ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ೧೫೦ ಕೋಟಿ ರೂ. ಕೃಷ್ಣ ಭೈರೇಗೌಡ

ಶಿವಮೊಗ್ಗ : ಕೃಷಿ ಮತ್ತು ತೋಟಗಾರಿಕಾ ವಿವಿಯ ನೂತನ ಕಟ್ಟಡ ಹಾಗೂ ಮೂಲ ಸೌಕರ್ಯಕ್ಕಾಗಿ ೧೫೦ ಕೋಟಿ ರೂ. ಮಂಜೂ ರಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಇಂದು ಸಾಗರ ತಾಲೂಕಿನ ಇರುವಕ್ಕಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕೃಷಿ ಮತ್ತು ತೋಟಗಾರಿಕೆ ವಿವಿಯ ಸುಸಜ್ಜಿತ ಕ್ಯಾಂಪಸ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಟ್ಟಡ ನಿರ್ಮಾ ಣಕ್ಕೆ ಸಂಬಂಧಿಸಿದಂತೆ ಸಂಪುಟದ ಮುಂದೆ ೨೫೦ ಕೋಟಿ ರೂ. ಪ್ರಸ್ತಾಪ ಇಡಲಾಗಿತ್ತು. ಆದರೆ ಮೊದಲ ಹಂತದಲ್ಲಿ ೧೫೦ ಕೋಟಿ ಮಂಜೂರಾಗಿದೆ ಎಂದರು.
ಎರಡನೇ ಹಂತದಲ್ಲಿ ವಿವಿ ಪೂರ್ಣ ಸೌಲಭ್ಯ ಪೂರೈಸಲಾಗುತ್ತದೆ. ಈ ವಿವಿ ಮಲೆನಾಡು ಮತ್ತು ಕರಾವಳಿ ರೈತರ ಆಗತ್ಯತೆಗಳಿಗೆ ಹೆಚ್ಚು ಸ್ಪಂದಿಸ ಲಿದೆ. ಅಲ್ಲದೆ ವಿವಿಯ ಮೂಲ ಉದ್ದೇಶವನ್ನು ರೈತರಿಗೆ ತಿಳಿಸುವಂತೆ ಕುಲಪತಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ವಿವಿಯ ಸುಸಜ್ಜಿತ ಕ್ಯಾಂಪಸ್‌ಗೆ ಬೇಕಾದಂತಹ ಜಾಗವನ್ನು ಗುರುತಿಸುವಲ್ಲಿ ಸಹಕರಿಸಿದ ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಎಲ್ಲರಿಗೂ ಧನ್ಯವಾದಗಳು ಎಂದ ಅವರು, ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ವಿವಿ ಸಹಕಾರಿಯಾಗಲಿದೆ ಎಂದರು.
ಮಲೆನಾಡಿನ ಭಾಗದ ರೈತರಿಗೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳ ರೈತರೂ ಸಹ ವಿಶ್ವವಿದ್ಯಾನಿಲಯದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದ ಅವರು, ಬದಲಾದ ಹವಾಮಾನಕ್ಕೆ ಅನುಗುಣವಾಗಿ ರೈತರಿಗೆ ಸೂಕ್ತ ಮಾರ್ಗದರ್ಶನ ವಿವಿ ಮಾಡಬೇಕೆಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಈ ಭಾಗದಲ್ಲಿ ಸ್ಥಾಪನೆಯಾಗುತ್ತಿ ರುವ ವಿವಿ ರೈತರ ಬೆಳಕಾಗಿದೆ. ಬದಲಾದ ಕಾಲದಲ್ಲಿ ರೈತರಿಗೆ ಏನು ಬೇಕೊ ಅದನ್ನು ಸಾಧಿಸಬೇಕು ಎಂಬುದು ನನ್ನ ಬಯಕೆ. ಅದು ಇಂದು ಈಡೇರಿದೆ ಎಂದರು.
ಕೃಷಿ ಸಚಿವರಾಗಿ ಕೃಷ್ಣ ಭೈರೇಗೌಡ ಸಾಕಷ್ಟು ಸಾಧನೆ ಮಾಡಿದ್ದಾರೆ. ತಮ್ಮ ಇಲಾಖೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮತ್ತು ಹೊಸ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಅವರ ಕಾರ್ಯ ವೈಖರಿ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೀಜ ತಾಯಿಯಿದ್ದಂತೆ. ರೈತರಿಗೆ ಹೊಸ ತಳಿ ಬೀಜ ಸಂಶೋಧನೆ ಮಾಡಿ. ಸಾಂಪ್ರದಾಯಿಕ ಬೀಜ ಗಳನ್ನು ಪುನಃ ಸಂಶೋಧಿಸಬೇಕು. ಕೃಷಿ ನಮ್ಮ ಬದುಕಾಗಿದೆ. ಇದರಲ್ಲೇ ನಾವು ಸಾಧಿಸಬೇಕು. ಇದು ಈ ವಿವಿ ಯಿಂದ ಆಗಬೇಕು ಎಂದರು.
ಕೃಷಿಗೆ ಹೊಸ ಆಯಾಮ ಸಿಗಬೇಕು. ರೈತರಿಗೆ ಹೊಸ ಸಂಸ್ಕೃತಿ ಕೊಡಿ. ಈ ವಿವಿ ಕೃಷಿಕರಿಗೆ ಶಾಲೆ ಯಾಗಿರ ಬೇಕು ಎಂದ ಅವರು, ರೈತರು ಕೂಡ ತಮ್ಮ ವೈಖರಿ ಬದಲಿಸಿಕೊಳ್ಳಬೇಕಾಗಿದೆ. ಅವ ರನ್ನು ಬದಲಿಸುವ ಕಾರ್ಯವನ್ನು ವಿವಿ ಮಾಡಬೇಕು. ಆ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜ್ಯೋತಿ ಎಸ್.ಕುಮಾರ್, ವೇದಾ ವಿಜಯ್‌ಕುಮಾರ್, ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಮಧುಸೂದನ್ ಮೊದಲಾದವರಿದ್ದರು.