಕಾರ‍್ಯಕರ್ತರ ಮೊರೆ ಹೊಗುತ್ತಿದೆ.
ಬೂತ್ ಮಟ್ಟದಿಂದ ಪ್ರಚಾರ ಕಾರ‍್ಯ ಆರಂಭಿಸಿರುವ ಜೆಡಿಎಸ್ ನಾಯಕರು ಕೂಡಾ ಬಿಜೆಪಿಯಂತೆಯೇ ಕಾರ‍್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ಅಖೈರುಗೊಳಿಸಲಾಗುವುದೆಂದು ಎನ್ನುತ್ತಿದ್ದಾರೆ.
ಅಲ್ಲದೆ ತಂತ್ರಗಾರಿಕೆಗೆ ಹೆಸರಾಗಿರುವ ದೇವೇಗೌಡರು ಪಕ್ಷ ಬಿಟ್ಟು ಹೋದವರಿಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ದೊರೆಯದಂತೆ ನಡೆಸಿರುವ ಹೋರಾಟದಲ್ಲಿ ಯಶಸ್ವಿಯಾಗುವ ಸಾಧ್ಯತೆ ಕಂಡು ಬರುತ್ತಿದೆ.
ಒಟ್ಟಾರೆ ಪ್ರಮುಖ ಮೂರೂ ಪಕ್ಷಗಳು ಯುದ್ಧ ಸನ್ನದ್ಧವಾಗುತ್ತಿರುವುದು ೨೦೧೮ರ ಚುನಾವಣೆಯು ತೀವ್ರ ಪೈಪೋಟಿಗೆ ಕಾರಣವಾಗಲಿದೆ.